ಅಮಾವಾಸ್ಯೆ ರಾತ್ರಿ 'ಕೊಳ್ಳಿ ದೆವ್ವ'ಕ್ಕೆ ಕಲ್ಲು ಎಸೆದ ಯುವಕ...ಮುಂದಾಗಿದ್ದೇನು?
Mandya Amavasya true horror story ಅಮಾವಾಸ್ಯೆ ರಾತ್ರಿ 'ಕೊಳ್ಳಿ ದೆವ್ವ'ವನ್ನು ಸವಾಲು ಹಾಕಿದ ಯುವಕನಿಗೆ ಬಳಿಕ ಸರಣಿ ಭಯಾನಕ ಘಟನೆಗಳು ಎದುರಾದವು ಎಂಬ ಜನಪ್ರಿಯ ಹಾರರ್ ಕಥೆ ಇದು.

ಹಾರರ್ ಕಥೆಗಳ ಅಭಿಮಾನಿಗಳಲ್ಲಿ ಚರ್ಚೆ
2012ರಲ್ಲಿ ಬೆಂಗಳೂರಿನ ಚಿರಾಗ್ (ಹೆಸರು ಬದಲಿಸಲಾಗಿದೆ) ಎಂಬ ಯುವಕನಿಗೆ ನಡೆದಿತ್ತೆಂದು ಹೇಳಲಾಗುವ ಈ ಘಟನೆ ಇಂದಿಗೂ ಹಾರರ್ ಕಥೆಗಳ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತದೆ. ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮತ್ತು ಟೈಲರಿಂಗ್ ನಡೆಸುತ್ತಿದ್ದ ತಾಯಿಯ ಕಷ್ಟಪಟ್ಟು ಬೆಳೆಸಿದ ಮಗನಾದ ಚಿರಾಗ್, ಪದವಿ ಮುಗಿಸಿದ ಬಳಿಕ ಬೆಂಗಳೂರಿನ ಜೆಪಿ ನಗರದಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ. ಕೆಲಸಕ್ಕೆ ಸೇರುವ ಮೊದಲು ಒಂದು ತಿಂಗಳ ಸಮಯ ಇದ್ದ ಕಾರಣ ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗ್ರಾಮದಲ್ಲಿದ್ದ ಅಜ್ಜ-ಅಜ್ಜಿಯನ್ನು ಭೇಟಿ ಮಾಡಲು ತೆರಳಿದ್ದ.
ಅಮಾವಾಸ್ಯೆ ರಾತ್ರಿ
ಆ ಗ್ರಾಮದಲ್ಲಿ ಪ್ರತಿ ಅಮಾವಾಸ್ಯೆ ರಾತ್ರಿ 'ಕೊಳ್ಳಿ ದೆವ್ವ' ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆ ವರ್ಷಗಳಿಂದ ಇತ್ತು. ರಾತ್ರಿ ವೇಳೆ ಹೊಲ, ಕಬ್ಬಿನ ಗದ್ದೆ ಮತ್ತು ಕಾಲುವೆಗಳ ಬಳಿ ಯಾರೂ ಹೋಗುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸುತ್ತಿದ್ದರು. ಆದರೆ ದೇವರು, ಭೂತ-ಪ್ರೇತಗಳ ಮೇಲೆ ನಂಬಿಕೆ ಇಲ್ಲದ ಚಿರಾಗ್ ಈ ಮಾತುಗಳನ್ನು ಮೂಢನಂಬಿಕೆ ಎಂದು ತಳ್ಳಿ ಹಾಕಿದ್ದ. ಗ್ರಾಮದ ಟೀ ಅಂಗಡಿ ಮಾಲೀಕ ಕೂಡ ಅಮಾವಾಸ್ಯೆ ರಾತ್ರಿ ಹೊರಗೆ ಹೋಗಬೇಡ ಎಂದು ಎಚ್ಚರಿಸಿದ್ದರೂ, ಚಿರಾಗ್ ಅದನ್ನು ಸವಾಲಾಗಿ ತೆಗೆದುಕೊಂಡ. ರಾತ್ರಿ ಸುಮಾರು 11 ಗಂಟೆಗೆ ಒಬ್ಬನೇ ಕಬ್ಬಿನ ಗದ್ದೆಯೊಳಗೆ ತೆರಳಿದ. ಅಲ್ಲಿ ನೆಲದಿಂದ ಸ್ವಲ್ಪ ಎತ್ತರದಲ್ಲಿ ತೇಲುತ್ತಿದ್ದ ಹಳದಿ ಬಣ್ಣದ ಬೆಂಕಿಯ ಉಂಡೆಯಂತಹ ಬೆಳಕು ಅವನ ಕಣ್ಣಿಗೆ ಬಿತ್ತು. ಅದನ್ನು ಯಾರೋ ಆಟವಾಡಿಸುತ್ತಿದ್ದಾರೆ ಎಂದುಕೊಂಡ ಚಿರಾಗ್, ಕಲ್ಲು ಎಸೆದು ಹೊಡೆದ. ಕಲ್ಲು ತಾಗುತ್ತಿದ್ದಂತೆ ಆ ಬೆಳಕು ಕ್ಷಣಾರ್ಧದಲ್ಲಿ ಮಾಯವಾಯಿತು.
