ಹುಬ್ಬಳ್ಳಿ(ಜ.16): ಮಹಾನಗರದ ಬಹುನಿರೀಕ್ಷಿತ ರಾಣಿ ಚೆನ್ನಮ್ಮನ ವೃತ್ತದ ಫ್ಲೈಓವರ್‌ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ನಗರದ ರೈಲ್ವೆ ನಿಲ್ದಾಣ ಬಳಿಯ ಸೇತುವೆಯಿಂದ ಕೇಶ್ವಾಪುರ, ನಾಗಶೆಟ್ಟಿಕೊಪ್ಪ, ಗೋಪನಕೊಪ್ಪ ಮಾರ್ಗವಾಗಿ ಸಾಯಿನಗರ ಉಣಕಲ್‌ವರೆಗಿನ ಕೇಂದ್ರ ರಸ್ತೆ ನಿಧಿ ಅನುದಾನದ ಅಡಿಯಲ್ಲಿ 40 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಹಳ ವರ್ಷಗಳಿಂದ ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ಯೋಜನೆ ತರಬೇಕೆಂಬುದಿತ್ತು. ಈ ನಿಟ್ಟಿನಲ್ಲಿ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಕೇಂದ್ರದಿಂದ ಅನುಮೋದನೆ ಸಿಗಲಿದೆ. ಅದಾದ ಬಳಿಕ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಉತ್ತಮ ನಾಯಕತ್ವ ಮತ್ತು ಸ್ಥಿರ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದ ಅವರು, ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಸಿಆರ್‌ಎಫ್‌ನಿಂದ ಒಟ್ಟು 460 ಕೋಟಿ ವೆಚ್ಚದಲ್ಲಿ ಮಹಾನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಸಹಕಾರದಿಂದ ಉತ್ತಮ ಕಾಮಗಾರಿ ಮಾಡಬೇಕಿದೆ. ನಿರ್ಮಿಸಲಾದ ರಸ್ತೆಗಳನ್ನು ಬೇರೆ ಕಾರಣಗಳಿಂದ ಮತ್ತೆ ಅಗೆಯುವ ಕಾರ್ಯಕ್ಕೆ ಮುಂದಾಗಬಾರದು. ಒಂದು ವೇಳೆ ರಸ್ತೆ ಆದ ಬಳಿಕ ಯಾರಾದರೂ ಅಗೆದರೆ ಅವರ ವಿರುದ್ಧ ಪಾಲಿಕೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಅಭಿವೃದ್ಧಿ ವಿಚಾರಕ್ಕೆ ಪಕ್ಷಾತೀತವಾಗಿ ಬೆಂಬಲಿಸಲಾಗುವುದು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಒಂದಾಗಬೇಕಿದೆ. ಈ ವಿಚಾರವಾಗಿ ಹಳೇ ಮೈಸೂರು ಭಾಗದ ರಾಜಕಾರಣಿಗಳಿಂದ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಕಲಿಯಬೇಕಿದೆ ಎಂದರು.

ಮಹದಾಯಿ ವಿಚಾರವಾಗಿ ಪಕ್ಷಾತೀತವಾಗಿ ಚರ್ಚೆ ನಡೆದಿದ್ದು ಸಂತಸ ತಂದಿದೆ. ಅದೇ ರೀತಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಲ್ಲರೂ ಒಂದಾಗೋಣ ಎಂದ ಅವರು, ಮುಂಬರುವ ನಾಲ್ಕು ವರ್ಷದಲ್ಲಿ ಮಹಾನಗರವನ್ನು ಮಾದರಿ ನಗರವನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಹೆಜ್ಜೆ ಹಾಕೋಣ ಎಂದು ಹೇಳಿದರು.

ಸಚಿವ ಜಗದೀಶ ಶೆಟ್ಟರ ಮಾತನಾಡಿ, ಮಹಾನಗರದಲ್ಲಿ ಸಾಕಷ್ಟುಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. . 26 ಕೋಟಿ ವೆಚ್ಚದ 40 ಎಂಎಲ್‌ಡಿ ಕುಡಿಯುವ ನೀರು ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಇನ್ನು ಶೇ.60 ರಷ್ಟುಬಾಕಿ ಉಳಿದಿರುವ ದಿನದ 24 ಗಂಟೆ ಕುಡಿಯುವ ನೀರು ಯೋಜನೆ ಕಾಮಗಾರಿಗೆ . 700 ಕೋಟಿ ಪ್ರಸ್ತಾವನೆ ವಲ್ಡ್‌ರ್‍ ಬ್ಯಾಂಕ್‌ನಲ್ಲಿದೆ. ಲೋಕೋಪಯೋಗಿ ಇಲಾಖೆಯಿಂದ . 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಪ ಸದಸ್ಯ ಪ್ರದೀಪ ಶೆಟ್ಟರ, ವಾಕರಸಾಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌, ಹು-ಧಾ ಮಹಾನಗರ ಬಿಜೆಪಿ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಮೇಯರ್‌ ಸುಧೀರ್‌ ಸರಾಫ್‌, ಮೇನಕಾ ಹುರಳಿ, ರವಿ ನಾಯಕ, ಶಿವು ಮೆಣಸಿನಕಾಯಿ ಸೇರಿದಂತೆ ಇತರರು ಇದ್ದರು.

ಜಾತಿ ವ್ಯವಸ್ಥೆಯಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಸ್ವಾಮೀಜಿಗಳು ರಾಜಕಾರಣದಲ್ಲಿ ಬರಬಾರದು. ಯಾರನ್ನಾದರೂ ಸಚಿವರನ್ನಾಗಿ ಮಾಡಲಿ ಸ್ವಾಮೀಜಿಗಳಿಗೇಕೆ ಆ ಚಿಂತೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.