ಹರಿಹರ ಪಂಚಮಸಾಲಿ ಪೀಠದಿಂದ ಉಚ್ಛಾಟಿತರಾದ ವಚನಾನಂದ ಸ್ವಾಮೀಜಿ, ಟ್ರಸ್ಟ್‌ನ ಕೆಲವರು ತಮ್ಮನ್ನು ಗುರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದಿನ ಸ್ವಾಮೀಜಿಗಳಿಗೂ ಇದೇ ರೀತಿ ಮಾಡಲಾಗಿದೆ, ಮಠದ ಆಸ್ತಿ ದುರ್ಬಳಕೆ ಹಾಗೂ ಲೆಕ್ಕ ಕೇಳಿದ್ದಕ್ಕೆ ತಮ್ಮನ್ನು ಉಚ್ಛಾಟಿಸಲಾಗಿದೆ ಎಂದು ಆಕ್ರೋಶ
ದಾವಣಗೆರೆ (ಏ.14): ಹರಿಹರ ಪೀಠದಲ್ಲಿ ಹಿಂದೆ ಸಿದ್ಧಲಿಂಗ ಸ್ವಾಮೀಜಿಗಳಾಯಿತು, ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಆಯ್ತು, ಈಗ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹರಿಹರ ಪಂಚಮಸಾಲಿ ಪೀಠದ ಉಚ್ಛಾಟಿತ ಸ್ವಾಮೀಜಿ ವಚನಾನಂದ ಶ್ರೀ ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಲಿಂಗೇಶ್ವರ ಸ್ವಾಮೀಜಿ ಆಗಿರಬಹುದು, ಜಯಮೃತ್ಯುಂಜಯ ಸ್ವಾಮೀಜಿ ಆಗಿರಬಹುದು. ಈಗ ನಮಗೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
ನಮ್ಮ ವಿಷಯದಲ್ಲಿ ಯಾವುದೇ ಕಾರಣಗಳಿಲ್ಲದಿದ್ದರೂ, ಪ್ರತಿ 5 ವರ್ಷಕ್ಕೊಮ್ಮೆ ಸ್ವಾಮೀಜಿ ಬದಲಾವಣೆ ಮಾಡಬೇಕು, ಸ್ವಾಮೀಜಿಯನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೀಗೆಲ್ಲಾ ಮಾಡುತ್ತಿದ್ದಾರೆ. ಕೈ-ಬಾಯಿ ಎಲ್ಲವೂ ಗಟ್ಟಿಯಾಗಿ ಇರಬೇಕೆಂದು ಹೇಳಬೇಕು. ನಮ್ಮ ವಿಚಾರದಲ್ಲಿ ಯಾವುದೇ ಕಾರಣಗಳೂ ಇಲ್ಲ. ಟ್ರಸ್ಟ್‌ನಲ್ಲಿ ಕೆಲವರು ಹಿಂದೂ ವಿರೋಧಿಗಳಿದ್ದು, ಆ್ಯಂಟಿ ಲಿಂಗಾಯತರಿದ್ದಾರೆ ಎಂದು ಅವರು ಆರೋಪಿಸಿದರು.
ಮಠದಲ್ಲಿ 5 ವರ್ಷ ಬಸವಣ್ಣನ ಫೋಟೋ ಹಾಕಲು ನಮಗೆ ಅವಕಾಶ ಕೊಟ್ಟಿರಲಿಲ್ಲ. ನಾವು ಆತ್ಮವಿಶ್ವಾಸದಿಂದ ಇದ್ದೇವೆ. ನಾಲ್ಕು ಜನರನ್ನು ನಂಬಿ ಇಲ್ಲಿ ಸ್ವಾಮೀಜಿ ಆಗಿಲ್ಲ. ಇಡೀ ಸಮಾಜವನ್ನು ನಂಬಿ ಪೀಠಕ್ಕೆ ಬಂದಿದ್ದೇವೆ. ಶ್ರೀಪೀಠದ ಸಂಪುಟದಲ್ಲಿ ಶ್ವಾಸ ಗುರುಪೀಠವನ್ನು ಬಿಡಬೇಕೆಂದೇನೂ ಇಲ್ಲ. ಲೆಕ್ಕ ಕೊಡಿ ಅಂತಾ ಕೇಳಿದ್ದಕ್ಕೆ, ಟ್ರಸ್ಟಿಗಳ ವಿರುದ್ಧ ಗುರುತರವಾದ ಆರೋಪಗಳಿವೆ. ಅಂತಹ ಟ್ರಸ್ಟಿಗಳು ಗೌರವಯುತವಾಗಿ ಟ್ರಸ್ಟಿಗೆ ರಾಜೀನಾಮೆ ನೀಡಲಿ ಎಂದು ಅವರು ಒತ್ತಾಯಿಸಿದರು.