ಚಿರಾಗ್‌ನ ಬದುಕನ್ನೇ ಬದಲಿಸಿದ ಘಟನೆ
ಆದರೆ ಅಲ್ಲಿಂದ ಆರಂಭವಾದ ಘಟನೆಗಳು ಚಿರಾಗ್‌ನ ಬದುಕನ್ನೇ ಬದಲಿಸಿವೆ ಎನ್ನಲಾಗುತ್ತದೆ. ಹಿಂದಿನಿಂದ ತನ್ನ ಹೆಸರನ್ನು ಯಾರೋ ಕರೆಯುತ್ತಿರುವ ಶಬ್ದ, ವಿಚಿತ್ರ ನಗು, ಯಾರೂ ಇಲ್ಲದ ಜಾಗದಲ್ಲಿ ಯಾರೋ ಹಿಂಬಾಲಿಸುತ್ತಿರುವ ಅನುಭವ ಅವನನ್ನು ಕಾಡತೊಡಗಿತು. ಮನೆಗೆ ಬಂದ ಬಳಿಕವೂ ರಾತ್ರಿ ನಿದ್ದೆಯಾಗದೇ ಅದೇ ಧ್ವನಿಗಳು ಕೇಳಿಸುತ್ತಿದ್ದವು. ಕೆಲವೇ ಕ್ಷಣಗಳಲ್ಲಿ ಅವನಿಗೆ ಹೊಟ್ಟೆ ಉರಿ ಆರಂಭವಾಗಿ, ವಾಂತಿ ಮಾಡಿದಾಗ ಬೂದಿಯಂತಿರುವ ವಸ್ತು ಹೊರಬಂದಿತೆಂದು ಕಥೆ ಹೇಳುತ್ತದೆ. ಮರುದಿನ ಈ ವಿಷಯವನ್ನು ಸ್ನೇಹಿತ ವಿನೋದ್‌ಗೆ ಹೇಳಿದಾಗ, "ನೀನು ಕೊಳ್ಳಿ ದೆವ್ವವನ್ನು ಅವಮಾನ ಮಾಡಿದ್ದೀಯ, ಇನ್ನು ಏನಾಗುತ್ತದೋ ನೋಡುತ್ತೀಯ" ಎಂದು ಆತ ಆತಂಕ ವ್ಯಕ್ತಪಡಿಸಿದ್ದ. ಆದರೆ ಚಿರಾಗ್ ಅದನ್ನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಮಧ್ಯರಾತ್ರಿ ವಿಚಿತ್ರ ಶಬ್ದ
ದಿನಗಳು ಕಳೆದಂತೆ ಪರಿಸ್ಥಿತಿ ಮತ್ತಷ್ಟು ಭಯಾನಕವಾಯಿತು. ಮಧ್ಯರಾತ್ರಿ ವಿಚಿತ್ರ ಅಳುವಿನ ಶಬ್ದಗಳು, ತನ್ನ ಹೆಸರನ್ನು ಕರೆಯುವ ಧ್ವನಿ, ಕಾಣದ ಶಕ್ತಿಯೊಂದು ತನ್ನನ್ನು ಹೊರಗೆ ಕರೆದುಕೊಂಡು ಹೋಗುತ್ತಿರುವ ಅನುಭವ ಅವನಿಗೆ ಆಗತೊಡಗಿತು. ಕೆಲವೊಮ್ಮೆ ತನ್ನ ದೇಹದ ಮೇಲೆಯೇ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಆತ ಹೇಳಿಕೊಂಡಿದ್ದ. ಒಂದು ದಿನ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಮತ್ತೆ ಅದೇ ಬೆಂಕಿಯ ಉಂಡೆ ಕಾಣಿಸಿಕೊಂಡಿತು. ಅದನ್ನು ಹಿಂಬಾಲಿಸುತ್ತಾ ಹೋಗಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರೂ ಭುಜಕ್ಕೆ ಹಾಗೂ ತಲೆಗೆ ಗಾಯಗಳಾಗಿದ್ದವು. ಮನೆಗೆ ಕರೆತಂದ ಬಳಿಕ ಅವನ ಬೆನ್ನಿನ ಮೇಲೆ ಸುಟ್ಟ ಗಾಯದ ಗುರುತುಗಳಂತೆ ಕಾಣಿಸಿಕೊಂಡಿದ್ದು ಕುಟುಂಬದವರ ಆತಂಕಕ್ಕೆ ಕಾರಣವಾಯಿತು.
