Asianet Suvarna News Asianet Suvarna News

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕರೆಂಟ್‌ ತಗುಲಿ ಮೃತಪಟ್ಟ ತಾಯಿ-ಮಗುವಿನ ಅಂತ್ಯಕ್ರಿಯೆಗೂ ಮೊದಲೇ ಆರೋಪಿಗಳ ಬಿಡುಗಡೆ!

ಬೆಂಗಳೂರಿನಲ್ಲಿ ನಿನ್ನೆ ತಾಯಿ- ಮಗು ಸಾವಿಗೆ ಕಾರಣವಾದ ಬೆಸ್ಕಾಂನ 5 ಅಧಿಕಾರಿಗಳು ಮೃತರ ಅಂತ್ಯಕ್ರಿಯೆಗೂ ಮೊದಲೇ (24 ಗಂಟೆಗಳಲ್ಲಿ) ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. 

Bengaluru mother and daughter died due to electric shock but accused Bescom Officers released sat
Author
First Published Nov 20, 2023, 4:25 PM IST | Last Updated Nov 21, 2023, 10:33 AM IST

ಬೆಂಗಳೂರು (ನ.20): ಬೆಂಗಳೂರಿನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ವೈಟ್‌ ಫೀಲ್ಡ್‌ ಸಮೀಪದ ಓಫಾರ್ಮ್‌ ಸರ್ಕಲ್‌ ಬಳಿ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದರೂ ಬೆಸ್ಕಾಂ ಸಿಬ್ಬಂದಿ ದುರಸ್ತಿಗೊಳಿಸದೇ ನಿರ್ಲಕ್ಷ್ಯ ಮಾಡಿದ್ದರಿಂದ ತಾಯಿ ಹಾಗೂ 9 ತಿಂಗಳ ಮಗು ವಿದ್ಯುತ್‌ ತಂತಿ ತುಳಿದು ದಾರುಣ ಸಾವನ್ನಪ್ಪಿದ್ದರು. ಈ ದುರ್ಘಟನೆಗೆ 5 ಜನ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಪೊಲೀಸರು ಬಂಧಿಸಿದ್ದರು. ಮೃತ ತಾಯಿ- ಮಗುವಿನ ಅಂತ್ಯಕ್ರಿಯೆ ನೆರವೇರಿದೆಯೋ ಇಲ್ಲವೋ ಗೊತ್ತಿಲ್ಲ, ಆದ್ರೆ ಕೇವಲ 24 ಗಂಟೆಗಳಲ್ಲಿ ಬಂಧಿತ ಅಧಿಕಾರಿಗಳು ಜಾಮೀನು ಮೇಲೆ ಹೊರಗೆ ಬಂದಿದ್ದಾರೆ.

ಇಡೀ ಬೆಂಗಳೂರು ಭಾನುವಾರ ಬೆಳ್ಳಂಬೆಳಗ್ಗೆ ಮಮ್ಮಲ ಮರುಗುವಂತಹ ಘಟನೆ ವೈಟ್‌ಫೀಲ್ಡ್‌ನಲ್ಲಿ ನಡೆದಿತ್ತು. ತಾವಾಯ್ತು, ತಮ್ಮ ಜೀವನವಾಯ್ತು ಎಂದು ತಮ್ಮ ಪಾಡಿಗಿದ್ದ ಕುಟುಂಬ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬಲಿಯಾಗಿ ಹೋಗಿತ್ತು. ತಮಿಳುನಾಡಿನಲ್ಲಿರುವ ತನ್ನ ತಾಯಿ ಮನೆಗೆ ಗಂಡ-ಮಗುವಿನೊಂದಿಗೆ ಹೋಗಿದ್ದಳು. ಶನಿವಾರ ಬಸ್‌ ಹತ್ತಿಕೊಂಡು ಬೆಂಗಳೂರಿನ ವೈಟ್‌ಫೀಲ್ಡ್ಗೆ ಬಂದು ಭಾನುವಾರ ಬೆಳ್ಳಂಬೆಳಗ್ಗೆ ಇಳಿದಿದ್ದಾಳೆ. ಗಂಡ, ಹೆಂಡತಿ ಹಾಗೂ ಆಕೆಯ ಕಂಕಳಲ್ಲಿ 9 ತಿಂಗಳ ಮಗುವೊಂದಿತ್ತು. ಮುಂಜಾವಿನಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದರು. ಕೂಡಲೇ ಕರೆಂಟ್‌ ಶಾಕ್‌ನಿಂದ ಕುಸಿದು ಪುನಃ ತಂತಿ ಮೇಲೆ ಬಿದ್ದ ತಾಯಿ ಹಾಗೂ ಮಗುವಿನ ಜೀವವನ್ನು ವಿದ್ಯುತ್‌ ತೆಗೆದಿದ್ದಲ್ಲದೇ ಅವರನ್ನು ಸುಟ್ಟು ಕರಕಲಾಗುವಂತೆ ಮಾಡಿತ್ತು. 

