ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಿದೆ. ಈ ಪರಿಷ್ಕೃತ ದರವು ಫೆ. 9ರಿಂದ ಜಾರಿಗೆ ಬರಲಿದ್ದು, ಕನಿಷ್ಠ ₹1 ರಿಂದ ಗರಿಷ್ಠ ₹5 ರವರೆಗೆ ದರ ಹೆಚ್ಚಳವಾಗಿದೆ. ಈ ಮೂಲಕ ಕನಿಷ್ಠ ದರ ₹11 ಮತ್ತು ಗರಿಷ್ಠ ದರ ₹95 ಆಗಲಿದೆ.

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವು ಶೇ. 5ರಷ್ಟು (ಕನಿಷ್ಠ ₹1 - ಗರಿಷ್ಠ ₹5) ಹೆಚ್ಚಳವಾಗಿದೆ. ಜತೆಗೆ ಪಾಸ್‌ಗಳ ಬೆಲೆಯನ್ನೂ ಹೆಚ್ಚಿಸಲಾಗಿದ್ದು, ಪರಿಷ್ಕೃತ ಏರಿಕೆಯು ಫೆ.9ರಿಂದ ಜಾರಿಗೆ ಬರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮೆಟ್ರೋ ರೈಲ್ವೇಸ್ ಕಾಯ್ದೆ 2002ರ ಅಡಿಯಲ್ಲಿ ರಚಿತವಾದ ದರ ನಿಗದಿ ಸಮಿತಿ ಪ್ರಕಾರ ವಾರ್ಷಿಕ ದರ ಪರಿಷ್ಕರಣೆ ಪ್ರಕಟಿಸಿದೆ. ಕಳೆದ 2025ರ ಫೆ.9ರಂದು ಸಮಿತಿ ಶಿಫಾರಸು ಅನ್ವಯ ಜಾರಿಗೆ ತಂದಿದ್ದ ಪರಿಷ್ಕೃತಗೊಂಡಿದ್ದ ಅವಧಿ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಫೆ.9ರಿಂದ ಜಾರಿಗೆ ಬರುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಈ ಹಿಂದಿನಂತೆ 0-2 ಕಿಮೀನಿಂದ 30ಕ್ಕಿಂತ ಹೆಚ್ಚು ಕಿಮೀವರೆಗೆ ಹತ್ತು ದರ ವಲಯಗಳನ್ನಾಗಿ ವಿಭಾಗಿಸಿಕೊಂಡು ಪರಿಷ್ಕರಣೆಯನ್ನು ಮಾಡಲಾಗಿದೆ. ಇದರ ಪ್ರಕಾರ ದರವು ಕನಿಷ್ಠ ₹1 ನಿಂದ ಗರಿಷ್ಠ ₹5 ವರೆಗೆ ಹೆಚ್ಚಳವಾಗಿದೆ. ಈ ಮೂಲಕ ಕನಿಷ್ಠ ದರ ₹11, ಗರಿಷ್ಠ ದರ ₹95 ಆಗಲಿದೆ.

ಸಮಿತಿಯ ವರದಿ ಪ್ರಕಾರ ಬಿಎಂಆರ್‌ಸಿಎಲ್‌ 7.5 ವರ್ಷಗಳ ನಂತರ 2025ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ.51.55ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಏಕಾಏಕಿ ಇಷ್ಟೊಂದು ಪ್ರಮಾಣದ ದರ ಹೆಚ್ಚಳ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರ ಅನುಸರಿಸುವಂತೆ ತಿಳಿಸಿತ್ತು.

ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ.5ರಷ್ಟು ಏರಿಕೆಯನ್ನು ಹೋಲಿಸಿದಾಗ ಯಾವುದು ಕಡಿಮೆ ಪ್ರಮಾಣದ ದರ ಏರಿಕೆಗೆ ಕಾರಣವಾಗುತ್ತದೊ ಮತ್ತು ಮುಂದಿನ 1 ರು.ಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿತ್ತು. ಈ ಕಾರ್ಯವಿಧಾನವು ವಾರ್ಷಿಕ ಅಲ್ಪ ದರ ಹೆಚ್ಚಳವಾಗಲಿದೆ.

2023-24ಕ್ಕೆ ಹೋಲಿಸಿದರೆ 2024-25ರ ಲೆಕ್ಕಪರಿಶೋಧಿತ ಹಣಕಾಸು ದತ್ತಾಂಶದ ಆಧಾರದ ಮೇಲೆ ನಿರ್ವಹಣಾ ವೆಚ್ಚವು ಶೇಕಡಾ 10.20ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಆದರೂ, ದರ ಪರಿಷ್ಕರಣೆ ಮಾರ್ಗಸೂಚಿಗೆ ಅನುಗುಣವಾಗಿ ದರ ಹೆಚ್ಚಳವನ್ನು ಶೇ.5ಕ್ಕೆ ಸೀಮಿತಗೊಳಿಸಿದ್ದೇವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ರಿಯಾಯಿತಿ ಮುಂದುವರಿಕೆ: 

ಸದ್ಯ ಇರುವ ಎಲ್ಲಾ ಪ್ರಯಾಣಿಕ ರಿಯಾಯಿತಿ ಹಾಗೆಯೇ ಮುಂದುವರೆಯಲಿವೆ. ಸ್ಮಾರ್ಟ್ ಕಾರ್ಡ್ ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆದಾರರಿಗೆ ಪೀಕ್ ಅವರ್‌ನಲ್ಲಿ ಶೇ.5ರಷ್ಟು ಹಾಗೂ ಪೀಕ್ ಇಲ್ಲದ ಸಮಯದಲ್ಲಿ ಶೇ.10ರಷ್ಟು ರಿಯಾಯಿತಿ ಮುಂದುವರೆಸಲಾಗಿದೆ. ಭಾನುವಾರ ಮತ್ತು ಮೂರು ಗೊತ್ತುಪಡಿಸಿದ ರಾಷ್ಟ್ರೀಯ ರಜಾದಿನಗಳಲ್ಲಿ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ಅನ್ವಯಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ವಲಯ ಕಿಮೀ ಹಿಂದಿನ ದರ(₹) ಪರಿಷ್ಕೃತ ದರ(₹)

F1 0-2 - ₹10 - ₹11

F2 2-4 ₹20 - ₹ 21

F3 4-6 ₹30 - ₹32

F4 6-8 ₹40 ₹-42

F5 8-10 ₹50 ₹ 53

F6 10-15 ₹60 ₹63

F7 15-20 ₹70 ₹74

F8 20-25 ₹80 ₹84

F9 25-30 ₹90 ₹95

F10 >;30 ₹90 ₹95

----------