ಬೆಂಗಳೂರಿನಲ್ಲಿ ಇ-ಖಾತಾ, ಜನನ-ಮರಣ ಪ್ರಮಾಣಪತ್ರಗಳಂತಹ ಸೇವೆಗಳನ್ನು 48-72 ಗಂಟೆಗಳಲ್ಲಿ ನೀಡಲು 'ಗ್ಯಾರಂಟಿ ಸೇವಾ ಕೇಂದ್ರ' ಸ್ಥಾಪಿಸಲು ಜಿಬಿಎ ಚಿಂತಿಸಿದೆ. ಪಾಸ್‌ಪೋರ್ಟ್ ಸೇವಾ ಕೇಂದ್ರದ ಮಾದರಿಯಲ್ಲಿ ಹೈಟೆಕ್ ಸೌಲಭ್ಯಗಳೊಂದಿಗೆ ಒಂದೇ ಸೂರಿನಡಿ ಈ ಸೇವೆಗಳು ಲಭ್ಯವಾಗಲಿವೆ.
ಬೆಂಗಳೂರು (ಅ.04): ಬೆಂಗಳೂರಿನ ನಾಗರಿಕರು ಇ-ಖಾತಾ, ವ್ಯಾಪಾರ ಪರವಾನಗಿ (ಟ್ರೇಡ್ ಲೈಸನ್ಸ್), ಜನನ ಮತ್ತು ಮರಣ ಪ್ರಮಾಣಪತ್ರಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಕಿರಿಕಿರಿಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ. ಸಾರ್ವಜನಿಕರಿಗೆ ಈ ಎಲ್ಲಾ ಅಗತ್ಯ ನಾಗರಿಕ ಸೇವೆಗಳನ್ನು ಕೇವಲ 48 ರಿಂದ 72 ಗಂಟೆಗಳ ಕಾಲಮಿತಿಯೊಳಗೆ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ, 'ಪಾಸ್‌ಪೋರ್ಟ್ ಸೇವಾ ಕೇಂದ್ರ' ಮಾದರಿಯಲ್ಲಿ ಅತ್ಯಾಧುನಿಕ ‘ಗ್ಯಾರಂಟಿ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚಿಂತನೆ ನಡೆಸಿದೆ.
ಐದು ಕಡೆ ಹೈಟೆಕ್ ಕೇಂದ್ರಗಳು:
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP ಮಾದರಿ) ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಈ ‘ಗ್ಯಾರಂಟಿ ಸೇವಾ ಕೇಂದ್ರ’ಗಳನ್ನು ತೆರೆಯಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕೇಂದ್ರಗಳು ಸಂಪೂರ್ಣ ಹವಾನಿಯಂತ್ರಿತ (AC) ಆಗಿರಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ವೇಟಿಂಗ್ ಏರಿಯಾ, ಟೋಕನ್ ವ್ಯವಸ್ಥೆ ಮತ್ತು ಹೆಲ್ಪ್ ಡೆಸ್ಕ್‌ಗಳನ್ನು ಹೊಂದಿರಲಿವೆ.
ಹಾಲಿ ವ್ಯವಸ್ಥೆಗಿಂತ ಹೇಗೆ ಭಿನ್ನ?
ಪ್ರಸ್ತುತ ಇರುವ 'ಬೆಂಗಳೂರು ಒನ್' ಅಥವಾ ಪಾಲಿಕೆ ಕಚೇರಿಗಳಿಗಿಂತ ಈ ಕೇಂದ್ರಗಳು ಸಂಪೂರ್ಣ ಭಿನ್ನವಾಗಿ ಕಾರ್ಯನಿರ್ವಹಿಸಲಿವೆ. ಇಲ್ಲಿ ಯಾವುದೇ ಒಂದು ಸೇವೆಗೆ ಅರ್ಜಿ ಸಲ್ಲಿಸಿದರೆ, ಪರಿಶೀಲನೆ ಅಥವಾ ಅಧಿಕಾರಿಗಳ ಅನುಮೋದನೆಗಾಗಿ ಬೇರೆ ಬೇರೆ ಕಚೇರಿಗಳಿಗೆ ಅಲೆಯಬೇಕಿಲ್ಲ. ಅರ್ಜಿ ಸಲ್ಲಿಕೆಯಿಂದ ಹಿಡಿದು ಅಂತಿಮ ದಾಖಲೆ ವಿತರಣೆಯಾಗುವವರೆಗಿನ ಸಂಪೂರ್ಣ ಪ್ರಕ್ರಿಯೆ ಒಂದೇ ಸೂರಿನಡಿ ನಡೆಯಲಿದೆ. ಇದಕ್ಕಾಗಿ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳನ್ನೇ ಈ ಕೇಂದ್ರಗಳಲ್ಲಿ ನೇರವಾಗಿ ನಿಯೋಜಿಸಲಾಗುತ್ತದೆ.
ಕಾಲಮಿತಿ ಖಾತ್ರಿ & ಶುಲ್ಕ:
ಈ ಕುರಿತು ಮಾಹಿತಿ ನೀಡಿರುವ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನಿಷ್ ಮೌದ್ಗಿಲ್ ಅವರು, 'ಸಾಮಾನ್ಯ ಸೇವೆಗಳನ್ನು ಕೇವಲ 48 ಗಂಟೆಗಳ ಒಳಗಾಗಿ ಒದಗಿಸಲಾಗುತ್ತದೆ. ಸ್ಥಳ ಪರಿಶೀಲನೆ (ಫೀಲ್ಡ್ ವೆರಿಫಿಕೇಷನ್) ಅಗತ್ಯವಿದ್ದರೆ ಗರಿಷ್ಠ 72 ಗಂಟೆಗಳನ್ನು ತೆಗೆದುಕೊಳ್ಳಲಾಗುತ್ತದೆ. ನಾಗರಿಕರಿಗೆ ನಿಗದಿತ ಸಮಯದಲ್ಲಿ ಸೇವೆ ನೀಡುವುದು ನಮ್ಮ ಮುಖ್ಯ ಉದ್ದೇಶ' ಎಂದಿದ್ದಾರೆ. ತುರ್ತು ಮತ್ತು ತ್ವರಿತ ಸೇವೆ ಒದಗಿಸುವುದರಿಂದ ಸಾಮಾನ್ಯ ಕಚೇರಿಗಳಿಗಿಂತ ಇಲ್ಲಿ ಸೇವಾ ಶುಲ್ಕ ತುಸು ಹೆಚ್ಚಿರಲಿದ್ದು, ದರ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.


