Bengaluru: 6 ವರ್ಷಗಳ ನಂತರ ಹಂಚಿಕೆ ಆಯ್ತು ಬಹುಮಹಡಿ ಮನೆ: ಹಕ್ಕುಪತ್ರ ಕೊಟ್ಟ ಸಿಎಂ ಬೊಮ್ಮಾಯಿ
ಕಳೆದ 6 ವರ್ಷಗಳಿಂದ ಮನೆಗಾಗಿ ಕಾಯುತ್ತಿದ್ದವರಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಹಂತದಲ್ಲಿ 5 ಸಾವಿರ ಮನೆಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದಾರೆ.
ಬೆಂಗಳೂರು (ಜ.31): ಕೈಗೆಟುಕುವ ದರದಲ್ಲಿ ಬಡವರಿಗೆ ಮನೆಗಳು ಸಿಗಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ 2015-16 ರಲ್ಲಿ ಬೆಂಗಳೂರಿನ ನಗರಕ್ಕೆ 1 ಲಕ್ಷ ಮನೆಗಳನ್ನು ಕೊಟ್ಟು ಅಂದಿನ ಸರ್ಕಾರದಲ್ಲಿ 600 ಕೋಟಿ ರೂ. ಬಿಡುಗಡೆ ಮಾಡಿತ್ತು. ಕಳೆದ 6 ವರ್ಷಗಳಿಂದ ಮನೆಗಾಗಿ ಕಾಯುತ್ತಿದ್ದವರಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಹಂತದಲ್ಲಿ 5 ಸಾವಿರ ಮನೆಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದಾರೆ.
ಯಲಹಂಕ ತಾಲ್ಲೂಕಿನ ಅಗ್ರಹಾರಪಾಳ್ಯದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಲೋಕಾರ್ಪಣೆ ಮತ್ತು ವಸತಿಗಳ ಹಸ್ತಾಂತರ ಮಾಡಿದರು. ಬಡವರಿಗೆ ಸೂರನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2015-16 ರಲ್ಲಿ ಬೆಂಗಳೂರಿನ ನಗರಕ್ಕೆ 1 ಲಕ್ಷ ಮನೆಗಳನ್ನು ಕೊಟ್ಟು ಹಿಂದಿನ ಸರ್ಕಾರದಲ್ಲಿ 600 ಕೋಟಿ ರೂ. ಬಿಡುಗಡೆ ಮಾಡಿತ್ತು. ಈ ಯೋಜನೆ ನನೆಗುದಿಗೆ ಬಿದ್ದಿದ್ದುಯ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮನೆಗಳಿಗೆ ಚಾಲನೆ ನಿಡಲಾಗಿತ್ತು. 2018-19ರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಒಂದು ಉಪಸಮಿತಿಯನ್ನು ರಚಿಸಿ ಆ ಸಮಿತಿಗೆ ತಾವೇ ಸ್ವತಃ ಸದಸ್ಯರಾಗಿ 52,000 ಮನೆಗಳ ನಿರ್ಮಾಣಕ್ಕೆ ಚಾಲನೆ ನಿಡಿದ್ದರು. ನಂತರ ಯಡಿಯೂರಪ್ಪ ರವರ ಸೂಚನೆ ಮೇರೆಗೆ ಬಸವರಾಜ ಬೊಮ್ಮಾಯಿ ರವರ ಮಾರ್ಗದರ್ಶನದಲ್ಲಿ ಬೆಂಗಳೂರಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ 52,000 ಮನೆಗಳನ್ನು ಮುಕ್ತಾಯ ಹಂತಕ್ಕೆ ತರಲಾಗಿದೆ. ಇಂದು 5,000 ಮನೆಗಳನ್ನು ಹಸ್ತಾಂತರಗೊಳಿಸುವ ಕಾರ್ಯ ಮಾಡಲಾಗಿದೆ.