ಸಮಾಜವು ಸತ್ಯವನ್ನು ಅರಿಯಬೇಕು. ಸಮಾಜಕ್ಕೆ ದಿನದಿನಕ್ಕೂ ಸ್ವಾಮೀಜಿ ಹತ್ತಿರವಾಗುತ್ತಿದ್ದಾರೆ. ಸಮಾಜವು ಬಲಿಷ್ಠವಾಗುತ್ತಿದೆ. ಸಮಾಜದ ನಾಯಕರೂ ಬಲಿಷ್ಠರಾಗುತ್ತಿದ್ದಾರೆ. ಹಾಗಾಗಿಯೇ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನಂತರ ನನ್ನನ್ನು ಗುರಿ ಮಾಡುತ್ತಿದ್ದಾರೆ. ಮೊದಲು ಪಂಚಮಸಾಲಿ ಪೀಠ. ನಂತರ ಟ್ರಸ್ಟ್. ಟ್ರಸ್ಟ್ ಬೈಲಾದ ಪ್ರಕಾರ ಪ್ರತಿ 5 ವರ್ಷಕ್ಕೊಮ್ಮೆ ಟ್ರಸ್ಟಿಗಳು ಬದಲಾಗಬೇಕು. ಆದರೆ, ಇದ್ದವರೇ ಇದ್ದಾರೆ, ಅಂತಹವರ ಸಂಬಂಧಿಗಳೇ ಇದ್ದಾರೆ ಎಂದು ಅವರು ದೂರಿದರು.
ಮಠ, ಸಮಾಜದ ಅನೇಕ ಆಸ್ತಿಪಾಸ್ತಿಗಳನ್ನೆಲ್ಲಾ ತಮ್ಮ ಸ್ವಂತ ಮಾಡಿಕೊಂಡಿದ್ದಾರೆ. ಪ್ರಧಾನ ಧರ್ಮದರ್ಶಿಗಳು 23 ವರ್ಷದಿಂದಲೂ ಸಮಾಜದ ಜಿಲ್ಲಾಧ್ಯಕ್ಷರಾಗಿದ್ದಾರೆ. ಹೊಸಬರಿಗೆ ಅವಕಾಶ ಇಲ್ಲ. ಸಮಾಜದಲ್ಲಿ ಯುವಕರು ಬೇರೆ ಯಾರೂ ಬರಲೇ ಇಲ್ಲವಾ? ಸಮಾಜದ ಶಿಕ್ಷಣ ಸಂಸ್ಥೆಗಳು ಇರಬೇಕೆಂದು ಹೇಳುತ್ತಾರೆ. ಹರ ಎಜುಕೇಷನಲ್ ಟ್ರಸ್ಟ್ ಮಾಡಿಕೊಂಡಿದ್ದಾರೆ. ಅದು ಮಠದ ಅಧೀನದಲ್ಲಿಲ್ಲ. ನಾವಲ್ಲ, ಭಕ್ತರು ಕೇಳುತ್ತಿದ್ದಾರೆ. ಭಕ್ತರು ಕೇಳಿದ್ದಾರೆ, ಲೆಕ್ಕ ಕೊಡಿ ಅಂತಾ. ಟ್ರಸ್ಟಿಗಳು ಲೆಕ್ಕ ಕೊಡಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು.