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಣಂತಿ ತಾಯಿ, 9 ತಿಂಗಳ ಹಸುಗೂಸು ಬಲಿ: ಹೆಂಡ್ತಿ-ಮಗು ಜೀವ ಹೋಗ್ತಿದ್ರೂ ರಕ್ಷಿಸಲಾಗಲಿಲ್ಲ

ಇನ್ನು ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕಾಡುಗೋಡಿ ಪೊಲೀಸರು, ಕರೆಂಟ್ ವೈರ್ ತಗುಲಿ ತಾಯಿ ಮಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (ಬೆಸ್ಕಾಂ) ಅಧಿಕಾರಿಗಳನ್ನು ಬಂಧಿಸಿದ್ದರು. ಆದರೆ, ಈ ಲಜ್ಜೆಗೆಟ್ಟ ಅಧಿಕಾರಿಗಳು ತಾಯಿ- ಮಗುವಿನ ಸಾವಿಗೆ ಕಾರಣವಾಗಿದ್ದೇವೆಂಬ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೇ ಸಂಜೆ ಆಗುವಷ್ಟರಲ್ಲಿಯೇ ಪೊಲೀಸರ ಬಂಧನದಿಂದ ಹೊರಗೆ ಬರುವುದಕ್ಕಾಗಿ ತಮ್ಮ ಅಧಿಕಾರದ ಪ್ರಭಾವವನ್ನು ಬಳಸಿ ಜಾಮೀನು ಪಡೆಯುವುದಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಇನ್ನು ಬೆಸ್ಕಾಂನ ಐವರು ಅಧಿಕಾರಿಗಳ ಜಾಮೀನು ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಸ್ಟೇಷನ್ ಜಾಮೀನು ನೀಡಿದೆ. ಇಲ್ಲಿ ಹೆಂಡತಿ ಹಾಗೂ ತನ್ನ ಕರುಳ ಕುಡಿ 9 ತಿಂಗಳ ಮಗುವಿನ ಜೀವವು ಕಣ್ಣ ಮುಂದೆ ಹೋಗುತ್ತಿದ್ದರೂ ಅವರನ್ನು ಬದುಗಿಸಿಕೊಳ್ಳಲಾಗದೇ ಪರದಾಡಿದ ಗಂಡ ಅಳುವುದನ್ನೂ ನಿಲ್ಲಿಸಿಲ್ಲ. ಇನ್ನು ಮೃತಪಟ್ಟ ತಾಯಿ- ಮಗುವಿನ ಅಂತ್ಯಕ್ರಿಯೆ ಮುಗಿದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬಂಧನವಾಗಿ 24 ಗಂಟೆಯೊಳಗೆ ಕರ್ತವ್ಯದ ನಿರ್ಲಕ್ಷ್ಯಕ್ಕೆ ಜೀವವನ್ನೇ ಬಲಿ ಪಡೆದ ಬೆಸ್ಕಾಂ ಅಧಿಕಾರಿಗಳು ಮಾತ್ರ ಜೈಲಿನಿಂದ ಹೊರಬಂದು ತಮ್ಮ ಕುಟುಂಬದೊಂದಿಗೆ ನೆಮ್ಮದಿಯಿಂದಿದ್ದಾರೆ. 

ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿ ಮತ್ತೆ ಅರೆಸ್ಟ್‌: 2ನೇ ಪೋಕ್ಸೋ ಕೇಸ್‌ನಲ್ಲಿ ಬಂಧನ

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹೇಗೆ..? 
ಬೆಸ್ಕಾಂ ಅಧಿಕಾರಿಗಳಿಂದ ಬೇಕಂತಲೇ ನಿರ್ಲಕ್ಷ್ಯದಿಂದ ಆಗಿರೋದು ಬೆಳಕಿಗೆ ಬಂದಿದೆ. ತುರ್ತು ಪರಿಸ್ಥಿತಿಯಲ್ಲಿ ಕರೆಂಟ್ ಗೆ ಸಂಬಂಧಿಸಿದಂತೆ ಯಾವುದೇ ಸ್ಥಳಿಯರ ಮಾಹಿತಿಯ ಅವಶ್ಯಕತೆಯಿಲ್ಲ. ವಿದ್ಯುತ್‌ ಲೈನ್‌ಗಳಲ್ಲಿ ಎಲ್ಲಿಯಾದರೂ ಸಮಸ್ಯೆ ಆಗುತ್ತಿದ್ದಂತೆ ಮೇನ್ ಜಂಕ್ಷನ್ ನಲ್ಲಿ ವಿದ್ಯುತ್‌ ಸ್ವಯಂಚಾಲಿತವಾಗಿ ಕಡಿತ (ಡ್ರಿಪ್) ಆಗತ್ತದೆ. ಕೂಡಲೇ ಬೆಸ್ಕಾಂ ಲೈನ್ ಮೆನ್ ಗಳು ಪರಿಶೀಲನೆ ಮಾಡಿ ಅಗತ್ಯವಿದ್ದಲ್ಲಿ ದುರಸ್ತಿಗೊಳಿಸಬೇಕು.ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದನ್ನು ಬೆಸ್ಕಾಂ ಸಿಬ್ಬಂದಿಯಾಗಲೀ ಅಥವಾ ಲೈನ್‌ಮೆನ್‌ಗಳಾಗಲೀ ಸ್ಥಳ ಪರಿಶೀಲನೆ ನಡೆಸದೇ, ಬೇಜವಬ್ದಾರಿಯಿಂದ ಪುನಃ ಡ್ರಿಪ್ ಆಗಿರುವ ಕರೆಂಟ್ ಅನ್ನು ರಿಚಾರ್ಜ್ ಮಾಡಿದ್ದಾರೆ. ಆದರೆ, ಅದೇ ಮಾರ್ಗದಲ್ಲಿ ಬಂದ ತಾಯಿ ಮಗು ತುಂಡಾಗಿ ಬಿದ್ದಿದ್ದ ತಂತಿ ತುಳಿದು ಜೀವ ಬಿಟ್ಟಿದ್ದರು.

Latest Videos
Follow Us:
Download App:
  • android
  • ios