ಬೆಂಗಳೂರು [ಜ.22]: ರಾಜಧಾನಿ ಬೆಂಗಳೂರಿನಲ್ಲಿ ಬಡವರಿಗೆ ಮನೆ ನೀಡುವ ಯೋಜನೆಗಳು ವಿಳಂಬವಾಗುವುದನ್ನು ತಪ್ಪಿಸಲು ಇನ್ನು ಮುಂದೆ ಒಬ್ಬ ಗುತ್ತಿಗೆದಾರನಿಗೆ ಗರಿಷ್ಠ 500 ಮನೆಗಳ ನಿರ್ಮಾಣದ ಗುತ್ತಿಗೆಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾವಿರಾರು ಮನೆ ನಿರ್ಮಾಣ ಗುತ್ತಿಗೆ ತೆಗೆದುಕೊಂಡ ಗುತ್ತಿಗೆದಾರರು ಸಕಾಲದಲ್ಲಿ ಮನೆ ನಿರ್ಮಿಸಿ ಕೊಡದೆ ಬಡವರಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಬ್ಬ ಗುತ್ತಿಗೆದಾರನಿಗೆ 500 ಮನೆ ನಿರ್ಮಾಣದ ಗುತ್ತಿಗೆ ನೀಡಲಾಗುವುದು, ವಿಶೇಷ ಪ್ರಸಂಗದಲ್ಲಿ ಮಾತ್ರ 600-1000 ಸಾವಿರ ಮನೆ ನಿರ್ಮಾಣದ ಗುತ್ತಿಗೆ ವಹಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ವಸತಿ ಯೋಜನೆ:

ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಒಂದು ಲಕ್ಷ ಮನೆ ನಿರ್ಮಾಣ ಕಾಮಗಾರಿಗೆ ಬರುವ ಫೆಬ್ರವರಿ 15ರ ನಂತರ ಚಾಲನೆ ನೀಡಲಾಗುತ್ತದೆ. ಈ ಮನೆಗಳನ್ನು ಆಟೋ ಚಾಲಕರು, ಮನೆಗೆಲಸದವರು, ಕಾರ್ಪೆಂಟರ್‌, ಕೂಲಿ ಕೆಲಸ ಮಾಡುವವರು ಸೇರಿದಂತೆ ಬಡವರಿಗೆ ನೀಡಲಾಗುವುದು. ಪ್ರತಿ ಮನೆಗೆ ಐದಾರು ಲಕ್ಷ ರುಪಾಯಿ ಬೆಲೆ ನಿಗದಿ ಬದಲು ಎರಡ್ಮೂರು ಲಕ್ಷಕ್ಕೆ ಇಳಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಈ ಮನೆ ನಿರ್ಮಾಣಕ್ಕೆ ಈಗಾಗಲೇ 332 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಸುಮಾರು 700 ಎಕರೆ ಭೂಮಿಯನ್ನು ಕ್ವಾರಿ ಹೊರತುಪಡಿಸಿ ಉಳಿದ ಕಡೆ ಸ್ವಾಧೀನ ಪಡಿಸಿಕೊಳ್ಳುತ್ತೇವೆ ಎಂದರು.

ಸುವರ್ಣನ್ಯೂಸ್ ಸುದ್ದಿಗೆ ಬೆದರಿದ ಬೆಂಗಳೂರಿನ ಬಾಂಗ್ಲಾ..!...

ರಾಜೀವ್‌ ಗಾಂಧಿ ವಸತಿ ನಿಗಮದಿಂದ 54 ಸಾವಿರ ಮನೆ ನಿರ್ಮಿಸಲಾಗುವುದು ಈ ಪೈಕಿ ಆರು ಸಾವಿರ ಮನೆಗಳಿಗೆ ಟೆಂಡರ್‌ ಕರೆಯಲಾಗಿದೆ. ಉಳಿದ 44 ಸಾವಿರ ಮನೆಗಳಿಗೆ ಟೆಂಡರ್‌ ಕರೆಯಲಾಗುವುದು, 2021-2022ರೊಳಗೆ 50 ಸಾವಿರ ಮನೆ ಕಟ್ಟಲಾಗುವುದು. ಈ ಮನೆಗಳನ್ನು ನೆಲಮಟ್ಟಸೇರಿದಂತೆ ಮೂರು ಮಹಡಿಗಳನ್ನು ನಿರ್ಮಾಣ ಮಾಡಲಾಗುವುದು. ಕೇಂದ್ರ ಸರ್ಕಾರ ಸಹ ಇದಕ್ಕೆ ಅನುಮತಿ ನೀಡಿದೆ ಎಂದು ಸಚಿವರು ವಿವರಿಸಿದರು.

ಬೆಂಗಳೂರು : ಮನೆ ನಿರ್ಮಿಸುವವರೇ ಎಚ್ಚರ!...

ಈ ಮನೆಗಳ ನಿರ್ಮಾಣಕ್ಕೆ ಬಿಡಿಎಯಿಂದ ನಕ್ಷೆ ಮಂಜೂರಾಗಿದೆ. ಅನೇಕಲ್‌, ಕನಕಪುರ, ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರದಿಂದ ಒಂದೆರಡು ದಿನಗಳಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಕೊಳಚೆ ಮುಕ್ತ ಬೆಂಗಳೂರು:

ಬೆಂಗಳೂರು ನಗರವನ್ನು ಕೊಳಚೆ ಮುಕ್ತ ಪ್ರದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ 1.80 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು. ಈ ಮನೆಗಳ ಫಲಾನುಭವಿಗಳ ಪಾಲನ್ನು ಒಂದು ಲಕ್ಷ ರು.ಗೆ ನಿಗದಿಗೊಳಿಸುವ ಚಿಂತನೆ ಇದೆ. ಈ ಮನೆಗಳ ನಿರ್ಮಾಣಕ್ಕೆ ಪಾಲಿಕೆಯಿಂದ ಶೇ. 10ರಷ್ಟುಅನುದಾನ ಪಡೆಯಲಾಗುವುದು ಎಂದರು.

ಮಹಿಳೆಯರ ಹೆಸರಿಗೆ ಮನೆ:

ಸರ್ಕಾರ ನೀಡುವ ಮನೆಗಳನ್ನು ಕುಟುಂಬದ ಮಹಿಳೆಯ ಹೆಸರಿಗೆ ನೋಂದಣಿ ಮಾಡಲಾಗುವುದು. ಇದರಿಂದ ಮನೆ ಪರಭಾರೆ ತಡೆಯಬಹುದು ಎಂದ ಸಚಿವರು, ಸರ್ಕಾರ ನೀಡುವ ಮನೆಗಳನ್ನು ಬಾಡಿಗೆ ನೀಡುತ್ತಿರುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಬಿಬಿಎಂಪಿಯಿಂದ ಸಮೀಕ್ಷೆ ಮಾಡಲಾಗುವುದು ಎಂದರು.

ಸಿಇಒಗೆ ಅಧಿಕಾರ:

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಅಧಿಕಾರ ಪಂಚಾಯಿತಿಗಳಿಗೆ ಇದ್ದ ಅಧಿಕಾರ ಹಿಂಪಡೆದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನೀಡಲಾಗಿದೆ. ಸಿಇಒ ಮನೆ ಕಟ್ಟಲಾಗಿದೆ ಎಂದು ಪ್ರಮಾಣ ಪತ್ರ ನೀಡಿದರೆ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.