ಮಗಳ ದಾಂಪತ್ಯ ಕಲಹ ಸರಿಪಡಿಸುವ ನೆಪದಲ್ಲಿ ನಕಲಿ ಸ್ವಾಮೀಜಿಯೊಬ್ಬ ಬಾಗಲಗುಂಟೆಯ ಮಹಿಳೆಗೆ ವಂಚಿಸಿದ್ದಾನೆ. ಪೂಜೆಯ ಹೆಸರಲ್ಲಿ 43 ಗ್ರಾಂ ಚಿನ್ನ ಹಾಗೂ 1.3 ಲಕ್ಷ ರೂ. ನಗದು ದೋಚಿ, ಬದಲಿಗೆ ಹುಣಸೆಹಣ್ಣು ಇಟ್ಟು ಪರಾರಿಯಾಗಿದ್ದು, ಪೊಲೀಸರು ವಂಚಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು (ಜು.17): 'ಮಗಳ ಮೇಲಿರುವ ದೋಷ ಪರಿಹರಿಸುತ್ತೇನೆ, ದಾಂಪತ್ಯ ಕಲಹ ಸರಿಪಡಿಸುತ್ತೇನೆ' ಎಂದು ನಂಬಿಸಿದ ನಕಲಿ ಸ್ವಾಮೀಜಿಯೊಬ್ಬ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ರಾಜಧಾನಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಂಚಕ ಮಹಿಳೆಯಿಂದ 43 ಗ್ರಾಂ ಚಿನ್ನಾಭರಣ ಹಾಗೂ 1.3 ಲಕ್ಷ ರೂಪಾಯಿ ನಗದು ದೋಚಿದ್ದಾನೆ.
ಮಗಳ ದೋಷದ ಹೆಸರಲ್ಲಿ ವಂಚನೆ:
ಬಾಗಲಗುಂಟೆಯ ನಿವಾಸಿ ಗೀತಾ (37) ಎಂಬುವವರೇ ವಂಚನೆಗೊಳಗಾದ ದುರ್ದೈವಿ. ಅವರ ಎರಡನೇ ಮಗಳ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿದ್ದವು. ಇದನ್ನು ತಿಳಿದ ನೆರೆಮನೆಯವರು ಶಿವಕಾಲಿ ಅಲಿಯಾಸ್ ನಿತಿನ್ ಎಂಬ ಸ್ವಾಮೀಜಿಯನ್ನು ಪರಿಚಯಿಸಿದ್ದರು. ಈತ 'ನಿಮ್ಮ ಮಗಳ ಮೇಲೆ ಪ್ರಾಣಾಪಾಯದ ಮಂತ್ರ ಮಾಡಿಸಲಾಗಿದೆ, ಇದನ್ನು ತೆಗೆಯದಿದ್ದರೆ ಅಪಾಯ ತಪ್ಪಿದ್ದಲ್ಲ' ಎಂದು ಗೀತಾ ಅವರನ್ನು ಹೆದರಿಸಿದ್ದ.
ಪೂಜೆಯ ನೆಪದಲ್ಲಿ ದೋಚಿದ ಚಿನ್ನ-ಹಣ:
ಜೂನ್ 26ರಂದು ಸಂಜೆ ಪೂಜೆ ಮಾಡಲು ಗೀತಾ ಅವರ ಮನೆಗೆ ಬಂದ ನಿತಿನ್, ಮನೆಯಲ್ಲಿ ಯಾರೂ ಇರಬಾರದು ಎಂದು ಸೂಚಿಸಿದ್ದ. ನಿಂಬೆಹಣ್ಣು, ಬೂದಿ, ಮಂತ್ರಾಕ್ಷತೆ ಬಳಸಿ ಪೂಜೆ ಮಾಡುವ ನಾಟಕವಾಡಿದ ಆತ, ಮನೆಯಲ್ಲಿದ್ದ ಎಲ್ಲಾ ಚಿನ್ನ ಮತ್ತು ನಗದು ತರುವಂತೆ ಹೇಳಿದ್ದಾನೆ. ಮನೆಯ ನವೀಕರಣಕ್ಕಾಗಿ ಇಟ್ಟಿದ್ದ 1.3 ಲಕ್ಷ ರೂ. ಹಣ ಹಾಗೂ 43 ಗ್ರಾಂ ಚಿನ್ನಾಭರಣಗಳನ್ನು ಒಂದು ಬಟ್ಟೆಯಲ್ಲಿ ಗಂಟು ಕಟ್ಟುವಂತೆ ಸೂಚಿಸಿದ್ದಾನೆ. ಪೂಜೆಯ ಮಧ್ಯೆ ಗೀತಾ ಅವರ ಮೇಲೆ ವಿಭೂತಿ ಎರಚಿ, ತಲೆ ಬಗ್ಗಿಸಿ ಬೆನ್ನಿಗೆ ಹೊಡೆದಿದ್ದಾನೆ. ಇದರಿಂದ ಗೀತಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸುಮಾರು 30 ನಿಮಿಷಗಳ ನಂತರ ಎಚ್ಚರವಾದಾಗ ಸ್ವಾಮೀಜಿ ಅಲ್ಲಿಂದ ನಾಪತ್ತೆಯಾಗಿದ್ದ.
ರಕ್ತ ಕಾರಿ ಸಾಯ್ತೀಯಾ ಎಂದು ಬೆದರಿಕೆ:
ಅದೇ ದಿನ ಸಂಜೆ ಗೀತಾ ಅವರು ಅರುಣೋದಯ ಆಸ್ಪತ್ರೆಯ ಬಳಿ ಸ್ವಾಮೀಜಿಯನ್ನು ಕಂಡಾಗ, ಚಿನ್ನ ಮತ್ತು ಹಣದ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಆ ವಂಚಕ, 'ಚಿನ್ನ ಮತ್ತು ಹಣ ನಿನ್ನ ಮನೆಯಲ್ಲೇ ಗಂಟು ಕಟ್ಟಿ ಇಡಲಾಗಿದೆ. ಎರಡು ದಿನದವರೆಗೂ ಅದನ್ನು ಬಿಚ್ಚಬಾರದು. ಒಂದು ವೇಳೆ ಮೊದಲೇ ಬಿಚ್ಚಿದರೆ ನೀನು ರಕ್ತ ಕಾರಿ ಸ್ಥಳದಲ್ಲೇ ಸಾಯ್ತೀಯಾ' ಎಂದು ಭಯಾನಕವಾಗಿ ಬೆದರಿಸಿದ್ದಾನೆ.
ಸಾವಿನ ಭೀತಿಯಿಂದ ಗೀತಾ ಎರಡು ದಿನ ಗಂಟನ್ನು ಮುಟ್ಟಲೇ ಇಲ್ಲ. ಎರಡು ದಿನದ ನಂತರ ಆತಂಕದಿಂದಲೇ ಗಂಟು ಬಿಚ್ಚಿ ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಚಿನ್ನ ಅಥವಾ ಹಣದ ಬದಲು ಕೇವಲ 'ಹುಣಸೆಹಣ್ಣು' ಇಡಲಾಗಿತ್ತು! ತಕ್ಷಣ ಆತನ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಸದ್ಯ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ವಂಚಕ ಶಿವಕಾಲಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