ನಮ್ಮ ವಿರುದ್ಧ ಯಾವುದೇ ಗಟ್ಟಿ ಆರೋಪಗಳೂ ಇಲ್ಲ. ಕುಣಿಯೋಕೆ ಬರದವರಿಗೆ ನೆಲ ಗಟ್ಟಿ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನಾವು ಹೆದರುವ ಅವಶ್ಯಕತೆ ಇಲ್ಲ. ಕಚ್ಚೆ, ಬಾಯಿ, ಕೈ ಸರಿ ಇರಬೇಕು. ಸಮಾಜ ದೊಡ್ಡದು, ನಮ್ಮದು ದೊಡ್ಡ ಸಮಾಜ. ಸಮಾಜವನ್ನು ನೋಡಿ ಮಠಕ್ಕೆ ಬಂದವರು ನಾವು. ಟ್ರಸ್ಟಿಗಳ ಮೇಲೆ ಕೇಸ್‌ಗಳಿವೆ. ಫೌಂಡರ್ ಟ್ರಸ್ಟಿ ಹೆಸರಿಗೆ ಫೋರ್ಜರಿ ಮಾಡಿರುವ ಆರೋಪಗಳೂ ಇವೆ. ಅನ್ಯಾಯದ ವಿರುದ್ಧ ಮಾತನಾಡಲು ನನಗೆ ಯಾವುದೇ ರಕ್ಷಣೆ ಬೇಕಾಗಿಲ್ಲ ಎಂದು ಅವರು ಹೇಳಿದರು.
ಟ್ರಸ್ಟಿಯೊಬ್ಬರು 49 ನಿಮಿಷ ಟ್ರಸ್ಟ್‌ನ ಬಗ್ಗೆಯೇ ಹೇಳಿದ್ದಾರೆ. ಫೌಂಡರ್ ಟ್ರಸ್ಟಿ, ಪ್ರಧಾನ ಕಾರ್ಯದರ್ಶಿ, ಧರ್ಮದರ್ಶಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕಳ್ಳರೇ ಬಂದು ಕಳ್ಳರಿಗೆ ರಕ್ಷಣೆ ಕೊಡುವಂತಾಗಿದೆ. ಭಕ್ತರೇ ಭೂಮಿ ಮೇಲಿನ ಭಗವಂತ, ಪಂಚಮಸಾಲಿ ಸಮಾಜವೇ ನನಗೆ ಸರ್ವಸ್ವ. 12 ಟ್ರಸ್ಟಿಗಳೇ ಇಡೀ ಸಮಾಜವಲ್ಲ. ಆಚಾರದಲ್ಲಿ ಕೈ ಬಾಯಿ ಕಚ್ಚೆ ಸರಿಯಾಗಿರಬೇಕು. ಆಚಾರಕ್ಕೆ ಅರಸಾಗು, ನೀತಿಗೆ ಪ್ರಭುವಾಗು ಅಂತಾ ನಮ್ಮ ಗುರುಗಳು ನಮಗೆ ಹೇಳಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಟ್ರಸ್ಟಿಗಳೇ ಸಮಾಜವಲ್ಲ
ಪಂಚಮಸಾಲಿ ಸಮಾಜದ 12 ಜನ ಟ್ರಸ್ಟಿಗಳನ್ನು ನೋಡಿ ನಾವು ಪೀಠಕ್ಕೆ ಬಂದಿಲ್ಲ. ಅಖಂಡ ಪಂಚಸಾಲಿ ಸಮಾಜ ಸೇವೆಗೆ ಬಂದಿದ್ದೇವೆ. ಇದು 12 ಜನರೇ ಇಡೀ ಮಠವಲ್ಲ, ಅಖಂಡ ಸಮಾಜದ ಆಸ್ತಿ ಮಠ. ನಾವು ಕೊಡಗು ಜಿಲ್ಲೆಗೆ ಹೋಗಿದ್ದೆವು. ನಮಗೆ ಸಭೆಯ ಬಗ್ಗೆ ಮಾಹಿತಿ ಇಲ್ಲ. ನನ್ನನ್ನು ಪೀಠದಿಂದ ಉಚ್ಛಾಟಿಸಲು ಕೆಲ ಧರ್ಮದರ್ಶಿಗಳು ಒಪ್ಪಿಲ್ಲ. ಮಠದ ಲೆಕ್ಕ ಕೇಳಿದ್ದಕ್ಕೆ ಉಚ್ಛಾಟಿಸಿದ್ದಾರೆ. ಯಾವುದೇ ನೋಟಿಸ್ ನೀಡಿಲ್ಲ. ಇವತ್ತು ಪೊಲೀಸರೇ ನಮ್ಮನ್ನು ತಳ್ಳಾಡಿ, ಹಲ್ಲೆ ಮಾಡಿದ್ದಾರೆ.
-ಶ್ರೀ ವಚನಾನಂದ ಸ್ವಾಮೀಜಿ.


