ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಬಿಡಿಎ ಹೊಸ ಯೋಜನೆಯನ್ನು ಪ್ರಸ್ತಾಪಿಸಿದೆ. ಡಾ. ರಾಜ್‌ಕುಮಾರ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ. ಉದ್ದದ 6 ಪಥಗಳ ಸುರಂಗ ರಸ್ತೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಯು ನಮ್ಮ ಮೆಟ್ರೋ ಯೋಜನೆಗಳೊಂದಿಗೆ ಸಮನ್ವಯ ಸಾಧಿಸಲಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಹಾಗೂ ಅಸ್ತವ್ಯಸ್ತ ಸಂಚಾರ ವ್ಯವಸ್ಥೆಯ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ವಾಹನ ಸವಾರರಿಗೆ ಶೀಘ್ರದಲ್ಲೇ ದೊಡ್ಡ ರಿಲೀಫ್ ಸಿಗಲಿದೆ. ಹೊರವರ್ತುಲ ರಸ್ತೆ (ORR) ಮಾರ್ಗದಲ್ಲಿರುವ ಡಾ. ರಾಜ್‌ಕುಮಾರ್ ಸ್ಮಾರಕದಿಂದ ಬಿಇಎಲ್ (BEL) ವೃತ್ತದವರೆಗೆ 4.5 ಕಿ.ಮೀ. ಉದ್ದದ, 6 ಪಥಗಳ (6-Lane) ಬೃಹತ್ ಸುರಂಗ ರಸ್ತೆ ನಿರ್ಮಿಸಲು ಬಿಡಿಎ ಪ್ರಸ್ತಾವನೆ ಮುಂದಿಟ್ಟಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಸ್ತೃತ ಯೋಜನಾ ವರದಿ (DPR) ಸಿದ್ಧತೆಗೆ ಬಿಡಿಎ ಸಜ್ಜು

ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲಾಗುವುದು ಎಂದು ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಡಿಪಿಆರ್ ಸಿದ್ಧವಾದ ತಕ್ಷಣವೇ ಅದನ್ನು ರಾಜ್ಯ ಸರ್ಕಾರದ ಅನುಮೋದನೆಯ ಒಪ್ಪಿಗೆ ಪಡೆದು ಮುಂದಿನ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ.

ಬಿಡಿಎ ಹಿರಿಯ ಎಂಜಿನಿಯರ್‌ಗಳ ಮಾಹಿತಿ:

"ಈ ಡಿಪಿಆರ್‌ನಲ್ಲಿ ಯೋಜನೆಯ ತಾಂತ್ರಿಕ ಕಾರ್ಯಸಾಧ್ಯತೆ, ಪ್ರಯಾಣಿಕರ ಸಮಯದ ಉಳಿತಾಯ ಹಾಗೂ ಇದೇ ಕಾರಿಡಾರ್‌ನಲ್ಲಿ ಮೆಟ್ರೊ ಹಂತ-3 ರ ಅಡಿಯಲ್ಲಿ ನಿರ್ಮಾಣವಾಗಲಿರುವ ಇತರ ಮೂಲಸೌಕರ್ಯಗಳ ಸಮನ್ವಯತೆಯ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತದೆ."

ವಾಹನ ಸವಾರರ ಅನುಕೂಲಕ್ಕೆ ಭೂಗತ 'ಲೂಪ್' ವ್ಯವಸ್ಥೆ

ತುಮಕೂರು ರಸ್ತೆಯಿಂದ ಬಿಇಎಲ್ ಜಂಕ್ಷನ್ ಹಾಗೂ ಡಾ. ರಾಜ್‌ಕುಮಾರ್ ಸ್ಮಾರಕದ ಕಡೆಗೆ ಸಾಗುವ ವಾಹನ ಚಾಲಕರಿಗೆ ಯಾವುದೇ ಗೊಂದಲವಿಲ್ಲದೆ ಸರಾಗವಾಗಿ ಚಲಿಸಲು ಈ ಸುರಂಗ ರಸ್ತೆಯಲ್ಲಿ ವಿಶೇಷ ಭೂಗತ ಲೂಪ್ (Underground Loop) ಒಂದನ್ನು ನಿರ್ಮಿಸಲು ಬಿಡಿಎ ಯೋಜನೆ ರೂಪಿಸಿದೆ.

ಯೋಜಿತ ಮಾರ್ಗದ ಉದ್ದಕ್ಕೂ ಕೆಲವು ಖಾಲಿ ಜಮೀನುಗಳು ಲಭ್ಯ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಸುಲಭವಾಗಲಿದ್ದು, ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಕಟ್-ಅಂಡ್-ಕವರ್ (Cut-and-Cover), ಬಾಕ್ಸ್-ಪುಶ್ (Box-Push) ಅಥವಾ ಟಿಬಿಎಂ (Tunnel Boring Machines) ಇವುಗಳಲ್ಲಿ ಯಾವ ತಂತ್ರಜ್ಞಾನ ಬಳಸಿ ಸುರಂಗ ಕೊರೆಯಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ಬರಬೇಕಿದೆ.