ಮಿತಿ ಮೀರಿದ ಬಿಎಂಟಿಸಿ ಅಧಿಕಾರಿಗಳ ಕಿರುಕುಳ: ಮೊನ್ನೆ ಕಂಡಕ್ಟರ್ ಇಂದು ಡ್ರೈವರ್ ಆತ್ಮಹತ್ಯೆಗೆ ಯತ್ನ
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 6 ಲಕ್ಷ ರೂ. ಹಾಗೂ ಹಿಂದುಳಿದ ವರ್ಗದವರಿಗೆ 6.5 ಲಕ್ಷ ರೂಪಾಯಿಯನ್ನು ಕಟ್ಟಿದರೆ 4 ಚದರಕ್ಕೂ ಮೇಲ್ಪಟ್ಟು ಎಲ್ಲ ಸೌಲಭ್ಯಗಳನ್ನು ಉಳ್ಳಂತಹ ಮನೆಗಳನ್ನು ಕೊಡಲಾಗುತ್ತದೆ. ಇದರಲ್ಲಿ ಅಂಗವಿಕಲರು ಹಾಗೂ ಇತರೆ ಕೆಲವು ವರ್ಗಗಳಿಗೆ ಗ್ರೌಂಡ್ ಫ್ಲೋರ್ ಹಂಚಿಕೆ ಮಾಡಲಾಗುತ್ತದೆ. ಇತ್ತೀಚೆಗೆ ವಾರ್ಷಿಕ ಆದಾಯ ಕೇವಲ 1 ಲಕ್ಷ ರೂ.ವರೆಗೆ ಇದ್ದವರಿಗೆ ಮಾತ್ರ ಮನೆ ಖರೀದಿಗೆ ಅವಕಾಶ ನೀಡಿದ್ದ ಸರ್ಕಾರ ಅದನ್ನು ಸಡಿಲಗೊಳಿಸಿ ವಾರ್ಷಿಕ ಆದಾಯ 3 ಲಕ್ಷ ರೂ. ಇರುವವರೂ ಮನೆ ಖರೀದಿಗೆ ಅರ್ಜಿ ಸಲ್ಲಿಸಬಹುದು ಎಂದು ಆದೇಶ ಹೊರಡಿಸಿತ್ತು.
ಬಡವರಿಗೆ ಮನೆ ಕಟ್ಟಲು ಕಾನೂನು ಸರಳೀಕರಣ: ಸಿಎಂ ಬೊಮ್ಮಾಯಿ
ಮನೆಯ ಹಕ್ಕುಪತ್ರಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಡವರು ನಿವೇಶನ ಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲ ವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು. ಬರುವ ದಿನಗಳಲ್ಲಿ ರಾಜ್ಯದಲ್ಲಿ ಮನೆ ಕಟ್ಟುವುದು ಕಷ್ಟವಾಗಲಿದೆ. ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿಗಳಿಲ್ಲ. ಭೂಮಿ ಬೆಲೆ ಹೆಚ್ಚಾಗಲು ಬೇಡಿಕೆ ಹೆಚ್ಚಾಗಿದೆ ಮತ್ತು ನಾವು ಮಾಡಿರುವ ಕಾನೂನುಗಳಿಂದ ಸಾಮಾನ್ಯ ಜನರು ನಿವೇಶನ ಖರೀದಿ ಮಾಡುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತಂದು, ನಿರ್ಬಂಧಗಳನ್ನು ದೂರಮಾಡಿ ನೇರವಾಗಿ ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವಸತಿಗಾಗಿಯೇ ಜಮೀನು ಪಡೆಯಲು, ಮನೆ ಕಟ್ಟಲು ಎಲ್ಲಾ ಕಾನೂನನ್ನು ಸರಳೀಕರಣ ಮಾಡಲಾಗುವುದು. ಹಾಗಾದಾಗ ಬಡವರಿಗೆ ಮನೆ ಹಾಗೂ ನಿವೇಶನ ನೀಡಬಹುದು ಎಂದರು.
