ಪ್ರೀತಿ ನಿರಾಕರಿಸಿದ ಕಾರಣಕ್ಕೆ ಬೆಂಗಳೂರಿನಿಂದ ಯುವತಿಯನ್ನು ಅಪಹರಿಸಿದ್ದ ಯುವಕ, ತುಮಕೂರು ಬಳಿ ಚಲಿಸುವ ಕಾರಿನಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ಯುವಕ ಕಾರಿನಲ್ಲೇ ಸಜೀವ ದಹನವಾಗಿದ್ದಾನೆ.
ಬೆಂಗಳೂರು/ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಕಾರೊಳಗೆ ಪೆಟ್ರೋಲ್ ಬಾಂಬ್ ನಿಂದ ಸ್ಫೋಟಿಸಿಕೊಂಡು ಸಜೀವ ದಹನವಾದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ಬೆಂಗಳೂರಿನಿಂದ ಅಪಹರಿಸಿ, ಚಲಿಸುವ ಕಾರಿನಲ್ಲೇ ಬಾಂಬ್ ಸ್ಫೋಟಿಸಿ ಕೊಲ್ಲಲು ಯತ್ನಿಸಿದ್ದ. ಈ ಘಟನೆಯಲ್ಲಿ ಯುವತಿ ಸಿನಿಮೀಯ ಶೈಲಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಯನ್ನು ಕಿಡ್ನಾಪ್ ಮಾಡಿದ್ದ ಪಾಗಲ್ ಪ್ರೇಮಿ ಕಾರಿನಲ್ಲೇ ಸಜೀವ ದಹನವಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಲ್ ಗ್ರಾಮದ ನಿವಾಸಿ ನಾಗೇಂದ್ರ (ಮೃತ) ಹಾಗೂ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಒಟಿ (OT) ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಈ ಪ್ರಕರಣದ ಕೇಂದ್ರಬಿಂದುವಾಗಿದ್ದಾರೆ.
ಆರು ವರ್ಷಗಳ ಪ್ರೀತಿ, ಬ್ರೇಕಪ್ ತಂದ ವಿರಸ
ಮೃತ ನಾಗೇಂದ್ರ ಹಾಗೂ ರಮ್ಯಾ ಅಕ್ಕ ಪಕ್ಕದ ಊರಿನವರಾಗಿದ್ದು, ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ದಿನಗಳಲ್ಲೇ ಇವರ ನಡುವೆ ಪ್ರೇಮಾಂಕುರವಾಗಿತ್ತು. ನಾಗೇಂದ್ರ ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿ ಅಬ್ಬೆಪಾರಿಯಂತೆ ತಿರುಗಾಡುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಮದುವೆಯಾಗುವಂತೆ ರಮ್ಯಾಗೆ ಆತ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡಲು ಆರಂಭಿಸಿದ್ದನು. ಇದರಿಂದ ರೋಸಿಹೋದ ರಮ್ಯಾ, ನಾಗೇಂದ್ರನ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ಆತನ ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ಅಲ್ಲದೆ ಬೆಂಗಳೂರಿನ ಜಯನಗರದ 1ನೇ ಬ್ಲಾಕ್‌ನ ಬೈರಸಂದ್ರ ಭೋವಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು.
ಬೆಂಗಳೂರಿನಲ್ಲಿ ಮುಂಜಾನೆಯೇ ಕಿಡ್ನಾಪ್ ಸ್ಕೆಚ್!
ರಮ್ಯಾ ತನ್ನ ನಂಬರ್ ಬ್ಲಾಕ್ ಮಾಡಿದ್ದರಿಂದ ಆಕ್ರೋಶಗೊಂಡಿದ್ದ ನಾಗೇಂದ್ರ, ಮುಂಜಾನೆಯೇ ಅಂಕೋಲಾದಿಂದ ಬೆಂಗಳೂರಿಗೆ ಬಂದಿದ್ದನು. ಬೆಳಗ್ಗೆ ಸುಮಾರು 7 ಗಂಟೆಯ ವೇಳೆಗೆ ರಮ್ಯಾ ತಂಗಿದ್ದ ರೂಮ್ ಬಳಿ ಪ್ರತ್ಯಕ್ಷನಾಗಿ ಜಗಳ ತೆಗೆದಿದ್ದನು. ಈ ವೇಳೆ ಜಗಳ ಬಿಡಿಸಲು ಬಂದ ರಮ್ಯಾಳ ಗೆಳತಿಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲ್ಲುವುದಾಗಿ ಹೆದರಿಸಿ, ಮೊದಲೇ ಬುಕ್ ಮಾಡಿದ್ದ ಉಬರ್ (Uber) ಕ್ಯಾಬ್‌ನಲ್ಲಿ ರಮ್ಯಾಳನ್ನು ಬಲವಂತವಾಗಿ ಅಪಹರಿಸಿಕೊಂಡು ಅಂಕೋಲಾ ಕಡೆಗೆ ಪ್ರಯಾಣ ಬೆಳೆಸಿದ್ದನು. ರಮ್ಯಾ ಕಾಣೆಯಾದ ತಕ್ಷಣ ಆಕೆಯ ಸ್ನೇಹಿತೆ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು.
ಚಲಿಸುವ ಕಾರಿನಲ್ಲೇ ಚಾಕು ಇರಿತ, ಬಾಂಬ್ ಭೀತಿ
ಬೆಂಗಳೂರಿನಿಂದ ಹೆದ್ದಾರಿಯಲ್ಲಿ ಕಾರು ಸಾಗುತ್ತಿದ್ದ ಉದ್ದಕ್ಕೂ ನಾಗೇಂದ್ರ ರಮ್ಯಾ ಜೊತೆ ತೀವ್ರವಾಗಿ ಜಗಳವಾಡಿದ್ದಾನೆ. ರಮ್ಯಾಗೆ ತಾನು ಮೊದಲೇ ತಯಾರಿಸಿಕೊಂಡು ತಂದಿದ್ದ ನಾಡ ಬಾಂಬ್ (ಪೆಟ್ರೋಲ್ ಬಾಂಬ್) ತೋರಿಸಿ, ನಿನ್ನನ್ನು ಕೊಂದು ನಾನು ಸಾಯುತ್ತೇನೆ ಎಂದು ಸತತವಾಗಿ ಬೆದರಿಕೆ ಹಾಕಿದ್ದಾನೆ. ಕಾರು ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾ ರಸ್ತೆಯ ಜೋಗಿಹಳ್ಳಿ ಬಳಿ ತಲುಪಿದಾಗ ನಾಗೇಂದ್ರ ಏಕಾಏಕಿ ಚಾಕುವಿನಿಂದ ರಮ್ಯಾಳ ತಲೆ ಹಾಗೂ ಕೈಗೆ ಇರಿದಿದ್ದಾನೆ. ಕಾರಿನೊಳಗೆ ನಡೆಯುತ್ತಿದ್ದ ಈ ಭೀಕರ ಹಿಂಸಾಚಾರ ಹಾಗೂ ಬಾಂಬ್ ಇರುವುದನ್ನು ಕಂಡು ಹೆದರಿದ ಕ್ಯಾಬ್ ಚಾಲಕ ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಾಣಭಯದಿಂದ ಓಡಿಹೋಗಿದ್ದಾನೆ.
ಸಿನಿಮೀಯ ಶೈಲಿಯಲ್ಲಿ ಹಾರಿ ಬಚಾವಾದ ರಮ್ಯಾ
ಚಾಲಕ ಓಡಿಹೋಗುತ್ತಿದ್ದಂತೆ ಕಾರಿನೊಳಗೆ ನಾಗೇಂದ್ರ ಬಾಂಬ್ ಸ್ಫೋಟಿಸಲು ಸಜ್ಜಾಗಿದ್ದಾನೆ. ಈ ಆಪತ್ತನ್ನು ಅರಿತ ರಮ್ಯಾ, ತೀವ್ರ ರಕ್ತಸ್ರಾವದ ನಡುವೆಯೂ ಸಮಯಪ್ರಜ್ಞೆ ಮೆರೆದು ಕಾರಿನ ಲಾಕ್ ತೆಗೆದು ಹೊರಗೆ ಜಿಗಿದಿದ್ದಾಳೆ. ರಮ್ಯಾ ಕಾರಿನಿಂದ ಹೊರಬೀಳುತ್ತಿದ್ದಂತೆಯೇ ನಾಗೇಂದ್ರ ತಾನು ತಂದಿದ್ದ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಕ್ಷಣಾರ್ಧದಲ್ಲಿ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ. ತಲೆ ಹಾಗೂ ಕೈಗೆ ಗಾಯಗೊಂಡ ಯುವತಿ ರಮ್ಯಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ತುಮಕೂರು ಎಸ್ಪಿ ಅಶೋಕ್ ಕೆ.ವಿ. ಹೇಳಿಕೆ:
ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮೃತನನ್ನು ನಾಗೇಂದ್ರ ಎಂದು ಗುರುತಿಸಲಾಗಿದೆ. ಈತ ಪೆಟ್ರೋಲ್ ಬಾಂಬ್ ತಂದು ತಾನೇ ಸ್ಫೋಟಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತ ನಾಗೇಂದ್ರ ಹಾಗೂ ರಮ್ಯಾ ಪ್ರೀತಿಯಲ್ಲಿದ್ದರು. ಇತ್ತೀಚೆಗೆ ಇವರ ಬ್ರೇಕಪ್ ಆಗಿತ್ತು. ಈ ಹಿನ್ನೆಲೆಯಲ್ಲಿ ಜಯನಗರದಿಂದ ಅಂಕೋಲಾಕ್ಕೆ ಕ್ಯಾಬ್ ಬುಕ್ ಮಾಡಿ ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಸದ್ಯ ಗಾಯಾಳು ಯುವತಿ ಮತ್ತು ಚಾಲಕನಿಂದ ಮಾಹಿತಿ ಪಡೆಯಲಾಗುತ್ತಿದ್ದು, ತನಿಖೆ ಮುಂದುವರಿದಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಭೀಕರ ಸ್ಫೋಟದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.


