ಬೆಂಗಳೂರಿನ ಜಯನಗರದಲ್ಲಿ ಆಸ್ತಿ ವಿವಾದವು ಹಿಂಸಾತ್ಮಕ ರೂಪ ಪಡೆದಿದ್ದು, ಅಕ್ಕ ಮತ್ತು ಆಕೆಯ ಕುಟುಂಬದವರು ತಮ್ಮನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದಾಗ, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿ, ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು (ಏ.27): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜಯನಗರದಲ್ಲಿ ಆಸ್ತಿ ವಿವಾದವೊಂದು ವಿಕೋಪಕ್ಕೆ ತಿರುಗಿದ್ದು, ಸ್ವಂತ ಅಕ್ಕ ಮತ್ತು ಆಕೆಯ ಕುಟುಂಬವೇ ಸೇರಿ ತమ్ముನ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಜಯನಗರದ ಭೈರಸಂದ್ರದಲ್ಲಿ ನಡೆದ ಈ ಕೃತ್ಯದಲ್ಲಿ ಇಡೀ ಮನೆಯೇ ಸುಟ್ಟು ಭಸ್ಮವಾಗುವ ಸಾಧ್ಯತೆಯಿತ್ತು, ಆದರೆ ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಕೌಟುಂಬಿಕ ಕಲಹ ಮತ್ತು ಆಸ್ತಿ ಹಂಚಿಕೆಯ ವಿವಾದದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಉಮೇಶ್ ಎಂಬುವವರ ಸಹೋದರಿ ಮೀನಾಕ್ಷಿ, ಆಕೆಯ ಪತಿ ಹಾಗೂ ಮಕ್ಕಳು ಸೇರಿ ಉಮೇಶ್ ಅವರ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಕೈಯಲ್ಲಿ ಮಚ್ಚು, ದೊಣ್ಣೆಗಳನ್ನು ಹಿಡಿದು ಅಟ್ಟಹಾಸ ಮೆರೆದ ಆರೋಪಿಗಳು, ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕಿಡಿಗೇಡಿಗಳ ಕೃತ್ಯ ಸಾಕ್ಷಿಯಾಗಬಾರದೆಂದು ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಹೊಡೆದು ಹಾಕಿದ್ದಾರೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ:

ದಾಂಧಲೆ ನಡೆಸಿದ ಮೀನಾಕ್ಷಿ ತಂಡ, ಅಷ್ಟಕ್ಕೇ ಸುಮ್ಮನಾಗದೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಉಮೇಶ್ ಪತ್ನಿ ಅಶ್ವಿನಿ ಮತ್ತು ಕುಟುಂಬಸ್ಥರು ಪ್ರಾಣಭಯದಿಂದ ಬೆಚ್ಚಿಬಿದ್ದಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಇಡೀ ಮನೆ ಅಗ್ನಿಗಾಹುತಿಯಾಗುತ್ತಿತ್ತು ಮತ್ತು ಮನೆಯೊಳಗಿದ್ದವರ ಪ್ರಾಣಕ್ಕೆ ಸಂಚಕಾರ ಒದಗಿ ಬರುತ್ತಿತ್ತು.

ಜೀವಭಯದಿಂದ 112 ಗೆ ಕರೆ:

ಕಿಡಿಗೇಡಿಗಳ ಅಟ್ಟಹಾಸದಿಂದ ಕಂಗಾಲಾದ ಅಶ್ವಿನಿ ಅವರು ಕೂಡಲೇ ಪೊಲೀಸ್ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಉಮೇಶ್ ಅವರ ಪತ್ನಿ ಅಶ್ವಿನಿ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಅಕ್ಕ ಮೀನಾಕ್ಷಿ ಹಾಗೂ ಕುಟುಂಬದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಆಸ್ತಿಗಾಗಿ ರಕ್ತಸಂಬಂಧಗಳೇ ಮೃಗಗಳಂತೆ ವರ್ತಿಸಿರುವ ಈ ಘಟನೆ ಜಯನಗರ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.