Suburban railway: ಉಪನಗರ ರೈಲ್ವೆ ಯೋಜನೆ: ಕನಕ ಮಾರ್ಗಕ್ಕೆ ಟೆಂಡರ್
ಸಮಸ್ಯೆಗಳಿಗೆ ಪರಿಹಾರ: 3 ಲಕ್ಷಕ್ಕಿಂತ ಹೆಚ್ಚು ನಿವೇಶನಗಳನ್ನು ಸೋಮ್ಮಣ್ಣ ಅವರು ರಾಜ್ಯದಲ್ಲಿ ನೀಡಿರುವುದು ದಾಖಲೆ. ಪ್ರಗತಿಪರ ಚಿಂತನೆ ಮಾಡಿದಾಗ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ನಮ್ಮ ಸರ್ಕಾರ ಸಮಸ್ಯೆಯನ್ನು ಬಿಟ್ಟು ಹೋಗುವುದಿಲ್ಲ , ಪರಿಹಾರ ಕೊಟ್ಟು ಜನರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ಕೆಲಸ ಮಾಡಲಿದೆ. ತಾನು ಹಾಗೂ ತನ್ನ ಕುಟುಂಬ ಒಂದು ಸೂರಿನಡಿ ಗೌರವದಿಂದ ಬದುಕಬೇಕೆನ್ನುವುದು ಪ್ರತಿ ಮನುಷ್ಯನ ಆಸೆ. ಮನುಷ್ಯ ಮಾತ್ರವಲ್ಲದೇ ಪಕ್ಷಿಗಳು ಒಂದು ಗೂಡು ಕಟ್ಟಿ, ಸಂಸಾರ ಮಾಡುವುದು ಕಾಣುತ್ತೇವೆ. ಪಕ್ಷಿಗಳಿಗೆ ಇರುವ ಸೌಭಾಗ್ಯ ಮನುಷ್ಯರಿಗೂ ಇರಬೇಕು. ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ನಾಗರಿಕತೆಯಲ್ಲಿ ಬಡವರಿಗೆ ಪುಟ್ಟ ಮನೆ ಕಟ್ಟಿ ಕೊಡುವ ಅವಕಾಶವನ್ನು ಸಮಾಜ ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಎಂದರು.
5 ಲಕ್ಷ ಮನೆಗಳು ಅಂತಿಮ ಹಂತದಲ್ಲಿ:
ಘೋಷಣೆಗಳು ಬಹಳಷ್ಟು ಆಗುತ್ತವೆ. ಅದಕ್ಕೆ ಹಣ ಮೀಸಲಿಡಬೇಕು. ಆರು ವರ್ಷಗಳ ಹಿಂದೆ 15 ಲಕ್ಷ ಮನೆ ಕಟ್ಟುವುದಾಗಿ ಘೋಷಣೆಯಾಯಿತು. ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿದರು. ಅದಕ್ಕೆ ಹಣ ಮೀಸಲಿಡದೇ ಹೋದರು. 15 ಸಾವಿರ ಕೋಟಿ ರೂ. ಅಗತ್ಯವಿದ್ದರೆ, 3 ಸಾವಿರ ಕೋಟಿ ಮೀಸಲಿಟ್ಟರು. ಅಗತ್ಯವಿರುವಷ್ಟು ಮನೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿ ಇಂದು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ಇದ್ದೇವೆ ಎಂದರು.
