ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಣಂತಿ ತಾಯಿ, 9 ತಿಂಗಳ ಹಸುಗೂಸು ಬಲಿ: ಹೆಂಡ್ತಿ-ಮಗು ಜೀವ ಹೋಗ್ತಿದ್ರೂ ರಕ್ಷಿಸಲಾಗಲಿಲ್ಲ
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಬಸ್ ಇಳಿದು 9 ತಿಂಗಳ ಹಸುಗೂಸನ್ನು ಕಂಕಳಲ್ಲಿ ಎತ್ತಿಕೊಂಡು ಹೋಗುತ್ತಿದ್ದ ತಾಯಿ-ಮಗುವನ್ನು ಬೆಸ್ಕಾಂ ಸಿಬ್ಬಂದಿ ಶಿವನ ಪಾದಕ್ಕೆ ಸೇರಿಸಿದ್ದಾರೆ.
ಬೆಂಗಳೂರು (ನ.19): ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಬಸ್ ಇಳಿದು 9 ತಿಂಗಳ ಹಸುಗೂಸನ್ನು ಕಂಕಳಲ್ಲಿ ಎತ್ತಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ತಾಯಿ-ಮಗುವನ್ನು ಬೆಸ್ಕಾಂ ಸಿಬ್ಬಂದಿ ಶಿವನ ಪಾದಕ್ಕೆ ಸೇರಿಸಿದ್ದಾರೆ.
ಬೆಂಗಳೂರಿನಲ್ಲಿ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಣಂತಿ ತಾಯಿ ಹಾಗೂ ಆಕೆಯ ಕಂಕಳಲ್ಲಿದ್ದ 9 ತಿಂಗಳ ಮಗು ವಿದ್ಯುತ್ ತಂತಿ ತುಳಿದು ಸುಟ್ಟು ಕರಕಲಾಗಿದ್ದಾರೆ. ಹೆಂಡ್ತಿ- ಮಗು ಪ್ರಾಣ ಹೋಗುತ್ತಿದ್ದರೂ ಕೈ ಹಿಡಿದು ಕಾಪಾಡಲಾಗದೇ ದಯನೀಯ ಸ್ಥಿತಿಯಲ್ಲಿ ಗಂಡ ಗೋಳಾಡಿದ ಸ್ಥಿತಿ ಕರುಳನ್ನು ಹಿಂಡುವಂತಿತ್ತು. ಜನರು ಓಡಾಡುವ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಆದರೆ, ಇದನ್ನು ನೋಡದೇ ಅಮಾಯಕ ಬಾಣಂತಿ ತಾಯಿ ಹಾಗೂ ಜಗತ್ತಿನ ಪರಿಜ್ಞಾನವೇ ಇಲ್ಲದೆ ಅಮ್ಮನ ಕಂಕಳಲ್ಲಿ ನಿದ್ರಿಸುತ್ತಿದ್ದ ಹಸುಗೂಸು ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಕಾರುಣ್ಯ ಟ್ರಸ್ಟ್‌ನ ಮೂವರು ಮುಳುಗಿ ಸಾವು!
