ಬೆಂಗಳೂರಿನಲ್ಲಿ ಜಾತ್ರೆ ಮತ್ತು ದೇವಾಲಯಗಳಲ್ಲಿ ಜೇಬುಗಳ್ಳತನ ಮಾಡುತ್ತಿದ್ದ ದಂಪತಿಯನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ತನ್ನ ಮೇಲೆ ಅನುಮಾನ ಬಾರದಿರಲು ಆರೋಪಿ ಮಹಿಳೆ ಪ್ರತಿ ತಿಂಗಳು ಮೇಕಪ್‌ಗಾಗಿ 5 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಳು.
ಬೆಂಗಳೂರು (ಜ.29): ಅಂದವಾಗಿ ಮೇಕಪ್ ಮಾಡಿಕೊಂಡು ಮಿರಮಿರ ಮಿಂಚುವ ದಿರಿಸು ಧರಿಸಿ ಜಾತ್ರೆ ಹಾಗೂ ದೇವಾಲಯಗಳಿಗೆ ತೆರಳಿ ಜೇಬುಗಳ್ಳತನ ಮಾಡುತ್ತಿದ್ದ ಸುಂದರಿ ಹಾಗೂ ಆಕೆಯ ಪತಿ ಬೆಂಗಳೂರಿನ ಕೆ.ಆರ್.ಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಈಕೆ ಪ್ರತಿ ತಿಂಗಳು ಮೇಕಪ್‌ಗೇ 5 ಲಕ್ಷ ರು. ವೆಚ್ಚ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಈಕೆಯ ಮೇಕಪ್ ಕತೆಗೆ ಪೊಲೀಸರೇ ಬೆಚ್ಚುಬಿದ್ದಿದ್ದಾರೆ.
ಕಮ್ಮಸಂದ್ರ ಬಳಿಯ ಸಂಪಿಗೆ ನಗರದ ಗಾಯತ್ರಿ ಹಾಗೂ ಶ್ರೀಕಾಂತ್ ಬಂಧಿತರಾಗಿದ್ದು, ಆರೋಪಿಗಳಿಂದ 60 ಲಕ್ಷ ರು. ಮೌಲ್ಯದ 398 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ದೇವಸಂದ್ರದ ಮಾರಿಯಮ್ಮ ದೇವಾಲಯಕ್ಕೆ ತೆರಳಿದ್ದಾಗ ಕುವೆಂಪು ಲೇಔಟ್‌ನ ಲಕ್ಷ್ಮಮ್ಮ ಅವರ 30 ಚಿನ್ನದ ಸರ ಕಳವಾಗಿತ್ತು. ಈ ಕೃತ್ಯದ ತನಿಖೆಗಿಳಿದ ಇನ್ಸ್‌ಪೆಕ್ಟರ್ ಬಿ. ರಾಮಮೂರ್ತಿ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಖದೀಮ ದಂಪತಿಯನ್ನು ಬಂಧಿಸಿದೆ.
ಪಾತ್ರೆ ವ್ಯಾಪಾರಿ ದಂಪತಿ ಈಗ ಕಳ್ಳರು
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರದ ಚಿಕ್ಕೆ ಹೆರೂರಿನ ಪೈಲ್ವಾನ್ ಕಾಲೋನಿಯ ಗಾಯಿತ್ರಿ ಹಾಗೂ ಶ್ರೀಕಾಂತ್ ವಿವಾಹವಾಗಿದ್ದು, ಈ ದಂಪತಿ ಕಮ್ಮಸಂದ್ರದ ಸಮೀಪ ನೆಲೆಸಿತ್ತು. ಮೊದಲು ಕೂದಲು ಹಾಗೂ ಪಾತ್ರೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸತಿ-ಪತಿ, ಐಷಾರಾಮಿ ಜೀವನದೆಡೆ ಆಕರ್ಷಿತರಾಗಿ ಹಾದಿ ತಪ್ಪಿದ್ದಾರೆ. ಬಳಿಕ ಬಿಎಂಟಿಸಿ ಬಸ್‌ಗಳು, ಜಾತ್ರೆ, ದೇವಾಲಯ ಹಾಗೂ ಸಂತೆಗಳಲ್ಲಿ ಜೇಬುಗಳ್ಳತನಕ್ಕಿಳಿದಿದ್ದರು. ಈ ದಂಪತಿ ವಿರುದ್ಧ ಹುಣಸೂರು, ಚಿಕ್ಕಬಳ್ಳಾಪುರ, ಚನ್ನರಾಯಪಟ್ಟಣ, ತಿರುಮಾನಿ ಹಾಗೂ ದೊಡ್ಡಬಳ್ಳಾಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ದಂಪತಿ ಜೈಲೂಟ ಸಹ ಸವಿದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಮೇಕಪ್ ಮಾಡಿ ಹೋದ್ರೆ ಅನುಮಾನ ಬರ್ತಿರಲಿಲ್ಲ: ಕಿಸೆಗಳ್ಳಿಯ ಮಾತು!
ತನ್ನ ಮೇಲೆ ಶಂಕೆ ಬಾರದಂತೆ ಎಚ್ಚರಿಕೆ ವಹಿಸಿದ್ದ ಗಾಯತ್ರಿ, ಅಂದವಾಗಿ ಮೇಕಪ್ ಮಾಡಿಕೊಂಡು ಮಿರಮಿರ ಮಿಂಚುವ ದಿರಿಸು ಧರಿಸಿ ಹೋಗುತ್ತಿದ್ದಳು. ಆಕೆಯ ಪ್ರತಿ ತಿಂಗಳ ಮೇಕಪ್ ಖರ್ಚು ವೆಚ್ಚಕ್ಕೆ 4 ರಿಂದ 5 ಲಕ್ಷ ರು. ವ್ಯಯವಾಗಿದೆ. ವಿಚಾರಣೆ ವೇಳೆ ತನಗೆ ಮೇಕಪ್ ಇಲ್ಲದೆ ಹೋದರೆ ಆಗಲ್ಲ. ನಾನು ದೇಹ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ಚೆನ್ನಾಗಿ ಕಾಣುವಂತೆ ದುಬಾರಿ ಬೆಲೆಯ ಸೀರೆ ಹಾಕಿಕೊಂಡು ದೇವಾಲಯ ಹಾಗೂ ಜಾತ್ರೆಗಳಿಗೆ ಹೋದರೆ ಯಾರೊಬ್ಬರಿಗೂ ಅನುಮಾನ ಬರುತ್ತಿರಲಿಲ್ಲ. ಇದರಿಂದ ಒಡವೆ ಧರಿಸಿದ ಮಹಿಳೆಯರ ಸನಿಹಕ್ಕೆ ಹೋಗಿ ಕಳ್ಳತನ ಎಸಗಲು ಅನುಕೂಲವಾಗುತ್ತಿತ್ತು ಎಂದು ಗಾಯತ್ರಿ ಹೇಳಿಕೆ ನೀಡಿದ್ದಾಳೆ.


