ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಹಲವು ಹೋಟೆಲ್‌ಗಳ ಚಿಕನ್ ಕಬಾಬ್ ಮತ್ತು ಶವರ್ಮಾಗಳು ತಿನ್ನಲು ಅಸುರಕ್ಷಿತ ಎಂದು ವರದಿಯಾಗಿದೆ. ನಿಷೇಧಿತ ಕೃತಕ ಬಣ್ಣಗಳನ್ನು ಬಳಸಿದ ಕಾರಣ 8 ಶವರ್ಮಾ ಹಾಗೂ 2 ಕಬಾಬ್ ಮಾದರಿಗಳು ವಿಫಲವಾಗಿದ್ದು, ಸಂಬಂಧಪಟ್ಟ ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಬೀದಿ ಬದಿಯಲ್ಲಿ ಸಿಗುವ ಚಿಕನ್ ಕಬಾಬ್ ಹಾಗೂ ಶವರ್ಮಾ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆ ಮತ್ತೊಮ್ಮೆ ಭಾರಿ ಶಾಕ್ ನೀಡಿದೆ. ಇತ್ತೀಚೆಗಷ್ಟೇ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿಯನ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿದ್ದ ಸರ್ಕಾರ, ಕಬಾಬ್ ಹಾಗೂ ಶವರ್ಮಾಗಳ ಮೇಲೆಯೂ ತನ್ನ ನಿಗಾ ಇಟ್ಟಿತ್ತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಸ್ಯಾಂಪಲ್ ಟೆಸ್ಟ್‌ನ ವರದಿ ಇದೀಗ ಹೊರಬಿದ್ದಿದ್ದು, ಬಿಲ್ಡಪ್ ನೀಡುವ ಹಲವು ಹೋಟೆಲ್‌ಗಳ ಕಬಾಬ್ ಹಾಗೂ ಶವರ್ಮಾಗಳು ತಿನ್ನಲು ಸಂಪೂರ್ಣ ಅಸುರಕ್ಷಿತ ಎಂದು ವರದಿ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

19 ಕಬಾಬ್ ಮಾದರಿಗಳ ಪೈಕಿ 2 ಅಸುರಕ್ಷಿತ, ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಕೇಸ್!

ಬೆಂಗಳೂರಿನ ವಿವಿಧ ಭಾಗಗಳಿಂದ ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ್ದ ಒಟ್ಟು 19 ಕಬಾಬ್ ಸ್ಯಾಂಪಲ್‌ಗಳ ಪೈಕಿ 2 ಸ್ಯಾಂಪಲ್‌ಗಳು ಅತ್ಯಂತ ಕಳಪೆ ಮತ್ತು ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿಯಲ್ಲಿ ತಿಳಿದುಬಂದಿದೆ. ಬೆಂಗಳೂರಿನ ಪ್ರಮುಖ ಎರಡು ಹೋಟೆಲ್‌ಗಳಿಂದ ಪಡೆದ ಕಬಾಬ್ ಮಾದರಿಗಳು ಅಸುರಕ್ಷಿತವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡಿದ ಆ ಹೋಟೆಲ್ ಮಾಲೀಕರ ವಿರುದ್ಧ ಅಧಿಕಾರಿಗಳು ಜೆಎಂಎಫ್‌ಸಿ (JMFC) ನ್ಯಾಯಾಲಯದಲ್ಲಿ ಕಾನೂನು ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.

ಶವರ್ಮಾದಲ್ಲಿ ಕೃತಕ ಬಣ್ಣದ ಕರಾಳತೆ: 8 ಸ್ಯಾಂಪಲ್‌ಗಳು ರಿಜೆಕ್ಟ್!

