ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಭಟ್ಕಳದಲ್ಲಿ ಕಾಂಗ್ರೆಸ್ ಕಚೇರಿಗೆ ಜಮೀನು, ಭಾರತ್ ಜೋಡೋ ಯುವಕರ ಸಂಘಟನೆ ರಚನೆ ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇವತ್ತು ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ, ಭಟ್ಕಳದಲ್ಲಿ ಕಾಂಗ್ರೆಸ್ ಕಚೇರಿಗಾಗಿ 1 ಎಕರೆ ಜಮೀನು ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಜಮೀನು ಮಂಜೂರಾತಿ ಹಾಗೂ ಪಕ್ಷ ಮತ್ತು ಯುವ ಸಂಘಟನೆಗಳಿಗೆ ಸಂಬಂಧಿಸಿದ ಇನ್ನಷ್ಟು ಪ್ರಮುಖ ತೀರ್ಮಾನಗಳನ್ನೂ ಇಂದಿನ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. 'ಭಾರತ ಜೋಡೋ ಭವನ'ಕ್ಕೆ ರಾಜ್ಯ ಮಟ್ಟದ ಯುವ ಸಮಿತಿ, ಜಿಲ್ಲಾ ಸಂಯೋಜಕರು ಹಾಗೂ ಪ್ರೇರಕ ಸಮಿತಿಯನ್ನು ರಚಿಸಲು ಸಂಪುಟ ತೀರ್ಮಾನಿಸಿದೆ.
'ಭಾರತ್ ಜೋಡೋ ಯುವಕರ ಸಂಘ'ಗಳಿಗೆ ಉಸ್ತುವಾರಿ ಸಮಿತಿಗಳನ್ನು ರಚಿಸಲು ಸಚಿವ ಸಂಪುಟ ಸಮ್ಮತಿ ನೀಡಿದೆ. ರಾಜ್ಯ ಮಟ್ಟದಲ್ಲಿ ರಚನೆಯಾಗುವ ಯುವ ಸಮಿತಿಯ ರಾಜ್ಯ ಸಂಯೋಜಕರಿಗೆ ರಾಜ್ಯ ಸಚಿವ ಸ್ಥಾನದ ದರ್ಜೆ ಇರಲಿದೆ. ಜೊತೆಗೆ ಜಿಲ್ಲಾ ಮತ್ತು ತಾಲ್ಲೂಕು ಸಂಯೋಜಕರ ನೇಮಕವೂ ಆಗಲಿದೆ. ಇವರಿಗೆಲ್ಲ ಟಿಎ (TA), ಡಿಎ (DA) ಮತ್ತು ಸಾರಿಗೆ ವೆಚ್ಚಕ್ಕಾಗಿ 35 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ವೆಚ್ಚ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಇವತ್ತು ತೆಗೆದುಕೊಂಡ ನಿರ್ಧಾರಗಳು
- ಕತ್ತರಗುಪ್ಪೆ ಬಳಿ ಭಾಗೀರಥಿ ಉಪ್ಪಾರ ಧಾರ್ಮಿಕ ಟ್ರಸ್ಟ್ಗೆ 1,000 ಚದರ ಅಡಿ ಜಮೀನನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ನೀಡಲು ಒಪ್ಪಿಗೆ.
- ಬೆಂಗಳೂರು ಪೂರ್ವ ತಾಲ್ಲೂಕಿನ ಮುನ್ನೇನಕೊಳಲಿನಲ್ಲಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಿರ್ಮಿಸಿ ಸಮಾಜ ಸೇವೆ ಮಾಡುತ್ತಿರುವ 'ಹಾಸ್ಪೈಸ್ ಟ್ರಸ್ಟ್'ಗೆ ಈ ಹಿಂದೆ ನೀಡಿದ್ದ 5 ಎಕರೆ ಜಮೀನಿನ ಗುತ್ತಿಗೆಯನ್ನು ಒಟ್ಟು 30 ವರ್ಷಗಳಿಗೆ ನವೀಕರಿಸಿ ವಿಸ್ತರಿಸಲು ತೀರ್ಮಾನ.
- ಮಾಗಡಿ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಎಪಿಎಂಸಿಗೆ (APMC) ಅರ್ಧ ಎಕರೆ ಜಮೀನು ನೀಡಲು ನಿರ್ಧಾರ.
- ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ಅವರನ್ನು ಅಮಾನತುಗೊಳಿಸಿ, ಮುಂದಿನ ವಿಚಾರಣೆ ನಡೆಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಅನುಮೋದನೆ.
- ರಾಜ್ಯದ ಕೃಷಿ ಚಟುವಟಿಕೆ ಹಾಗೂ ಮಾರುಕಟ್ಟೆ ಅಭಿವೃದ್ಧಿಗಾಗಿ 3 ವರ್ಷಕ್ಕೆ 100 ಕೋಟಿ ರೂ. ಅನುದಾನದ 'ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ' (ಈ ವರ್ಷ 30 ಕೋಟಿ ರೂ. ವೆಚ್ಚ) ಘೋಷಣೆ.
- ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ 977 ಕೋಟಿ ರೂ. ಬಾಕಿ ಸಾಲಕ್ಕೆ, ಫಲಾನುಭವಿಗಳ ಮನವಿಯಂತೆ ಒಂದು ಬಾರಿಗೆ ಸಾಲದ ಬಡ್ಡಿ ಮನ್ನಾ ಮಾಡಲು ತೀರ್ಮಾನ.
- ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ 5,000 ವಿದ್ಯಾರ್ಥಿಗಳಿಗೆ (ಬಿಇ, ಬಿಟೆಕ್, ಎಂಬಿಎ ವಿದ್ಯಾರ್ಥಿಗಳಿಗೆ ಮಾತ್ರ; ಮೆಡಿಕಲ್ ವಿದ್ಯಾರ್ಥಿಗಳಿಗೆ ಅನ್ವಯವಾಗಲ್ಲ) ತಲಾ 50 ಸಾವಿರ ರೂ. ವೆಚ್ಚದಲ್ಲಿ ಒಟ್ಟು 25 ಕೋಟಿ ರೂ. ಅನುದಾನದಲ್ಲಿ ಡಿಬಿಟಿ (DBT) ಬದಲು ನೇರವಾಗಿ ಲ್ಯಾಪ್ಟಾಪ್ ವಿತರಿಸಲು ಒಪ್ಪಿಗೆ.
- ರಾಜೀವ್ ಗಾಂಧಿ ವಸತಿ ನಿಗಮದಡಿ 2,241 ಕೋಟಿ ರೂ. ವೆಚ್ಚದಲ್ಲಿ 1 ಲಕ್ಷ ಹೊಸ ಮನೆಗಳ ನಿರ್ಮಾಣ, ಶ್ರಮಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಹಾಗೂ 1,700 ಕೋಟಿ ರೂ. ವೆಚ್ಚದಲ್ಲಿ 2,000 ಎಲೆಕ್ಟ್ರಿಕ್ ಬಸ್ ಖರೀದಿಗೆ ಅನುಮೋದನೆ ನೀಡಲಾಗಿದೆ.















