Asianet Suvarna News Asianet Suvarna News

ಬೆಂಗಳೂರು ಕಂಬಳ: ಅರಮನೆ ಮೈದಾನದಲ್ಲಿ ಈಗ ಮಿನಿ ಕರಾವಳಿ ಸೃಷ್ಟಿ..!

ಶನಿವಾರ ದಕ್ಷಿಣ ಕನ್ನಡ ಮಾತ್ರಲ್ಲದೆ ಸಿಲಿಕಾನ್‌ ಸಿಟಿ ಮಂದಿ ವಾರಾಂತ್ಯದ ದಿನಚರಿಯಾಗಿ ಕಂಬಳದತ್ತ ಹೆಜ್ಜೆ ಹಾಕಿದ್ದರು. ವಿದೇಶಿಗರು ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಆಯೋಜಕರಿಂದ ಮಾಹಿತಿ ತಿಳಿಯುವುದು ಕಂಡುಬಂತು. ಶನಿವಾರ ಇಡೀ ದಿನ ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸಿ ಕಂಬಳವನ್ನು ವೀಕ್ಷಿಸಿದರು. ಅದರಲ್ಲೂ ನಗರದಲ್ಲಿ ನೆಲೆಸಿರುವ ಮಂಗಳೂರು, ಉಡುಪಿಯ ಜನತೆ ತಮ್ಮ ಮನೆ ಹಬ್ಬದಂತೆ ಪಾಲ್ಗೊಂಡು ಸಂಭ್ರಮಿಸಿದರು.

Bengaluru Kambala Held on November 25th grg
Author
First Published Nov 26, 2023, 6:18 AM IST

ಬೆಂಗಳೂರು(ನ.26):  ಎಲ್ಲೆಲ್ಲೂ ಕೇಳುವ ಕುಂದ ಕನ್ನಡ, ಮೂಗಿಗೆ ಬಡಿಯುವ ಮತ್ಸ್ಯಖಾದ್ಯಗಳ ಘಮಲು, ಕೃಷಿ, ಕ್ರೀಡೆ, ಯಕ್ಷಗಾನ, ದೈವದ ಪೂಜೆಯ ಅನಾವರಣ. ಹುರುಪು ಹೆಚ್ಚಿಸುವ ಹುಲಿ ಕುಣಿತ, ಆಟಿಕಳೆಂಜ... ಇದು ದಕ್ಷಿಣ ಕನ್ನಡದ ಯಾವುದೋ ಹಳ್ಳಿಯ ದೃಶ್ಯವಲ್ಲ. ಸಿಲಿಕಾನ್‌ ಸಿಟಿಯ ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದ ಪ್ರಯುಕ್ತ ಸೃಷ್ಟಿಯಾದ ಮಿನಿ ಕರಾವಳಿಯಲ್ಲಿ ಕಂಡ ಕಡಲನಗರಿಯ ಸಂಸ್ಕೃತಿ. ನಗರದ ಅರಮನೆ ಮೈದಾನಕ್ಕೆ ಒಮ್ಮೆ ಪ್ರವೇಶಿಸಿದರೆ ದಕ್ಷಿಣ ಕನ್ನಡದ ಯಾವುದೋ ಊರಿಗೆ ಪ್ರವೇಶ ಮಾಡಿದಂತೆ ತೋರುತ್ತಿದೆ.

ಶನಿವಾರ ದಕ್ಷಿಣ ಕನ್ನಡ ಮಾತ್ರಲ್ಲದೆ ಸಿಲಿಕಾನ್‌ ಸಿಟಿ ಮಂದಿ ವಾರಾಂತ್ಯದ ದಿನಚರಿಯಾಗಿ ಕಂಬಳದತ್ತ ಹೆಜ್ಜೆ ಹಾಕಿದ್ದರು. ವಿದೇಶಿಗರು ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಆಯೋಜಕರಿಂದ ಮಾಹಿತಿ ತಿಳಿಯುವುದು ಕಂಡುಬಂತು. ಶನಿವಾರ ಇಡೀ ದಿನ ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸಿ ಕಂಬಳವನ್ನು ವೀಕ್ಷಿಸಿದರು. ಅದರಲ್ಲೂ ನಗರದಲ್ಲಿ ನೆಲೆಸಿರುವ ಮಂಗಳೂರು, ಉಡುಪಿಯ ಜನತೆ ತಮ್ಮ ಮನೆ ಹಬ್ಬದಂತೆ ಪಾಲ್ಗೊಂಡು ಸಂಭ್ರಮಿಸಿದರು.

