ಬಿಬಿಎಂಪಿ: ಬೆಂಗ್ಳೂರಿನ ಐತಿಹಾಸಿಕ ವಾರ್ಡ್‌ಗಳ ಹೆಸರೇ ಮಾಯ..!

*  ಕೆಂಗೇರಿ, ಜಯನಗರ, ಜಾಲಹಳ್ಳಿ, ಕೆ.ಆರ್‌.ಮಾರುಕಟ್ಟೆಗಳ ಸೇರಿ ಹಲವು ವಾರ್ಡ್‌ ಹೆಸರು ಬದಲು
*  ಸಾರ್ವಜನಿಕರಿಂದ ತೀವ್ರ ಆಕ್ಷೇಪ
*  ಮಾತುಕತೆ ನಡೆಸದೇ ವಾರ್ಡ್‌ ವಿಂಗಡಣೆ
 

Bengaluru Historical Wards Names Missing in BBMP Ward Sorting grg

ಬೆಂಗಳೂರು(ಜೂ.25): ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಕರಡು ಸಿದ್ಧಪಡಿಸುವ ಐತಿಹಾಸಿ ಪ್ರಸಿದ್ಧ ವಾರ್ಡ್‌ ಹೆಸರುಗಳನ್ನು ಕೈ ಬಿಟ್ಟಿರುವುದಕ್ಕೆ ಹಾಗೂ ಜನರ ಅಭಿಪ್ರಾಯ ಪಡೆಯದೇ ವರದಿ ತಯಾರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಿಬಿಎಂಪಿಯ ವಾರ್ಡ್‌ ಮರು ವಿಂಗಡಣೆ ವೇಳೆ ವಾರ್ಡ್‌ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲಾಗಿದೆ. ಈ ವೇಳೆ 45 ಹೊಸ ವಾರ್ಡ್‌ಗಳು ರೂಪಗೊಂಡಿವೆ. ಜತೆಗೆ, ಹಳೇಯ ಕೆಲವು ವಾರ್ಡ್‌ಗಳ ಹೆಸರುಗಳನ್ನು ಬದಲಾವಣೆ ಮಾಡಲಾಗಿದೆ. ಈ ಪೈಕಿ ಕೆಂಗೇರಿ, ಜಯನಗರ, ಜಾಲಹಳ್ಳಿ, ದೇವರಜೀವನಹಳ್ಳಿ, ಮಂಜುನಾಥ ನಗರ, ಶೇಷಾದ್ರಿಪುರ, ಕೆ.ಆರ್‌.ಮಾರುಕಟ್ಟೆಸೇರಿದಂತೆ ಮೊದಲಾದ ಪ್ರಸಿದ್ಧ ಮತ್ತು ಐತಿಹಾಸಿಕ ಹಿನ್ನೆಲೆ ಇರುವ ವಾರ್ಡ್‌ ಹೆಸರುಗಳನ್ನು ಕೈ ಬಿಡಲಾಗಿದೆ. ಇದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿಬಿಎಂಪಿ ಹೊಸ ವಾರ್ಡ್‌ಗಳ ಪಟ್ಟಿ ಪ್ರಕಟ: ಆಕ್ಷೇಪ ಆಹ್ವಾನ

ಕೆಂಗೇರಿಗೆ 400 ವರ್ಷದ ಇತಿಹಾಸ

ಕೆಂಗೇರಿಯು ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮವಾಗಿದೆ. ಮೈಸೂರು ಮಹಾರಾಜರು ಬೆಂಗಳೂರಿಗೆ ಆಗಮಿಸುವ ವೇಳೆ ಕೆಂಗೇರಿಯಲ್ಲಿ ತಂಗುತ್ತಿದ ಸ್ಥಳವಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿಜೀ ಅವರು ಕೆಂಗೇರಿಯ ವಿದ್ಯಾಪೀಠದಲ್ಲಿರುವ ತೆರೆದ ಬಾವಿಗೆ ಪೂಜೆ ಸಲ್ಲಿಸಿದ್ದರು. ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದ ಇತಿಹಾಸವಿದೆ. ವಾರ್ಡ್‌ ಮರು ವಿಂಗಡಣೆ ಸಂದರ್ಭದಲ್ಲಿ ಕೆಂಗೇರಿಯನ್ನು ಪ್ರತ್ಯೇಕವಾಗಿ ವಾರ್ಡ್‌ ಮಾಡಿಲ್ಲ. ಇದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕೆಂಗೇರಿ ಹಿತರಕ್ಷಣಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಜಯನಗರ ಬೆಂಗಳೂರಿನ ಮೊದಲ ಪ್ಲ್ಯಾನ್ಡ್‌ ಲೇಔಟ್‌

