ಬೆಂಗಳೂರು,(ಜು.15): ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಇಂದಿನಿಂದ ಬೆಂಗಳೂರಿನಲ್ಲಿ 8 ದಿನಗಳ ಕಾಲ ಲಾಕ್‍ಡೌನ್ ಮೂಲಕ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದರೂ ತಮಗೂ ಅದಕ್ಕೂ ಸಂಬಂಧವಿಲ್ಲವೇನೋ ಎಂದು ಜನ ತಮ್ಮ ಪಾಡಿಗೆ ತಾವು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.

ಸೋಂಕು ವ್ಯಾಪಿಸಬಾರದು ಎಂದು ಎಲ್ಲವನ್ನೂ ನಿರ್ಬಂಧಗೊಳಿಸಿ ಜನ ಮನೆಯಲ್ಲಿರಬೇಕೆಂದು ಹೇಳಿದ್ದರೂ ಕೂಡ ಅದಕ್ಕೆ ಕ್ಯಾರೆ ಎನ್ನದೇ ಜನ ತಮ್ಮ ವಾಹನಗಳಲ್ಲಿ ಓಡಾಡುತ್ತಿರುವುದು ಮೊದಲನೇ ದಿನ ಇಂದು (ಬುಧವಾರ) ಕಂಡು ಬಂತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ.

ರಸ್ತೆಗಿಳಿಯಬೇಡಿ, 12 ಗಂಟೆ ನಂತರ ಹೊರ ಬಂದ್ರೆ ಲಾಠಿ ಏಟು ಪಕ್ಕಾ; ಗೃಹ ಸಚಿವ

ಇನ್ನು ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದು, ವಿಮಾನನಿಲ್ದಾಣ, ರೈಲು ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದೆ. ಇದ್ರಿಂದ ಜನರ ಓಡಾಟ ಸಹಜವಾಗಿರುತ್ತದೆ. ಬೆಂಗಳೂರು ನಗರವನ್ನು ನಿದ್ರೆ ಮಾಡಿಸಬಹುದು. ಆದರೆ ಸ್ಮಶಾನ ಮಾಡಲು ಆಗೋದಿಲ್ಲ ಎಂದು ತಿಳಿಸಿದರು.

ಬೆಂಗಳೂರು ದೊಡ್ಡ ನಗರವಾಗಿದ್ದು, ಅಂತರರಾಷ್ಟ್ರೀಯ ಸಂಪರ್ಕ ಹೊಂದಿದೆ. ಈ ಸಂಬಂಧ ವ್ಯವಹಾರಗಳು ನಡೆಯುತ್ತದೆ. ಎಲ್ಲದಕ್ಕೂ ಲಾಠಿ ಏಟು ಪರಿಹಾರ ಅಲ್ಲ ಎಂದು ಹೇಳಿದರು.

ಬೆಂಗಳೂರು ದೊಡ್ಡ ನಗರವಾಗಿದ್ದು, ಕೆಲವು ಅವಶ್ಯಕ ಚಟುವಟಿಕೆಗಳನ್ನು ನಡೆಸಲೇಬೇಕಾಗುತ್ತದೆ. ಎಲ್ಲವನ್ನೂ ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಜನರ ಓಡಾಟ ಇದೆ ಎಂದರು.