ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಕೆ.ಆರ್‌. ಮಾರುಕಟ್ಟೆ ಕಟ್ಟಡದ ವಾಹನ ಪಾರ್ಕಿಂಗ್‌ ಸ್ಥಳವನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಯೋಜನೆ ರೂಪಿಸಿದೆ.

ಬೆಂಗಳೂರು (ಸೆ.06): ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಕೆ.ಆರ್‌. ಮಾರುಕಟ್ಟೆ ಕಟ್ಟಡದ ವಾಹನ ಪಾರ್ಕಿಂಗ್‌ ಸ್ಥಳವನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಯೋಜನೆ ರೂಪಿಸಿದೆ. 1928ರಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಕಟ್ಟಡವು ಇದೀಗ ನಗರದ ಪ್ರಮುಖ ವ್ಯಾಪಾರಿ ತಾಣಗಳಲ್ಲಿ ಒಂದಾಗಿದೆ.

ತರಕಾರಿ, ಹಣ್ಣು, ಹೂ, ಸೊಪ್ಪು ಸೇರಿದಂತೆ ಎಲ್ಲ ವಸ್ತುಗಳು ಒಂದೇ ಸ್ಥಳದಲ್ಲಿ ದೊರೆಯುತ್ತವೆ. ಹಾಗಾಗಿ, ಪ್ರತಿ ದಿನ ನಗರದ ವಿವಿಧ ಭಾಗದಿಂದ ಲಕ್ಷಾಂತರ ಗ್ರಾಹಕರು ಬಂದು ಹೋಗುತ್ತಾರೆ. ಕೆ.ಆರ್‌. ಮಾರುಕಟ್ಟೆ ಕಟ್ಟಡವು ಐದು ಮಹಡಿ ಹೊಂದಿದೆ. ಅದರಲ್ಲಿ ನಾಲ್ಕು ಮಹಡಿಯಲ್ಲಿ ಮಳಿಗೆಗಳಿದ್ದು, ನೆಲ ಮಹಡಿಯಲ್ಲಿ ವಾಹನ ನಿಲುಗಡೆಗೆ ಮೀಸಲಿಡಲಾಗಿದೆ. ಸದ್ಯ ವ್ಯವಸ್ಥಿತ ನಿರ್ವಹಣೆ ಇಲ್ಲದೇ ಗಬ್ಬುನಾರುವ ಸ್ಥಿತಿಯಲ್ಲಿದೆ. ಇದೀಗ ವಾಹನ ನಿಲುಗಡೆ ಸ್ಥಳವನ್ನು ಅಭಿವೃದ್ಧಿ ಮತ್ತು ನಿರ್ವಹಣೆ ಮಾದರಿಯಲ್ಲಿ ಖಾಸಗಿ ಸಂಸ್ಥೆಗೆ ನೀಡುವುದಕ್ಕೆ ತೀರ್ಮಾನಿಸಿದೆ.

4.37 ಕೋಟಿ ಆದಾಯ: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಾಹನ ನಿಲುಗಡೆ ಸ್ಥಳವನ್ನು ಅಭಿವೃದ್ಧಿ ಪಡಿಸಿ 10 ವರ್ಷ ನಿರ್ವಹಣೆ ರೈಟ್‌ ಸಲ್ಯೂಷನ್‌ ಸಂಸ್ಥೆ ಗುತ್ತಿಗೆ ಪಡೆದಿದೆ. ಬಾಡಿಗೆ ರೂಪದಲ್ಲಿ ಸಂಸ್ಥೆಯು ಜಿಬಿಎಗೆ 4.37 ಕೋಟಿ ರು. ಪಾವತಿ ಮಾಡಬೇಕಾಗಲಿದೆ. ಸ್ವಾತಂತ್ರ್ಯಉದ್ಯಾನವನದ ಬಹುಮಹಡಿ ಪಾರ್ಕಿಂಗ್‌ ತಾಣದ ಮಾದರಿಯಲ್ಲಿಯೇ ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಒಟ್ಟು 200 ಕಾರು, 400 ಬೈಕ್‌ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ. ಕ್ಯಾಶ್‌ಲೆಸ್‌ ವ್ಯವಸ್ಥೆ, ವೈಫ್‌, ಸಿಸಿ ಕ್ಯಾಮೆರಾ ಸೇರಿದಂತೆ ವಾಹನ ಸುರಕ್ಷತೆಗೆ ಹಲವು ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿ ನಡೆಸುವುದಕ್ಕೆ 120 ದಿನ ಗುತ್ತಿಗೆದಾರರಿಗೆ ಕಾಲಾವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮಗಾರಿ ಆರಂಭ: ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಮಾಡುವುದಕ್ಕೆ ಈಗಾಗಲೇ ಕೆ.ಆರ್‌. ಮಾರುಕಟ್ಟೆಯ ನೆಲ ಮಹಡಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕಾಮಗಾರಿ ಆರಂಭಿಸುವುದಕ್ಕೆ ಶುಕ್ರವಾರ ಪೂಜೆ ಸಹ ಮಾಡಲಾಗಿದೆ.