ಕಾರವಾರದಲ್ಲಿ ಸೀಗಲ್ ಹಕ್ಕಿಯ ದೇಹದಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಬೀಜಿಂಗ್‌ನ ಪರಿಸರ ಅಧ್ಯಯನದ ಭಾಗವೆಂದು ತಿಳಿದುಬಂದಿದೆ. ಭದ್ರತಾ ದೃಷ್ಟಿಯಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ತನಿಖೆ ನಡೆಸುತ್ತಿವೆ.

ಉತ್ತರ ಕನ್ನಡ (ಕಾರವಾರ): ಕಾರವಾರದಲ್ಲಿ ಸೀಗಲ್ ಹಕ್ಕಿಯ ದೇಹದಲ್ಲಿ ಚೀನಾದ ಮೂಲದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿರುವುದು ಭದ್ರತಾ ಹಾಗೂ ಪರಿಸರ ಅಧ್ಯಯನ ವಲಯದಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಹಕ್ಕಿಯ ದೇಹದಲ್ಲಿದ್ದ ಜಿಪಿಎಸ್ ಟ್ರ್ಯಾಕರ್ ಅನ್ನು ಸುರಕ್ಷಿತವಾಗಿ ಹೊರತೆಗೆದು ತಪಾಸಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ಜಿಪಿಎಸ್ ಟ್ರ್ಯಾಕರ್ ಚೀನಾದ ‘ಇಕೋ–ಎನ್ವಿರಾನ್ಮೆಂಟ್ ಸೈನ್ಸ್ ಅಕಾಡೆಮಿ’ ಎಂಬ ಸಂಸ್ಥೆಗೆ ಸಂಬಂಧಿಸಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಟ್ರ್ಯಾಕರ್‌ಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳಲು ಇಕೋ -ಎನ್ವಿರಾನ್ಮೆಂಟ್ ಸೈನ್ಸ್ ಅಕಾಡೆಮಿಗೆ ಸಂಸ್ಥೆಯನ್ನು ಇಮೇಲ್ ಮೂಲಕ ಸಂಪರ್ಕಿಸಿದೆ.

ಚೀನಾದ ಬೀಜಿಂಗ್‌ನ ಸಂಶೋಧನಾ ಕೇಂದ್ರ

ಪತ್ತೆಯಾದ ಮಾಹಿತಿಯ ಪ್ರಕಾರ, ಈ ಸಂಶೋಧನಾ ಸಂಸ್ಥೆ ಚೀನಾದ ಬೀಜಿಂಗ್ ನಗರದಲ್ಲಿನ ಹೈಡಿಯನ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಸಿಇಒ ಆಗಿ ಲೈ ಕಾಮ್ (Lei Cao) ಎಂಬವರು ಕಾರ್ಯನಿರ್ವಹಿಸುತ್ತಿದ್ದಾರೆ. ಇಕೋ–ಎನ್ವಿರಾನ್ಮೆಂಟ್ ಸೈನ್ಸ್ ಅಕಾಡೆಮಿ ಕಳೆದ ಹಲವು ದಶಕಗಳಿಂದ ಪರಿಸರ, ವನ್ಯಜೀವಿ ಮತ್ತು ಜೀವಸಂಕುಲ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಯಾಗಿದೆ.

1975ರಿಂದ ಪರಿಸರ ಅಧ್ಯಯನ

1975ರಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ವಿಶ್ವದ 190ಕ್ಕೂ ಹೆಚ್ಚು ದೇಶಗಳಲ್ಲಿ ಪರಿಸರ ಸಂರಕ್ಷಣೆ, ಹಕ್ಕಿಗಳ ವಲಸೆ, ಜೀವವೈವಿಧ್ಯ ಹಾಗೂ ಜೀವಸಂಕುಲದ ಜೀವನ ಚಕ್ರದ ಕುರಿತು ಅಧ್ಯಯನ ನಡೆಸುತ್ತಿದೆ. ಈ ಸಂಶೋಧನೆಯ ಭಾಗವಾಗಿ ಸೀಗಲ್ ಸೇರಿದಂತೆ ಹಲವು ಹಕ್ಕಿಗಳಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿ ಅವುಗಳ ಹಾರಾಟದ ಮಾರ್ಗ, ವಲಸೆ ಸ್ವಭಾವ ಹಾಗೂ ಜೀವನ ಚಕ್ರವನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಜಿಪಿಎಸ್ ಮೂಲಕ ಹಕ್ಕಿಗಳ ಹಾರಾಟ ಅಧ್ಯಯನ

ಜಿಪಿಎಸ್ ಟ್ರ್ಯಾಕರ್ ಸಹಾಯದಿಂದ ಹಕ್ಕಿಗಳು ಯಾವ ದಿಕ್ಕಿನಲ್ಲಿ, ಎಷ್ಟು ದೂರ ಹಾರುತ್ತವೆ, ಯಾವ ಪ್ರದೇಶಗಳಲ್ಲಿ ವಾಸಿಸುತ್ತವೆ ಹಾಗೂ ಅವುಗಳ ವಲಸೆ ಪಥ ಹೇಗಿರುತ್ತದೆ ಎಂಬ ಮಾಹಿತಿಯನ್ನು ಸಂಗ್ರಹಿಸುವುದು ಈ ಸಂಶೋಧನೆಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಪತ್ತೆಯಾದ ಸೀಗಲ್ ಹಕ್ಕಿಯ ಮೇಲಿದ್ದ ಜಿಪಿಎಸ್ ಟ್ರ್ಯಾಕರ್ ಕೂಡ ಪರಿಸರ ಅಧ್ಯಯನದ ಭಾಗವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ಇಲಾಖೆ ಪ್ರಾಥಮಿಕ ಮಾಹಿತಿ ಸಂಗ್ರಹ

ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಸದ್ಯ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಜಿಪಿಎಸ್ ಟ್ರ್ಯಾಕರ್ ಅಳವಡಿಕೆಯ ಉದ್ದೇಶ, ಅದರ ತಾಂತ್ರಿಕ ಅಂಶಗಳು ಹಾಗೂ ಭದ್ರತಾ ದೃಷ್ಟಿಯಿಂದ ಯಾವುದೇ ಅಪಾಯವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳೂ ಸಹ ಸೀಗಲ್ ಹಕ್ಕಿಗಳ ಕುರಿತು ನಡೆಯುತ್ತಿರುವ ಅಧ್ಯಯನದ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

ಜಿಪಿಎಸ್ ಟ್ರ್ಯಾಕರ್ ನಿಷ್ಕ್ರಿಯಗೊಳಿಸಲು ಸಿದ್ಧತೆ

ಭದ್ರತಾ ದೃಷ್ಟಿಯಿಂದ ಯಾವುದೇ ಅನುಮಾನ ಉಂಟಾಗದಂತೆ ಜಿಪಿಎಸ್ ಟ್ರ್ಯಾಕರ್ ಅನ್ನು ನಿಷ್ಕ್ರಿಯಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.