ಬೆಂಗಳೂರಿನಲ್ಲಿ ಗ್ರಾಹಕಿಯ ಸೋಗಿನಲ್ಲಿ ಜ್ಯುವೆಲರಿ ಅಂಗಡಿಗೆ ಭೇಟಿ ನೀಡಿ, ಚಾಣಾಕ್ಷತನದಿಂದ ಚಿನ್ನದ ಉಂಗುರಗಳನ್ನು ಕದ್ದು ತನ್ನ ಬೆರಳಲ್ಲೇ ಹಾಕಿಕೊಂಡು ಪರಾರಿಯಾಗಿದ್ದ ಯುವತಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಆಕೆಯಿಂದ ಸುಮಾರು 1 ಲಕ್ಷ ಮೌಲ್ಯದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು (ಏ.19): ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ರೀತಿಯ ಕ್ರೈಂ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಕಳ್ಳತನದಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಜ್ಯುವೆಲರಿ ಅಂಗಡಿಯಲ್ಲಿ ಗ್ರಾಹಕಿಯಂತೆ ಬಂದು ಚಿನ್ನದ ಉಂಗುರಗಳನ್ನು ಎಗರಿಸುತ್ತಿದ್ದ 'ಖತರ್ನಾಕ್ ಲೇಡಿ'ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಯಾರು?
ಬಂಧಿತ ಆರೋಪಿಯನ್ನು 24 ವರ್ಷದ ಆಕಾಂಶ ಎಂದು ಗುರುತಿಸಲಾಗಿದೆ. ಈಕೆ ನಗರದ ಲೇಡೀಸ್ ಪಿಜಿಯೊಂದರಲ್ಲಿ ವಾಸವಿದ್ದಳು ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ಸುಶಿಕ್ಷಿತೆಯಂತೆ ಕಾಣುತ್ತಿದ್ದ ಈ ಯುವತಿ, ಜ್ಯುವೆಲರಿ ಶಾಪ್‌ಗಳಿಗೆ ಹೋಗಿ ಆಭರಣಗಳನ್ನು ಖರೀದಿಸುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದಳು.
ಕದ್ದ ಉಂಗುರ ಬೆರಳಲ್ಲೇ ಇತ್ತು!
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ್ದ ಆಕಾಂಶ, ಅಲ್ಲಿ ಉಂಗುರಗಳನ್ನು ತೋರಿಸುವಂತೆ ಕೇಳಿದ್ದಾಳೆ. ಅಂಗಡಿಯವರು ಉಂಗುರಗಳನ್ನು ತೋರಿಸುವ ವೇಳೆ ನೌಕರರ ಗಮನ ಬೇರೆಡೆ ಸೆಳೆದು, ಚಾಣಾಕ್ಷತನದಿಂದ ಸುಮಾರು 6 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳನ್ನು ಎಗರಿಸಿದ್ದಾಳೆ. ವಿಶೇಷವೆಂದರೆ, ಕದ್ದ ಉಂಗುರಗಳನ್ನು ಈಕೆ ಬೇರೆಲ್ಲೂ ಅಡಗಿಸಿಡದೆ, ತನ್ನ ಕೈ ಬೆರಳುಗಳಿಗೆ ಹಾಕಿಕೊಂಡು ಯಾರೂ ಗಮನಿಸದಂತೆ ಅಂಗಡಿಯಿಂದ ಹೊರಬಂದಿದ್ದಾಳೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಲಾಡಿ ಯುವತಿಯ ಆಟ
ಆರೋಪಿ ಯುವತಿ ಹೋದ ಬಳಿಕ ಸ್ಟಾಕ್ ಚೆಕ್ ಮಾಡಿದ ಅಂಗಡಿಯ ಮಾಲೀಕರಿಗೆ ಎರಡು ಉಂಗುರಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ತಕ್ಷಣವೇ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ, ಆಕಾಂಶ ಎಂಬ ಯುವತಿ ಉಂಗುರಗಳನ್ನು ಕದ್ದು ತನ್ನ ಬೆರಳಿಗೆ ಹಾಕಿಕೊಳ್ಳುತ್ತಿರುವ ದೃಶ್ಯ ಸ್ಪಷ್ಟವಾಗಿ ಕಂಡುಬಂದಿದೆ. ಕೂಡಲೇ ಮಾಲೀಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರ ಮಿಂಚಿನ ಕಾರ್ಯಾಚರಣೆ
ದೂರು ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ತನಿಖೆ ಕೈಗೊಂಡು ಆರೋಪಿ ಆಕಾಂಶಳನ್ನು ಬಂಧಿಸಿದ್ದಾರೆ. ಬಂಧಿತಳಿಂದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 6 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳನ್ನು ಜಪ್ತಿ ಮಾಡಲಾಗಿದೆ. ಲೇಡೀಸ್ ಪಿಜಿಯಲ್ಲಿ ವಾಸವಿದ್ದ ಈಕೆ ಈ ಹಿಂದೆಯೂ ಇಂತಹ ಕೃತ್ಯಗಳನ್ನು ಎಸಗಿದ್ದಾಳೆಯೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಸ್ತುತ ಆರೋಪಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜ್ಯುವೆಲರಿ ಅಂಗಡಿ ಮಾಲೀಕರು ಸದಾ ಜಾಗರೂಕರಾಗಿರಬೇಕು ಮತ್ತು ಇಂತಹ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇಡಬೇಕು ಎಂದು ಪೊಲೀಸರು ಈ ಮೂಲಕ ತಿಳಿಸಿದ್ದಾರೆ.


