ಬೆಂಗಳೂರು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಇನ್ಮುಂದೆ ಧೈರ್ಯವಾಗಿ ಓಡಾಡಿ!
ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದ ಬೆನ್ನಲ್ಲೇ ಟ್ರಾಫಿಕ್ ಜಾಮ್ ಶೇ.50 ರಷ್ಟು ಕಡಿಮೆಯಾಗಿದೆ. ವಾಹನ ಸವಾರರಿಗೆ ಈಗ 30-40 ನಿಮಿಷಗಳ ಉಳಿತಾಯವಾಗುತ್ತಿದೆ.
ಬೆಂಗಳೂರು (ಸೆ.26): ಸಿಲಿಕಾನ್ ಸಿಟಿ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಎಂದಾಕ್ಷಣ ಹಲವರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣ ಅಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆ. ವಾರದ ದಿನಗಳಲ್ಲಿ (ಸೋಮವಾರ ಟು ಶುಕ್ರವಾರ) ಬೆಳಗ್ಗೆ ಮತ್ತು ಸಂಜೆ ಉಂಟಾಗುತ್ತಿದ್ದ ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ಗೆ ಬೆಂಗಳೂರು ಜನತೆ ಬೆಚ್ಚಿ ಬೀಳುತ್ತಿದ್ದಾರೆ. ಆದರೆ, ಇದೀಗ ಡಬಲ್ ಡೆಕ್ಕರ್ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದ ಬೆನ್ನಲ್ಲಿಯೇ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಜನರು ಧೈರ್ಯವಾಗಿ ಓಡಾಡಬಹುದು ಎಂದು ಹೇಳುತ್ತಿದ್ದಾರೆ.
ಬೆಂಗಳೂರಿನ ಬಹು ನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್ ಜುಲೈ ತಿಂಗಳಲ್ಲಿ ಉದ್ಘಾಟನೆಯ ನಂತರ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಕನಿಷ್ಠ 50 ಪ್ರತಿಶತದಷ್ಟು ಟ್ರಾಫಿಕ್ ಕಡಿತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಪೂರ್ವ ವಿಬಾಗದ ಡೆಪ್ಯೂಟಿ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರ ಮಾಹಿತಿ ಪ್ರಕಾರ, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬೆಳಿಗ್ಗೆ ಮತ್ತು ಪೀಕ್ ಅವರ್‌ಗಳಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ತಗ್ಗಿದೆ. ಹೊಸದಾಗಿ ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ಡಬಲ್ ಡೆಕ್ಕರ್ ಫ್ಲೈಓವರ್‌ನಿಂದಾಗಿ ಟ್ರಾಫಿಕ್ ಪ್ರಮಾಣ ತಗ್ಗಿದ್ದು, ಅದಕ್ಕೆ ನಾವು ಥ್ಯಾಂಕ್ಸ್ ಹೇಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡ ರೈಲು: ಅದು ಹಾಗಲ್ಲವೆಂದು ಅಸಲಿ ಸತ್ಯ ಬಿಚ್ಚಿಟ್ಟ ರೈಲ್ವೆ ಇಲಾಖೆ!
ಡಬಲ್ ಡೆಕ್ಕರ್ ಫ್ಲೈಓವರ್‌ನಿಂದ ಏನು ಬದಲಾಗಿದೆ?
