Asianet Suvarna News Asianet Suvarna News

ಜಯದೇವ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿಷೇಧ

ಬೆಂಗಳೂರು ಜಯದೇವ ಫ್ಲೈ ಓವರ್ ನೆಲಸಮ ಪ್ರಕ್ರಿಯೆ ಆರಂಭವಾಗಿದ್ದು ಈ ನಿಟ್ಟಿನಲ್ಲಿ ಇಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಭಾರೀ ಟ್ರಾಫಿಕ್ ಜಾಂ ಉಂಟಾಗುತ್ತಿದೆ. 

Bengaluru Jayadeva flyover demolition begins
Author
Bengaluru, First Published Jan 22, 2020, 8:22 AM IST

ಬೆಂಗಳೂರು [ಜ.22]: ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಹಿನ್ನೆಲೆಯಲ್ಲಿ ಜಯದೇವ ಜಂಕ್ಷನ್‌ ಮೇಲ್ಸೇತುವೆಯ ಲೂಪ್‌ ಮುಖ್ಯ ಭಾಗವನ್ನು ನೆಲಸಮ ಮಾಡುವ ಕಾರ್ಯಾಚರಣೆ ಆರಂಭಗೊಂಡಿದೆ.

ಈ ಹಿನ್ನೆಲೆಯಲ್ಲಿ ಜಯದೇವ ಮೇಲ್ಸೇತುವೆ ಮೇಲಿನ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಜಯದೇವ ಜಂಕ್ಷನ್‌ ಮೇಲ್ಸೇತುವೆ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿದ್ದು ವಾಹನ ಸವಾರರು ಪರಿತಪಿಸುವಂತಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ ಕಾರಿಡಾರ್‌ನ ಮೆಟ್ರೋ ರೈಲು(ಹಂತ-2, ರೀಚ್‌-5) ಮಾರ್ಗದ ನಿರ್ಮಾಣ ಕಾರ್ಯವು ಜಯದೇವ ಆಸ್ಪತ್ರೆ ಮೇಲ್ಸೇತುವೆ ಜಂಕ್ಷನ್‌ ಬಳಿ ಪ್ರಗತಿಯಲ್ಲಿದೆ. ಜಯದೇವ ಜಂಕ್ಷನ್‌ ಇಂಟರ್‌ಚೇಂಜ್‌ ಮೆಟ್ರೋ ನಿಲ್ದಾಣ ಒಳಗೊಂಡಂತೆ ಎಲಿವೇಟೆಡ್‌ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ರೈಲು ಕಾರಿಡಾರ್‌ ನಿರ್ಮಾಣ ಮಾಡಲು ಆರ್‌.ವಿ.ರಸ್ತೆಯಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ಗೆ ರಸ್ತೆ ಸಂಪರ್ಕ ಕಲ್ಪಿಸುತ್ತಿರುವ ಮೇಲ್ಸೇತುವೆಯನ್ನು ಜ.20ರಿಂದ ತೆರವುಗೊಳಿಸಲಾಗುತ್ತಿದೆ. ಹೀಗಾಗಿ ಎಲ್ಲ ರೀತಿಯ ವಾಹನ ಸಂಚಾರಗಳಿಗೆ ಜಯದೇವ ಮೇಲ್ಸೇತುವೆಯನ್ನು ಮುಚ್ಚಲಾಗಿದೆ.