ವೈಟ್‌ಫೀಲ್ಡ್‌ನ ಈಫಾರ್ಮ್ ವೃತ್ತದ ಬಳಿ ಹಲವು ದಿನಗಳಿಂದ ದುರಸ್ತಿಗೆ ಬಂದಿದ್ದ ತಂತಿಯನ್ನು ಸ್ಪಾರ್ಕ್ ಆಗುತ್ತಿದ್ದು, ತೆರವುಗೊಳಿಸಿ ಹೊಸ ತಂತಿಯನ್ನು ಹಾಕುವಂತೆ ಬೆಸ್ಕಾಂ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದರಂತೆ. ಆದರೆ, ಬೆಸ್ಕಾಂ ಸಿಬ್ಬಂದಿ ಮಾತ್ರ ಕ್ಯಾರೇ ಎನ್ನದೇ ತಮ್ಮ ನಿರ್ಲಕ್ಷ್ಯ ಮುಂದುವರೆಸಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ. ಯಾರದ್ದಾದರೂ ಮನೆಯ ಮುಂದಿನ ವಿದ್ಯುತ್ ಸಮಸ್ಯೆಯಾಗಿದ್ದರೆ ಅವರ ಮನೆಗೆ ಹೋಗಿ ದುರಸ್ತಿ ಮಾಡಿ ಒಂದಿಷ್ಟು ಹಣವನ್ನು ವಸೂಲಿ ಮಾಡಿಕೊಂಡು ಬರುತ್ತಿದ್ದರು. ಆದರೆ, ರಸ್ತೆ ಬದಿಯ ಬೀದಿಯಲ್ಲಿ ತಂತಿ ದುರಸ್ತಿ ಬಂದಿದೆ ಎಂದು ದೂರು ಕೊಟ್ಟಾಗ ಅದನ್ನು ದುರಸ್ತಿ ಮಾಡಿದರೂ ಯಾರಿಂದಲೂ ಹಣ ಸಿಗುವುದಿಲ್ಲ. ಹೀಗಾಗಿ, ಜನರು ದೂರು ನೀಡಿದ್ದಾಗ್ಯೂ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಮಾಡಿರಬಹುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲತಃ ಬೆಂಗಳೂರಿನಲ್ಲಿ ನಿವಾಸಿಯಾಗಿದ್ದ ಸೌಂದರ್ಯ ಅವರು ತಮ್ಮ ಪತಿ ಸಂತೋಷ್ ಮತ್ತು ಮಗುವಿನೊಂದಿಗೆ ತಮಿಳುನಾಡಿನ ತಾಯಿ ಮನೆಗೆ ಹೋಗಿದ್ದರು. ಶನಿವಾರ ರಾತ್ರಿ ಅವರು ಅಲ್ಲಿಂದ ಹೊರಟು ಬೆಳಗ್ಗೆ ಬೆಂಗಳೂರಿನ ವೈಟ್ ಫೀಲ್ಡ್ ತಲುಪಿದ್ದಾರೆ. ಬೆಳಗ್ಗೆ 5 ಗಂಟೆಯಾಗಿದ್ದರಿಂದ ನಿದ್ದೆಗಣ್ಣಿನಲ್ಲಿಯೇ ಸಂತೋಷ್ ಹಾಗೂ ಆತನ ಪತ್ನಿ ಸೌಂದರ್ಯ ಪುಟ್ಟ ಮಗುವನ್ನು ಎತ್ತಿಕೊಂಡು ಕೆಳಗಿಳಿದಿದ್ದಾರೆ. ವೈಟ್ ಫೀಲ್ಡ್ ಬಳಿಯ ಬಸ್ ನಿಲುಗಡೆ ಸ್ಥಳದಿಂದ ಕೊಂಚ ದೂರದಲ್ಲಿದ್ದ ಓಫಾರ್ಮ್ ಸರ್ಕಲ್ ಬಳಿ ಮನೆ ಕಡೆಗೆ ಸಾಗುತ್ತಿದ್ದರು. ಸಂತೋಷ್ ರಸ್ತೆಯ ಮೇಲೆ ಬಂದರೆ, ಮಹಿಳೆ ಸೌಂದರ್ಯ ಮಗುವನ್ನು ಕಂಕಳಲ್ಲಿ ಎತ್ತಿಕೊಂಡು ಪಾದಚಾರಿ ಮಾರ್ಗದಲ್ಲಿ ಬರುತ್ತಿದ್ದರು. ಆದರೆ, ಪಾದಚಾರಿ ಮಾರ್ಗದಲ್ಲಿ ಯಮ ಸ್ವರೂಪಿಯಾಗಿ ಬಿದ್ದಿದ್ದ ವಿದ್ಯುತ್ ತಂತಿಯು ತಾಯಿ ಮಗುವನ್ನು ಕ್ಷಣಾರ್ಧದಲ್ಲಿಯೇ ಇಹಲೋಕ ತ್ಯಜಿಸುವಂತೆ ಮಾಡಿದೆ. ತನ್ನ ಹೆಂಡತಿ ಹಾಗೂ ಮಗು ವಿದ್ಯುತ್ ತಂತಿಗೆ ಸಿಲುಕಿ ಸುಟ್ಟು ಹೋಗುತ್ತಿದ್ದರೂ ಕೈ ಹಿಡಿದು ರಕ್ಷಣೆ ಮಾಡಲಾಗದ ಅಸಾಹಾಯಕ ಹಾಗೂ ಕರುಳು ಹಿಂಡುವ ದೃಶ್ಯಕ್ಕೆ ಆಕೆಯ ಗಂಡ ಸಾಕ್ಷಿಯಾಗಿದ್ದಾನೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹೇಗೆ..?