ಇಂದಿಗೂ ಭೂಮಿ ಹುಡುಕಾಟ ಮಾಡಲಾಗುತ್ತಿದೆ: ನಾನು ಮುಖ್ಯಮಂತ್ರಿಯಾದ ಬಳಿಕ ಸುಮಾರು 5 ಲಕ್ಷ ಮನೆಗಳ ಮಂಜೂರಾತಿ ಮಾಡಿದ್ದು, 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರದಲ್ಲಿ ಮಂಜೂರಾತಿ ನೀಡಿದ್ದು, ಫಲಾನುಭಾವಿಗಳ ಆಯ್ಕೆಯಾಗಿ ಪ್ರಗತಿಯಲ್ಲಿದೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಬೇಕೆಂದು ಏಳು ವರ್ಷಗಳಿಂದ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ತರಾತುರಿಯಲ್ಲಿ ಘೋಷಣೆ ಮಾಡಲಾಗಿತ್ತು. ಜಮೀನು ಇದೆಯೋ ಇಲ್ಲವೋ ಎಂದು ಯೋಚಿಸಲಿಲ್ಲ. ಮನೆಗಳನ್ನು ನಾವು ಆಕಾಶದಲ್ಲಿ ಕಟ್ಟಲಾಗುವುದಿಲ್ಲ. ಭೂಮಿಯ ಮೇಲೆ ಕಟ್ಟಬೇಕು. ಆದರೆ ಭೂಮಿಯೇ ಇಲ್ಲದೇ ಮನೆ ಕಟ್ಟುತ್ತೇವೆ ಎಂದು ಚುನಾವಣಾ ಘೋಷಣೆ ಮಾಡಿದರು.ಇಂದಿಗೂ ನಾವು 50 ಸಾವಿರ ಮನೆಗಳಿಗೆ ಸ್ಥಳವನ್ನು 492 ಎಕರೆ ಭೂಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಪಡೆದು ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ.
Assembly election: ಬಿಜೆಪಿ ಅಯೋಗ್ಯ ಸರ್ಕಾರ ಮತದಾರರ ಆತ್ಮವನ್ನೆ ಕಸಿಯುತ್ತಿದೆ: ಎಚ್. ವಿಶ್ವನಾಥ್ ಕಿಡಿ
20 ಸಾವಿರ ಮನೆಗಳ ಹಂಚಿಕೆಗೆ ಸಿದ್ಧತೆ: ಮೊದಲ ಹಂತದ 20 ಸಾವಿರ ಮನೆಗಳನ್ನು ಈಗ ಹಂಚಿಕೆ ಮಾಡಲಾಗುತ್ತಿದೆ. ಅದರಲ್ಲಿ 5 ಸಾವಿರ ಮನೆಗಳನ್ನು ಇಂದು ಹಂಚಿಕೆ ಮಾಡುತ್ತಿದ್ದು, ಯಲಹಂಕದಲ್ಲಿ ಒಟ್ಟು 900 ಮನೆಗಳನ್ನು ನೀಡಲಾಗುತ್ತಿದೆ. ಸುಮಾರು 5-6 ಕ್ಷೇತ್ರಗಳಲ್ಲಿ ಇಂದು ಮನೆಗಳ ಹಂಚಿಕೆಯಾಗುತ್ತಿದೆ. ಹಂತಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರ ಮಾಡುವ ಗುರಿ ಇದೆ. ಕಲ್ಲಿನ ಕ್ವಾರಿಯ ಒಳಗೆ ಮನೆಗಳನ್ನು ಕಟ್ಟುವುದಾಗಿ ಜಾಗ ತೋರಿಸಿದ್ದರು. ಇಷ್ಟು ಅಪ್ರಮಾಣಿಕವಾಗಿ ನಾವು ನಡೆದುಕೊಂಡರೆ ಜನರು ಮೆಚ್ಚುತ್ತಾರಾ ? ಇರುವ ವಿಚಾರವನ್ನು ಇದ್ದಂತೆ ಹೇಳಿ ಅದಕ್ಕೆ ಪರಿಹಾರ ಪಡೆದು ಮುಂದೆ ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಕ್ರಮ ರೂಪದಲ್ಲಿ ನೀಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ಶಾಸಕ ಸಿದ್ದು ಸವದಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ನಾಗರಾಜ್, ವಸತಿ ಇಲಾಖೆ ಕಾರ್ಯದರ್ಶಿ ಡಾ: ಜೆ.ರವಿಶಂಕರ್, ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.