ಮಾರ್ಗ ಬದಲಾವಣೆ : ಮೇಲ್ಸೇತುವೆ ನೆಲಸಮ ಕಾಮಗಾರಿ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಸಂಚಾರ ನಿಯಮಗಳನ್ನು ಬದಲಾವಣೆ ಮಾಡಿದೆ. ಜಯದೇವ ಮೇಲ್ಸೇತುವೆಯಲ್ಲಿ ಎಲ್ಲಾ ರೀತಿಯ ಟ್ರಾಫಿಕ್‌ಗಳಿಗೂ ನಿರ್ಬಂಧ ವಿಧಿಸಲಾಗಿದೆ. ಹೊರ ವರ್ತುಲ ರಸ್ತೆಯಲ್ಲಿನ 18ನೇ ಮುಖ್ಯರಸ್ತೆಯ ಮಾರೇನಹಳ್ಳಿ-29ನೇ ಮುಖ್ಯರಸ್ತೆಯ ಬಿಟಿಎಂ 2ನೇ ಹಂತ ನಡುವಿನ ರಸ್ತೆಯನ್ನು ಪ್ರತಿದಿನ ರಾತ್ರಿ 10.30ರಿಂದ ಬೆಳಗ್ಗೆ 5.30ರವರೆಗೆ ಎಲ್ಲ ರೀತಿಯ ವಾಹನ ಸಂಚಾರಕ್ಕೆ ಎರಡು ಮಾರ್ಗವನ್ನು ಮುಚ್ಚಲಾಗಿದೆ. ಆದರೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಬಿಎಂಟಿಸಿ ಬಸ್‌, ಆ್ಯಂಬುಲೆನ್ಸ್‌ ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿ ಸರ್ಕಾರದಿಂದ ಬಡವರಿಗೆ ಮನೆ : ಶೀಘ್ರ ಚಾಲನೆ...

ಕಾರುಗಳು, ಖಾಸಗಿ ಬಸ್‌ಗಳು, ಆಟೋರಿಕ್ಷಾಗಳು, ಟ್ರಕ್‌, ಟ್ರ್ಯಾಕ್ಟರ್‌ ಮತ್ತು ಟ್ರಾಲಿಗಳು ಸೇರಿದಂತೆ ಇತರ ವಾಹನಗಳ ಸಂಚಾರ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿಷೇಧಿಸಲಾಗಿದೆ. ಕಾರು ಮತ್ತು ಆಟೋರಿಕ್ಷಾಗಳು ಹೊರ ವರ್ತುಲ ರಸ್ತೆ ಉದ್ದಕ್ಕೂ ಚಲಿಸದೆ, ಬಿಟಿಎಂ 2ನೇ ಹಂತದ 16ನೇ ಮುಖ್ಯರಸ್ತೆ ಮತ್ತು 29ನೇ ಮುಖ್ಯ ರಸ್ತೆ ಮೂಲಕ ಹಾದು ಹೋಗಬಹುದು.

ಹುಬ್ಬಳ್ಳಿ: ಶೀಘ್ರದಲ್ಲೇ ಚೆನ್ನಮ್ಮ ವೃತ್ತದ ಫ್ಲೈಓವರ್‌ಗೆ ಅನುಮೋದನೆ, ಜೋಶಿ...

ಮಾರೇನಹಳ್ಳಿ ರಸ್ತೆಯ 18ನೇ ಮುಖ್ಯರಸ್ತೆಯಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗಿನ ಆಂತರಿಕ ರಸ್ತೆಗಳು-36ನೇ ತಿರುವು, 28ನೇ ಮುಖ್ಯರಸ್ತೆ, ಈಸ್ಟ್‌ ಎಂಡ್‌ ರಸ್ತೆ, ಜಯನಗರ, ತಾವರೆಕೆರೆ ಮುಖ್ಯರಸ್ತೆ ಹಾಗೂ ಬಿಟಿಎಂ 2ನೇ ಹಂತದ 29ನೇ, 16ನೇ ಮತ್ತು 7ನೇ ಮುಖ್ಯ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ಎಲ್ಲ ಸಮಯದಲ್ಲೂ ನಿಷೇಧಿಸಲಾಗಿದೆ. ಜಯದೇವ ಅಂಡರ್‌ಪಾಸ್‌ನ ಎರಡು ಮಾರ್ಗಗಳ ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಹನ ಸಂಚಾರಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ರಾತ್ರಿ ವೇಳೆ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನ ಮೂರು ತಿಂಗಳು ಕಾಮಗಾರಿ ನಡೆಯಲಿದೆ. ಆದ್ದರಿಂದ ವಾಹನ ಸವಾರರಿಗೆ ಪರಾರ‍ಯಯ ಮಾರ್ಗದ ವ್ಯವಸ್ಥೆಯನ್ನು ಸಂಚಾರ ಪೊಲೀಸರ ಸಹಕಾರದೊಂದಿಗೆ ಮಾಡಲಾಗಿದೆ.

-ಅಜಯ್‌ ಸೇಠ್‌, ಎಂಡಿ, ಬಿಎಂಆರ್‌ಸಿಎಲ್‌

Follow Us:
Download App:
  • android
  • ios