ಬೆಸ್ಕಾಂ ಅಧಿಕಾರಿಗಳಿಂದ ಬೇಕಂತಲೇ ನಿರ್ಲಕ್ಷ್ಯದಿಂದ ಆಗಿರೋದು ಬೆಳಕಿಗೆ ಬಂದಿದೆ. ತುರ್ತು ಪರಿಸ್ಥಿತಿಯಲ್ಲಿ ಕರೆಂಟ್ ಗೆ ಸಂಬಂಧಿಸಿದಂತೆ ಯಾವುದೇ ಸ್ಥಳಿಯರ ಮಾಹಿತಿಯ ಅವಶ್ಯಕತೆಯಿಲ್ಲ. ವಿದ್ಯುತ್ ಲೈನ್‌ಗಳಲ್ಲಿ ಎಲ್ಲಿಯಾದರೂ ಸಮಸ್ಯೆ ಆಗುತ್ತಿದ್ದಂತೆ ಮೇನ್ ಜಂಕ್ಷನ್ ನಲ್ಲಿ ವಿದ್ಯುತ್ ಸ್ವಯಂಚಾಲಿತವಾಗಿ ಕಡಿತ (ಡ್ರಿಪ್) ಆಗತ್ತದೆ. ಕೂಡಲೇ ಬೆಸ್ಕಾಂ ಲೈನ್ ಮೆನ್ ಗಳು ಪರಿಶೀಲನೆ ನಡೆಸಬೇಕು. ಎಲ್ಲಿಯಾದರೂ ತಂತಿ ತುಂಡಾಗಿ ಬಿದ್ದಲ್ಲಿ ಅಥವಾ ಮರಗಳ ತುಂಡು ತಂತಿಯ ಮೇಲೆ ಬಿದ್ದಲ್ಲಿ ಅದನ್ನು ತೆರವುಗೊಳಿಸಿ, ಅಗತ್ಯವಿದ್ದಲ್ಲಿ ದುರಸ್ತಿಗೊಳಿಸಬೇಕು.
ಆದರೆ, ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಮೇನ್ ಜಂಕ್ಷನ್‌ನಲ್ಲಿ ವಿದ್ಯುತ್ ಡ್ರಿಪ್ ಆಗಿದ್ದರೂ ಬೆಸ್ಕಾಂ ಸಿಬ್ಬಂದಿಯಾಗಲೀ ಅಥವಾ ಲೈನ್‌ಮೆನ್‌ಗಳಾಗಲೀ ಸ್ಥಳ ಪರಿಶೀಲನೆ ನಡೆಸಿಲ್ಲ. ಬೆಳ್ಳಂಬೆಳಗ್ಗೆ ಯಾರು ಕಚೇರಿಯಿಂದ ಹೊರ ಹೋಗದೆ ಬೇಜವಬ್ದಾರಿಯಿಂದ ಪುನಃ ಡ್ರಿಪ್ ಆಗಿರುವ ಕರೆಂಟ್ ಅನ್ನು ರಿಚಾರ್ಜ್ ಮಾಡಿದ್ದಾರೆ. ಹೀಗಾಗಿ, ತುಂಡಾಗಿ ಬಿದ್ದಿದ್ದ ತಂತಿಯಲ್ಲಿ ಪುನಃ ವಿದ್ಯುತ್ ಸಂಪರ್ಕ ಬಂದಿದೆ. ಆದರೆ, ಇದ್ಯಾವ ಮಾಹಿತಿಯೂ ಇಲ್ಲದೇ ತಂತಿಯನ್ನು ತುಳಿದ ತಾಯಿ ಕಂಕಳಲ್ಲಿದ್ದ ಮಗುವಿನ ಸಮೇತ ಜೀವ ಬಿಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.