ನಮ್ಮ ಮೆಟ್ರೊ 'ಡಬಲ್ ಡೆಕ್ಕರ್' ಯೋಜನೆ ಮತ್ತು ಸಮನ್ವಯತೆ

ಇಲ್ಲಿ ಗಮನಿಸಬೇಕಾದ ವಿಷ್ಯವೆಂದರೆ ಇದೇ ಮಾರ್ಗದಲ್ಲಿ ನಮ್ಮ ಮೆಟ್ರೊ (BMRCL) ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದ ಕೆಂಪಾಪುರದವರೆಗೆ ಒಟ್ಟು 37 ಕಿ.ಮೀ. ಉದ್ದದ ಬೃಹತ್ ಡಬಲ್-ಡೆಕರ್ (ಮೆಟ್ರೊ ಮತ್ತು ಮೇಲ್ಸೇತುವೆ) ಕಾರಿಡಾರ್ ನಿರ್ಮಾಣವನ್ನು ಪ್ರಸ್ತಾಪಿಸಿದೆ. ಈ ಯೋಜನೆಗೆ ಸುಮಾರು ₹19,692.22 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಇದರ ಜೊತೆಗೆ, ಗೊರಗುಂಟೆಪಾಳ್ಯದಲ್ಲಿ ಹೊಸ ಮೆಟ್ರೊ ನಿಲ್ದಾಣವನ್ನು ನಿರ್ಮಿಸಿ, ಅದನ್ನು ಫುಟ್ ಓವರ್ ಬ್ರಿಡ್ಜ್ (FoB) ಮೂಲಕ ಪ್ರಸ್ತುತ ಇರುವ ಗ್ರೀನ್ ಲೈನ್ ನಿಲ್ದಾಣಕ್ಕೆ ಸಂಪರ್ಕಿಸುವ ಯೋಜನೆಯೂ ಮೆಟ್ರೊ ಮುಂದಿದೆ. ಹಾಗಾಗಿ, ಬಿಡಿಎ ನಿರ್ಮಿಸಲಿರುವ ಸುರಂಗ ರಸ್ತೆಯು ಈ ಮೆಟ್ರೊ ಯೋಜನೆಯ ಜೋಡಣೆಗೆ (Alignment) ಯಾವುದೇ ಅಡ್ಡಿ ಉಂಟು ಆಗದಂತೆ ಪರಸ್ಪರ ಪೂರಕವಾಗಿ ವಿನ್ಯಾಸ ಮಾಡಲು ಯೋಚನೆ ಮಾಡಲಾಗಿದೆ.

ಜಿಬಿಎಯಿಂದ ಬಿಡಿಎ ಹೆಗಲಿಗೆ ಬಂದ ಯೋಜನೆ

ಆರಂಭದಲ್ಲಿ ಈ ಗೊರಗುಂಟೆಪಾಳ್ಯ ಸುರಂಗ ರಸ್ತೆ ಯೋಜನೆಯನ್ನು ಬೃಹತ್ ಗ್ರೇಟರ್ ಬೆಂಗಳೂರು ಅಥಾರಿಟಿ ರೂಪಿಸಿತ್ತು. ಆದರೆ, ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ ಹಾಗೂ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ನಿರ್ವಹಿಸುವ ಸಾಮರ್ಥ್ಯದ ಆಧಾರದ ಮೇಲೆ, ಇದನ್ನು ಆರ್ಥಿಕವಾಗಿ ಸದೃಢವಾಗಿರುವ ಬಿಡಿಎಗೆ ವರ್ಗಾಯಿಸಲಾಗಿದೆ.

ಪ್ರಾಧಿಕಾರವು ಈಗಾಗಲೇ ಹೆಬ್ಬಾಳದಲ್ಲಿ ₹1,139.67 ಕೋಟಿ ವೆಚ್ಚದಲ್ಲಿ 2.2 ಕಿ.ಮೀ ಉದ್ದದ ಕಿರು ಸುರಂಗ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು, ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಈ ಎರಡೂ ಯೋಜನೆಗಳನ್ನು ನೇರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ತಜ್ಞರ ವಲಯದಲ್ಲಿ ಪರ-ವಿರೋಧ ಚರ್ಚೆ

ಒಂದೆಡೆ ಬಿಡಿಎ ನಗರದ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ಮಾರ್ಗಗಳ ಮೊರೆ ಹೋಗುತ್ತಿದ್ದರೆ, ಮತ್ತೊಂದೆಡೆ ಕೆಲವು ಸಾರಿಗೆ ಮತ್ತು ಸಂಚಾರ ತಜ್ಞರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೊದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವಾಗಲೇ ಇಂತಹ ಅತಿ ಹೆಚ್ಚು ವೆಚ್ಚದ ಸುರಂಗ ರಸ್ತೆಗಳನ್ನು ನಿರ್ಮಿಸುವುದರಿಂದ ವೈಯಕ್ತಿಕ ವಾಹನಗಳ ಬಳಕೆ ಹೆಚ್ಚಾಗುತ್ತದೆಯೇ ಹೊರತು, ಸಾರ್ವಜನಿಕ ಸಾರಿಗೆಯ ಆಶಯ ದುರ್ಬಲಗೊಳ್ಳುತ್ತದೆ ಎಂಬುದು ಕೆಲವು ತಜ್ಞರ ವಾದವಾಗಿದೆ. ಎಲ್ಲಾ ಪರ-ವಿರೋಧಗಳ ನಡುವೆಯೂ ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಈ ಭೂಗತ ಕದನ ತೀವ್ರ ಕುತೂಹಲ ಮೂಡಿಸಿದೆ.