ಬೆಂಗಳೂರು ಕಂಬಳ ಉದ್ಘಾಟಿಸಿದ ಸಿಎಂ : ತುಳು ರಾಜ್ಯದ ಎರಡನೇ ಭಾಷೆ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ!

ವಿಶೇಷವಾಗಿ ಬೆಳಗ್ಗೆ ನಡೆದ ಕೋಣಗಳ ತಾಲೀಮು, ರಾತ್ರಿ ನಡೆದ ಸ್ಪರ್ಧೆ ವೀಕ್ಷಿಸಲು ಜನತೆ ಉತ್ಸಾಹದಿಂದ ನೆರೆದಿದ್ದರು. ಕರೆಯ (ಟ್ರ್ಯಾಕ್‌) ಇಕ್ಕೆಲದಲ್ಲಿ ನಿಂತು ಕೋಣಗಳು ಓಡುತ್ತಿರುವಾಗ ಕೇಕೆ ಹಾಕಿ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಹೀಗೆ ಒಂದು ಕಡೆ ಕಂಬಳದ ಕೋಣಗಳು ಜಿದ್ದಿಗೆ ಬಿದ್ದು ಓಡುತ್ತಿದ್ದರೆ ಇನ್ನೊಂದೆಡೆ ಕರಾವಳಿಯ ಸಂಸ್ಕೃತಿ, ಪರಂಪರೆ ಅಷ್ಟೇ ಸಡಗರದಿಂದ ಅನಾವರಣಗೊಂಡಿತ್ತು.

ಕಂಬಳದ ಕೋಣಗಳ ಮಾಲೀಕರು ಹಾಗೂ ಕೆಲಸಗಾರರಿಗೆ, ಕಾರ್ಯಕರ್ತರಿಗೆ ಕರಾವಳಿಯ ಭೋಜನವಿತ್ತು. ಕಾರ್ಯಕ್ರಮಕ್ಕೆ ಬಂದವರು ಕರಾವಳಿಯ ಮಾಂಸಹಾರ ಕುಂದಾಪುರ ಚಿಕ್ಕನ್ ಸುಕ್ಕಾ, ಅನ್ನ, ಮೀನು ಸಾರು ಸವಿದರು. ಒಂದಕ್ಕೆ ₹80 ಬಂಗುಡೆ, ₹300ಕ್ಕೆ ಪಾಪ್ಲೆಟ್‌ ಮೀನುಗಳ ಖಾದ್ಯವನ್ನು ಜನತೆ ಇಷ್ಟಪಟ್ಟು ತಿಂದರು. ಅದರಂತೆ ಕಡಲೆ ಬೆಳೆ ಪಾಯಸ ಹಾಗೂ ಸಸ್ಯಹಾರಿ ಖಾದ್ಯಗಳಾದ ಅನ್ನ, ಸಾರು, ಹುಳಿಸಾರು, ಮಜ್ಜಿಗೆ ಇತ್ತು. ಅಲ್ಲದೆ, ಸ್ಟಾಲ್‌ಗಳಲ್ಲಿ ಖಡಕ್‌ ರೊಟ್ಟಿಯೂ ಲಭ್ಯವಿತ್ತು.

ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ

ಕಂಬಳದ ಮುಖ್ಯ ವೇದಿಕೆಯ ಪಕ್ಕದಲ್ಲೇ ಇರುವ ಕಾರ್ಕಳದ ‘ಶ್ರೀದತ್ತ ತುಳು ಜನಪದ ಮತ್ತು ಇತಿಹಾಸ ಅಧ್ಯಯನ ಕೇಂದ್ರ’ದಿಂದ ನಡೆಯುತ್ತಿರುವ ವಸ್ತು ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕಳೆದ 30 ವರ್ಷಗಳಿಂದ ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಸ್ತುಗಳನ್ನು ಸಂಗ್ರಹಿಸಿರುವ ಸುಧಾಕರ್‌ ಶೆಟ್ಟಿ ಅವರು ಅವನ್ನೆಲ್ಲ ಇಲ್ಲಿ ತಂದಿರಿಸಿದ್ದಾರೆ. ದೈವಾರಾಧನೆಯ ಪ್ರಭಾವಳಿ, ಕೃಷಿ ಬುಟ್ಟಿ, ನೇಗಿಲು, ಕಂಬಳದ ಹಣೆಪಟ್ಟಿ, ದೀಪ, ಪಲ್ಲಕ್ಕಿ, ತೊಟ್ಟಿಲು, ನಾಣ್ಯಗಳು, ಅಡಗತ್ತರಿ, ತಂಬೂರಿನಾಗ ಸೇರಿ ನೂರಾರು ಬಗೆಯ ವಸ್ತುಗಳು ಇಲ್ಲಿವೆ.

ಬೆಂಗಳೂರು ಕಂಬಳ ಆಯೋಜಕರಿಗೆ ಬಿಗ್ ಶಾಕ್‌ ಕೊಟ್ಟ ಬಿಬಿಎಂಪಿ

ಅಬ್ಬರಿಸಿ ಬೊಬ್ಬಿರಿದ ಹುಲಿವೇಷ

ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರಾವಳಿಯ ಜಾನಪದ ಸೊಗಡಾದ ಹುಲಿವೇಷ ಅಬ್ಬರಿಸಿತು. ಮಂಗಳೂರು ಪೊಲಳಿ ಟೈಗರ್ಸ್‌ ತಂಡದ ಹದಿನೈದು ಜನ ಕಲಾವಿದರು ನಡೆಸಿಕೊಟ್ಟ ಹುಲಿಕುಣಿತ ನೆರೆದವರ ಹುರುಪು ಹೆಚ್ಚಿಸಿತು. ಅದೇ ರೀತಿ ಕುಣಿತ ಭಜನೆ, ಆಷಾಢ (ಆಟಿ) ಮಾಸದಲ್ಲಿ ನಡೆಸುವ ಆಟಿಕಳಂಜ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನಸೆಳೆದವು. ಅದೇ ರೀತಿ ಸಿನಿಮಾ ತಾರೆಯರ ಪ್ರದರ್ಶನ, ಮಿಮಿಕ್ರಿ, ನೃತ್ಯ, ರೂಪಕಗಳು ಪ್ರೇಕ್ಷಕರನ್ನು ರಂಜಿಸಿದವು.

ಸೆಲ್ಫಿ ಕ್ಲಿಕ್‌ ಕ್ರೇಜ್‌

ಕಂಬಳ ನೋಡಲು ಆಗಮಿಸಿರುವ ಪ್ರೇಕ್ಷಕರು ಆವರಣದಲ್ಲಿರುವ ಯಕ್ಷಗಾನ, ಎತ್ತಿನ ಬಂಡಿ, ಹುಲಿವೇಶದ ಬೊಂಬೆಗಳ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕಂಬಳದ ಕೋಣಗಳು, ಕರೆ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಮನುಷ್ಯರ ಜತೆಗೆ ಒಡನಾಟವಿರುವ ಕೋಣಗಳು ಫೋಟೋಕ್ಕೆ ಫೋಸ್ ಕೊಟ್ಟ ದೃಶ್ಯ ಸಾಮಾನ್ಯವಾಗಿತ್ತು. ಜೊತೆಗೆ ಕರಾವಳಿಯಲ್ಲಿ ಸಾಮಾನ್ಯವಾದ ನಾಗರಕಲ್ಲು, ಬತ್ತದ ಗೊಣಬೆ, ಗುಡಿಗಳ ಪ್ರತಿಕೃತಿಯನ್ನು ಸೃಷ್ಟಿಸಲಾಗಿದ್ದು ಅವುಗಳತ್ತ ಆಕರ್ಷಿತರಾಗಿದ್ದರು.

Follow Us:
Download App:
  • android
  • ios