ಇನ್ನು ಯುವ ಪೀಳಿಗೆ ಮುಗಿಬಿದ್ದು ತಿನ್ನುವ ಶವರ್ಮಾ (Shawarma) ಸ್ಥಿತಿಯಂತೂ ಮತ್ತಷ್ಟು ಆತಂಕಕಾರಿಯಾಗಿದೆ. ಅಧಿಕಾರಿಗಳು ಪರೀಕ್ಷೆಗಾಗಿ ಸಂಗ್ರಹಿಸಿದ್ದ ಒಟ್ಟು 39 ಶವರ್ಮಾ ಸ್ಯಾಂಪಲ್‌ಗಳ ಪೈಕಿ ಬರೋಬ್ಬರಿ 8 ಸ್ಯಾಂಪಲ್‌ಗಳು ಸಂಪೂರ್ಣ ಅಸುರಕ್ಷಿತ ಎಂದು ವರದಿಯಾಗಿದೆ. ಈ ಎಂಟು ಶವರ್ಮಾ ಮಾದರಿಗಳಲ್ಲಿ ನಿಷೇಧಿತ ಹಾಗೂ ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡುವ ಅಪಾಯಕಾರಿ ಕೃತಕ ಬಣ್ಣಗಳನ್ನು (Artificial Colors) ಯಥೇಚ್ಛವಾಗಿ ಬಳಸಿರುವುದು ಲ್ಯಾಬ್ ರಿಪೋರ್ಟ್‌ನಲ್ಲಿ ದೃಢಪಟ್ಟಿದೆ.

ಬೆಂಗಳೂರಿನ ಯಾವ ಭಾಗಗಳಲ್ಲಿ ದಂಧೆ?

ಆಹಾರ ಇಲಾಖೆಯ ವರದಿಯ ಪ್ರಕಾರ, ಬೆಂಗಳೂರು ನಗರ ಹಾಗೂ ಜಿಬಿಎ (GBA) ಪಶ್ಚಿಮ ವಲಯದ ಭಾಗಗಳಲ್ಲಿ ಸಂಗ್ರಹಿಸಲಾಗಿದ್ದ ಶವರ್ಮಾ ಹಾಗೂ ಕಬಾಬ್ ಸ್ಯಾಂಪಲ್‌ಗಳಲ್ಲೇ ಅತಿ ಹೆಚ್ಚು ಅಕ್ರಮ ಹಾಗೂ ಅಸುರಕ್ಷಿತ ಅಂಶಗಳು ಪತ್ತೆಯಾಗಿವೆ. ಮಾಂಸ ಹಳಸಿದ್ದರೂ ಅದು ಫ್ರೆಶ್ ಆಗಿ ಕಾಣಲಿ ಎಂಬ ಕಾರಣಕ್ಕೆ ಹಾಗೂ ಗ್ರಾಹಕರನ್ನು ಆಕರ್ಷಿಸಲು ಈ ರೀತಿಯ ವಿಷಕಾರಿ ಬಣ್ಣಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಠಿಣ ಕ್ರಮದ ಎಚ್ಚರಿಕೆ ನೀಡಿದ ಇಲಾಖೆ

ಹೊರಗಡೆ ಸಿಗುವ ಇಂತಹ ಜಂಕ್ ಫುಡ್‌ಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳು ಮತ್ತು ಲಿವರ್, ಕಿಡ್ನಿ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೃತಕ ಬಣ್ಣ ಬಳಸಿ ಆಹಾರ ತಯಾರಿಸುವ ಹೋಟೆಲ್, ರೆಸ್ಟೋರೆಂಟ್ ಹಾಗೂ ರಸ್ತೆಬದಿಯ ಅಂಗಡಿಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಕಬಾಬ್ ಹಾಗೂ ಶವರ್ಮಾ ಪ್ರಿಯರು ಇನ್ಮುಂದೆ ಹೊರಗಡೆ ತಿನ್ನುವಾಗ ಹೋಟೆಲ್‌ಗಳ ಸ್ವಚ್ಛತೆ ಹಾಗೂ ಗುಣಮಟ್ಟದ ಕಡೆಗೆ ಒಮ್ಮೆ ಗಮನ ಹರಿಸುವುದು ಅತ್ಯಂತ ಅಗತ್ಯವಾಗಿದೆ.