ಡಬಲ್ ಡೆಕ್ಕರ್ ಮೇಲ್ಸೇತುವೆ ಉದ್ಘಾಟನೆಗೊಳ್ಳುವ ಮೊದಲು, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರತಿ ದಿನ 24ಕ್ಕೂ ಅಧಿಕ ಬಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದು ಒಂದು ತಿಂಗಳೊಳಗೆ 15ಕ್ಕೆ ಇಳಿಯಿತು. ಅದೇ ಅವಧಿಯಲ್ಲಿ, ಟ್ರಾಫಿಕ್ ಕ್ಯೂಗಳ ಸರಾಸರಿ ಉದ್ದವು 19 ಕಿ.ಮೀ ನಿಂದ 10 ಕಿ.ಮೀ ವರೆಗೆ ಕಡಿಮೆಯಾಗಿದೆ. ಫ್ಲೈಓವರ್ ಉದ್ಘಾಟನೆಯಾದ ಒಂದು ತಿಂಗಳ ನಂತರ, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ನಡುವೆ ಟ್ರಾಫಿಕ್ ಜಾಮ್ ಪ್ರಮಾಣ ಶೇ.42 ರಷ್ಟು ಕಡಿಮೆಯಾಗಿದೆ. ಇನ್ನು ಸಂಜೆ 4 ರಿಂದ ರಾತ್ರಿ 11 ಗಂಟೆವರೆಗೆ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಪ್ರಮಾಣ ಶೇ.45 ರಷ್ಟು ಕಡಿಮೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ವಾಹನ ಸವಾರರಿಗೆ 40 ನಿಮಿಷಗಳ ಉಳಿತಾಯ: ಮುಖ್ಯವಾಗಿ ಈ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಹೊರ ವರ್ತುಲ ರಸ್ತೆಯಲ್ಲಿ (Bengaluru Outer Ring Road Traffic) ಟ್ರಾಫಿಕ್ ಜಾಮ್ ಅನ್ನು ಕಡಿಮೆ ಮಾಡಲು ನಿರ್ಮಿಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಬೈಪಾಸ್ ಮಾಡುವ ಮೂಲಕ ನಗರದ ವಿವಿಧ ಭಾಗಗಳಿಂದ ಹೊಸೂರು ರಸ್ತೆ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಮತ್ತು ರಾಗಿಗುಡ್ಡದಂತಹ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ 30-40 ನಿಮಿಷಗಳ ಉಳಿತಾಯ ಮಾಡಲಾಗಿದೆ. ಹೀಗಾಗಿ, ಇನ್ನುಮುಂದೆ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಹೋಗುವವರು ಟ್ರಾಫಿಕ್ ಜಾಮ್ ಭಯವಿಲ್ಲದೇ ಧೈರ್ಯವಾಗಿ ಓಡಾಡಬಹುದು.
ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆಗೆ ಭೀಕರ ಟ್ವಿಸ್ಟ್ ಬಿಚ್ಚಿಟ್ಟ ಡೆತ್ ನೋಟ್: ದೇಹ ಕತ್ತರಿಸಲು ಆಕ್ಸಲ್ ಬ್ಲೇಡ್ ಬಳಕೆ!
ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಹಿತಿ:
ಬೆಂಗಳೂರಿನ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ 5.12 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ₹ 449 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಮೆಟ್ರೋ ರೈಲು ಹಾಗೂ ವಾಹನ ಸಂಚಾರಕ್ಕೆ ರಸ್ತೆಯನ್ನು ಹೊಂದಿರುವ ಮೇಲ್ಸೇತುವೆಯಾಗಿದೆ. ಇದು ಐದು ವಿಭಿನ್ನ ರಾಂಪ್‌ಗಳನ್ನು ಹೊಂದಿದೆ. ಮೂರು ರ‍್ಯಾಂಪ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ಡೌನ್ ರ‍್ಯಾಂಪ್‌ಗಳ ಕಾಮಗಾರಿ ಚಾಲ್ತಿಯಲ್ಲಿದೆ. ಇದು ದಕ್ಷಿಣ ಭಾರತ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಆಗಿದೆ. ಈ ಫ್ಲೈಓವರ್ ಮೂಲಕ ಹಾದು ಹೋಗುವ ಹಳದಿ ಲೈನ್ ಮೆಟ್ರೋ ಇನ್ನೂ ಕಾರ್ಯಾರಂಭವಾಗಿಲ್ಲ. ಆದರೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾಹಿತಿ ಪಗ್ರಕಾರ ಡಿಸೆಂಬರ್ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ.