ಕಂಬಳ ನಡೆಯುವುದಕ್ಕೆ ಮೊದಲೇ ದಾಖಲೆ ಬರೆದ ಬೆಂಗ್ಳೂರು ಕಂಬಳ..!
ಬೆಂಗಳೂರು ಕಂಬಳ ಕರೆ ಸುಮಾರು 151 ಮೀ ಉದ್ದವಾಗಿದ್ದು ಇಲ್ಲಿಯವರೆಗೆ ಕಂಬಳ ಕರೆಗಳ ಪೈಕಿ ಅತೀ ಉದ್ದದ ಕಂಬಳ ಟ್ರ್ಯಾಕ್ ಇದಾಗಿದೆ. ಇಲ್ಲಿಯವರೆಗೆ ಕಂಬಳ ನಡೆಯುತ್ತಿದ್ದ ಅಷ್ಟೂ ಟ್ರ್ಯಾಕ್ ಗಳ ಪೈಕಿ ಪುತ್ತೂರು ಕಂಬಳದ ಟ್ರ್ಯಾಕ್ 149 ಮೀ ಇತ್ತು. ಇದೇ ಇಲ್ಲಿಯವರೆಗೆ ಅತೀ ದೊಡ್ಡ ಟ್ರ್ಯಾಕ್ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ ಸದ್ಯ ಈ ಶ್ರೇಯಸ್ಸು ಬೆಂಗಳೂರು ಕಂಬಳ ಕರೆಯ ಪಾಲಾಗಲಿದೆ.

ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಅ.25): ಬೆಂಗಳೂರು ಕಂಬಳಕ್ಕೆ ಭರ್ತಿ ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು ಅರಮನೆ ಮೈದಾನದಲ್ಲಿ ಭರದ ಸಿದ್ದತೆಗಳು ನಡೀತಿವೆ. ಹೀಗಿರುವಾಗಲೇ ಕಂಬಳಕ್ಕೆ ಮೊದಲೇ ಬೆಂಗಳೂರು ಕಂಬಳ ಹೊಸ ದಾಖಲೆ ಬರೆಯಲು ಹೊರಟಿದೆ. ಅದು ಕಂಬಳ ಕರೆಯ ಮೂಲಕ!
ಕಂಬಳ ಕರೆ ಎಂದರೆ ಕೋಣಗಳು ಓಡುವ ಟ್ರ್ಯಾಕ್. ಇತ್ತೀಚೆಗಷ್ಟೆ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಕಂಬಳ ಕರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಬೆಂಗಳೂರು ಕಂಬಳದ ಗೌರವಾಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ಕೊಟ್ಟಿರುವ ಈ ಕಂಬಳ ಕರೆಯೇ ಈಗ ದಾಖಲೆ ಬರೆಯಲು ಸಿದ್ದವಾಗಿರೋದು.
ಬೆಂಗಳೂರು ಕಂಬಳಕ್ಕೆ ಸರ್ಕಾರದಿಂದ 1 ಕೋಟಿ ಸಹಾಯಧನ: ಡಿ.ಕೆ.ಶಿವಕುಮಾರ್
ಬೆಂಗಳೂರು ಕಂಬಳ ಕರೆ ಸುಮಾರು 151 ಮೀ ಉದ್ದವಾಗಿದ್ದು ಇಲ್ಲಿಯವರೆಗೆ ಕಂಬಳ ಕರೆಗಳ ಪೈಕಿ ಅತೀ ಉದ್ದದ ಕಂಬಳ ಟ್ರ್ಯಾಕ್ ಇದಾಗಿದೆ. ಇಲ್ಲಿಯವರೆಗೆ ಕಂಬಳ ನಡೆಯುತ್ತಿದ್ದ ಅಷ್ಟೂ ಟ್ರ್ಯಾಕ್ ಗಳ ಪೈಕಿ ಪುತ್ತೂರು ಕಂಬಳದ ಟ್ರ್ಯಾಕ್ 149 ಮೀ ಇತ್ತು. ಇದೇ ಇಲ್ಲಿಯವರೆಗೆ ಅತೀ ದೊಡ್ಡ ಟ್ರ್ಯಾಕ್ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ ಸದ್ಯ ಈ ಶ್ರೇಯಸ್ಸು ಬೆಂಗಳೂರು ಕಂಬಳ ಕರೆಯ ಪಾಲಾಗಲಿದೆ.
ಬೆಂಗಳೂರು ತುಳುಕೂಟಕ್ಕೆ 50 ವರ್ಷ ಸಂದಿರುವ ನಿಟ್ಟಿನಲ್ಲಿ ಬೆಂಗಳೂರು ಕಂಬಳ ನಡೆಸಲಾಗುತ್ತಿದ್ದು, ಈ ಘಳಿಗೆಯನ್ನು ಅಜರಾಮರವಾಗಿಸಬೇಕೆಂದು ಈ ಕಂಬಳ ಟ್ರ್ಯಾಕ್ ನಿರ್ಮಾಣ ಮಾಡಿದ್ದೇವೆ ಎಂದು ಬೆಂಗಳೂರು ಕಂಬಳ ಸಮಿತಿ ಪದಾಧಿಕಾರಿ ಸುಂದರ್ ರಾಜ್ ರೈ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ರೈ ಸಾರಥ್ಯದಲ್ಲಿ ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಟ್ಯಾಗ್ ಲೈನ್ ನೊಂದಿಗೆ ನವೆಂಬರ್ 25, 26ರಂದು ಕಂಬಳ ನಡೆಯಲಿದ್ದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ. ಗಾಯಕ ಗುರುಕಿರಣ್ ಮತ್ತು ಉದ್ಯಮಿ ಗುಣರಂಜನ್ ಶೆಟ್ಟಿ ಸಾರಥ್ಯದಲ್ಲಿ ವಿವಿಧ ಸಮಿತಿಗಳು ನಿರ್ಮಾಣವಾಗಿದ್ದು ಹಲವು ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ರಾಜಕಾರಣಿಗಳು ಭಾಗವಹಿಸುವ ನಿರೀಕ್ಷೆ ಇದೆ.