ಜಯನಗರ ಸ್ವಾತಂತ್ರ್ಯ ಭಾರತದ ಬೆಂಗಳೂರಿನ ಮೊದಲ ಯೋಜಿತ ಬಡಾವಣೆ ಹಾಗೂ ಏಷ್ಯಾದಲ್ಲಿ ಅತಿ ದೊಡ್ಡ ಬಡಾವಣೆ ಎಂಬ ಖ್ಯಾತಿ ಹೊಂದಿತ್ತು. ವಾರ್ಡ್‌ ಮರು ವಿಂಗಡಣೆ ವೇಳೆ ಜಯನಗರ ವಾರ್ಡ್‌ ಹೆಸರನ್ನು ಅಶೋಕ ಸ್ತಂಬ ವಾರ್ಡ್‌ ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಇದು ಸ್ಥಳೀಯ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಮಾಜಿ ಮೇಯರ್‌ ಗಂಗಾಂಬಿಕೆ ಆರೋಪಿಸಿದ್ದಾರೆ. ಜತೆಗೆ, ಜಯನಗರ ಹೆಸರು ಉಳಿಸಿಕೊಳ್ಳುವುದು ನಮ್ಮ ಆಧ್ಯಕರ್ತವ್ಯವಾಗಿದೆ ಎಂದಿದ್ದಾರೆ.

BBMP ವಾರ್ಡ್‌ ಸಂಖ್ಯೆ ಹೆಚ್ಚಿಸಿದ್ರೆ ಚುನಾವಣೆ 1 ವರ್ಷ ತಡ..!

ಮಾತುಕತೆ ನಡೆಸದೇ ವಾರ್ಡ್‌ ವಿಂಗಡಣೆ: ತುಷಾರ್‌ ಗಿರಿನಾಥ್‌

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಬಿಬಿಎಂಪಿಯ ಕೆಲ ವಾರ್ಡ್‌ಗಳ ಹೆಸರನ್ನು ಜನರ ಭಾವನೆಯನ್ನು ಅರಿತು ಬದಲಿಸಲಾಗಿದೆ. ಆ ಕುರಿತು ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಜತೆಗೆ ವಾರ್ಡ್‌ ಮರುವಿಂಗಡಣೆ ವಿಚಾರವಾಗಿ ಯಾವುದೇ ಪಕ್ಷದ ಶಾಸಕರ ಜತೆಗೂ ಸಭೆ ನಡೆಸಿಲ್ಲ. ವಾರ್ಡ್‌ ಮರುವಿಂಗಡಣೆ ಕುರಿತು ಯಾರೇ ಆರೋಪ ಮಾಡಿದರೂ, ನಿಯಮದಂತೆ ನಾವು ಕರಡು ವರದಿ ಸಿದ್ಧಪಡಿಸಿದ್ದೇವೆ ಎನ್ನುತ್ತಾರೆ.

ಕಾಣೆಯಾದ ವಾರ್ಡ್‌ಗಳಿವು

ದೊಡ್ಡ ರೈಲ್ವೆ ನಿಲ್ದಾಣ, ಎಪಿಎಂಸಿ ಮಾರುಕಟ್ಟೆಸೇರಿದಂತೆ ಮೊದಲಾದ ಪ್ರಸಿದ್ಧ ಸ್ಥಳಗಳನ್ನು ಹೊಂದಿರುವ ಯಶವಂತಪುರ ವಾರ್ಡ್‌, ರಾಗಿಗಡ್ಡ ಆಂಜನೇಯ ಸ್ವಾಮಿ ದೇವಸ್ಥಾನ ಇರುವ ರಾಗಿಗುಡ್ಡ ವಾರ್ಡ್‌, ಬ್ರಿಟಿಷ್‌ ಅವಧಿಯಲ್ಲಿ ನಿರ್ಮಾಣಗೊಂಡ ಕೆ.ಆರ್‌.ಮಾರುಕಟ್ಟೆ, ಗುಂಡಾಂಜನೇಯ ವಾರ್ಡ್‌, ಚಿಕ್ಕಸಂದ್ರ, ಜಾಲಹಳ್ಳಿ, ಬೃಂದಾನವನ ನಗರ, ಚಳ್ಳಕೆರೆ, ದೊಡ್ಡ ಬಿದರಕಲ್ಲು, ದೇವರಜೀವನಹಳ್ಳಿ, ಬಿನ್ನಿಗನಹಳ್ಳಿ, ರಾಮಮೂರ್ತಿ ನಗರ, ಸರ್ವಜ್ಞನಗರ, ಲಗ್ಗೇರೆ, ಕೊಟ್ಟಿಗೆ ಪಾಳ್ಯ, ಮಂಜುನಾಥ ನಗರ, ಶೇಷಾದ್ರಿಪುರ, ಹಗದೂರು, ಸಿದ್ದಾಪುರ, ದೀಪಾಂಜಲಿ ನಗರ, ನಾಗದೇವನಹಳ್ಳಿ, ಕರಿಸಂದ್ರ, ಇಟ್ಟಮಡು, ಪುಟ್ಟೇನಹಳ್ಳಿ, ಹೆಮ್ಮಿಗೆಪುರ ಸೇರಿ ಹಲವು ವಾರ್ಡ್‌ ಹೆಸರು ಕೈಬಿಡಲಾಗಿದೆ.
 

Latest Videos
Follow Us:
Download App:
  • android
  • ios