ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಉಡುಪಿಯ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದೆ. ದೋಷ ಪರಿಹಾರ ಮತ್ತು ಹರಕೆ ತೀರಿಸಲು 'ನವಚಂಡಿಕಾಯಾಗ' ನಡೆಸಿದೆ ಎಂದು ತಿಳಿದುಬಂದಿದೆ.

ಉಡುಪಿ: ಬ್ಯುಸಿ ರಾಜಕಾರಣದ ಶೆಡ್ಯೂಲ್‌ಗಳ ನಡುವೆಯೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕುಟುಂಬ ಕೊಲ್ಲೂರಿಗೆ ಭೇಟಿ ನೀಡಿತ್ತು. ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿ ದೇವಿಯ ದರ್ಶನ ಪಡೆಯಿತು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿಯೊಂದಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ, ನಿಖಿಲ್ ಪುತ್ರ ಪೂಜಾ ಕೈಂಕಾರ್ಯದಲ್ಲಿ ಭಾಗಿಯಾದರು. ಈ ವೇಳೆ ಕುಮಾರಸ್ವಾಮಿ ಕುಟುಂಬವು ನವಚಂಡಿಕಾಯಾಗ ಮಾಡಿದೆ ಎಂದು ತಿಳಿದುಬಂದಿದೆ.

ಹರಕೆ ತೀರಿಸಿದ ನಿಖಿಲ್

ಸುಮಾರು ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಹರಕೆಯ ಹಿನ್ನೆಲೆಯಲ್ಲಿ ಕೊಲ್ಲೂರಿಗೆ ಭೇಟಿ ನೀಡಿತ್ತು. ಕುಟುಂಬದ ಒಳಿತಿಗಾಗಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 'ನವಚಂಡಿಕಾಯಾಗ' ಮತ್ತು ಪೂರ್ಣಾಹುತಿ ವಿಧಿವಿಧಾನಗಳನ್ನ ನಿಖಿಲ್ ದಂಪತಿ ನೆರವೇರಿಸಿದರು. ದೇವಸ್ಥಾನದ ಪ್ರಧಾನ ತಂತ್ರಿಗಳಾದ ನರಸಿಂಹ ಅಡಿಗ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.

ವಿಶೇಷ ಪೋಸ್ಟ್ ಮಾಡಿದ ನಿಖಿಲ್ ಕುಮಾರಸ್ವಾಮಿ

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ನಿಖಿಲ್ ಕುಮಾರಸ್ವಾಮಿ.. ಕುಟುಂಬ ಸಮೇತವಾಗಿ ಜಗನ್ಮಾತೆ ಶ್ರೀ ಕೊಲ್ಲೂರು ಮೂಕಾಂಬಿಕೆ, ಶ್ರೀ ಕಾಪು ಹೊಸ ಮಾರಿಗುಡಿ, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಸೌತಡ್ಕ ಶ್ರೀ ಗಣಪತಿ ಸನ್ನಿಧಿಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ನಾಡಿಗೆ ಶುಭವಾಗಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಲಾಯಿತು. ಇದೇ ವೇಳೆ ನಾಡಿನೆಲ್ಲಡೆ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸಲಿ ಹಾಗೂ ರೈತರ ಕಲ್ಯಾಣವಾಗಲಿ ಎಂದು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದೆ ಎಂದು ಬರೆದುಕೊಂಡಿದ್ದಾರೆ.

View post on Instagram
 

ಹೆಚ್‌ಡಿ ಕುಮಾರಸ್ವಾಮಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ದೇವಾಲಯಗಳ ಭೇಟಿ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಹೋಮ ಹವನಗಳನ್ನು ನೆರವೇರಿಸುತ್ತಿರುವ ವಿಡಿಯೋಗಳನ್ನ ನಾವು ನೋಡಬಹುದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸುವ ಸಲುವಾಗಿ ಹಾಗೂ ದೋಷ ಪರಿಹಾರಕ್ಕಾಗಿ ಈ ವಿಶೇಷ ಯಾಗವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಈ ವಿಡಿಯೋ ಶೇರ್ ಮಾಡಿರುವ ಕುಮಾರಸ್ವಾಮಿ ಕುಟುಂಬ ಸಮೇತ ಶ್ರೀ ಕೊಲ್ಲೂರು ಮೂಕಾಂಬಿಕೆ ಅಮ್ಮನವರ ದರ್ಶನ ಪಡೆದು, ಪೂಜೆ ಸಲ್ಲಿಸಿದ ಕ್ಷಣ ಎಂದು ಬರೆದುಕೊಂಡಿದ್ದಾರೆ.

ನವಚಂಡಿಕಾ ಯಾಗ ಎಂಬುದು ಆದಿಪರಾಶಕ್ತಿಯಾದ ದುರ್ಗಾದೇವಿಯ (ಚಂಡಿಕಾದೇವಿ) ಅನುಗ್ರಹಕ್ಕಾಗಿ ನಡೆಸುವ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ವೈದಿಕ ಯಜ್ಞವಾಗಿದೆ. ಮಾರ್ಕಂಡೇಯ ಪುರಾಣದ ಅಡಿಯಲ್ಲಿ ಬರುವ ದೇವಿ ಮಾಹಾತ್ಮ್ಯಂ ಅಥವಾ ದುರ್ಗಾ ಸಪ್ತಶತಿಯ 700 ಶ್ಲೋಕಗಳನ್ನು ಒಂಬತ್ತು ಬಾರಿ (ನವ) ಪಾರಾಯಣ ಮಾಡಿ ಹೋಮ ನಡೆಸುವುದರಿಂದ ಇದಕ್ಕೆ 'ನವಚಂಡಿಕಾ ಯಾಗ' ಎಂದು ಹೆಸರು ಬಂದಿದೆ.

View post on Instagram