ಬೆಂಕಿಯ ಉಂಡೆ ನನ್ನನ್ನು ಇಲ್ಲಿ ಕರೆತಂದಿತು ಎಂದ ಯುವಕ
ಕೆಲ ದಿನಗಳ ನಂತರ ಚಿರಾಗ್ ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದಾಗ ಕಬ್ಬಿನ ಗದ್ದೆಯ ಮಧ್ಯದಲ್ಲಿ ಬಟ್ಟೆಯಿಲ್ಲದೆ ವೃತ್ತಾಕಾರದಲ್ಲಿ ಸುತ್ತುತ್ತಾ, ಕೈಯಲ್ಲಿದ್ದ ಕೋಲಿನಿಂದ ತನ್ನನ್ನೇ ಹೊಡೆಯುತ್ತಿರುವ ಸ್ಥಿತಿಯಲ್ಲಿ ಕಂಡುಬಂದ. ಆಗ ಆತ, "ಬೆಂಕಿಯ ಉಂಡೆ ನನ್ನನ್ನು ಇಲ್ಲಿ ಕರೆತಂದಿತು. ನಂತರ ಬೆಂಕಿ ಹಿಡಿದ ಕೋಲು ಹಿಡಿದ ಭಯಾನಕ ಆಕೃತಿ ನನ್ನ ಮುಂದೆ ಕಾಣಿಸಿಕೊಂಡು ನನ್ನನ್ನು ತನ್ನ ಹಿಂದೆ ನಡೆಯುವಂತೆ ಮಾಡಿತು" ಎಂದು ಹೇಳಿದ್ದಾನೆ ಎನ್ನಲಾಗಿದೆ. ಕೊನೆಗೆ ಅಜ್ಜಿ ಗ್ರಾಮದಲ್ಲಿದ್ದ ಪುರಾತನ ಶಿವ ದೇವಸ್ಥಾನದ ವಯೋವೃದ್ಧ ಅರ್ಚಕರ ಬಳಿ ಕರೆದುಕೊಂಡು ಹೋದರು. ಅವರು ಚಿರಾಗ್‌ಗೆ ವಿಶೇಷ ಪೂಜೆ ಮಾಡಿ, ಮಂತ್ರಿಸಿದ ವಿಭೂತಿ ಮತ್ತು ತಾಯಿತ ನೀಡಿ, ಮತ್ತೆ ಬೆಂಕಿಯ ಉಂಡೆ ಕಂಡರೆ ಶಿವನ ನಾಮಸ್ಮರಣೆ ಮಾಡುತ್ತಾ ವಿಭೂತಿ ಎರಚುವಂತೆ ಸೂಚಿಸಿದರು. ಅರ್ಚಕರ ಮಾತಿನಂತೆ ಮಾಡಿದ ನಂತರ ಭಯಾನಕ ಅನುಭವಗಳು ನಿಂತು, ಕೊಳ್ಳಿ ದೆವ್ವದ ಕಾಟದಿಂದ ಮುಕ್ತಿ ಸಿಕ್ಕಿತೆಂದು ಈ ಕಥೆ ಹೇಳುತ್ತದೆ. ಆ ಘಟನೆಯ ಬಳಿಕ ಚಿರಾಗ್ ಯಾವುದೇ ನಂಬಿಕೆಯನ್ನು ಹೀಯಾಳಿಸುವುದನ್ನು ಬಿಟ್ಟಿದ್ದಾನೆ ಎನ್ನಲಾಗುತ್ತದೆ. ಆದರೆ ಆ ಅಮಾವಾಸ್ಯೆಯ ರಾತ್ರಿಗಳ ನೆನಪು ಬಂದಾಗ ಇಂದಿಗೂ ಆತ ಬೆಚ್ಚಿಬೀಳುತ್ತಾನೆ ಎಂಬುದು ಈ ಕಥೆಯ ಅಂತ್ಯ.