ಕೆ.ಡಿ. ಕೆಂಪಮ್ಮ ಅಲಿಯಾಸ್ 'ಸೈನೈಡ್ ಮಲ್ಲಿಕಾ', ಭಾರತದ ಮೊದಲ ಮಹಿಳಾ ಸರಣಿ ಕೊಲೆಗಾರ್ತಿ. ಆಕೆ ದೇವಾಲಯಗಳಲ್ಲಿ ಮಹಿಳಾ ಭಕ್ತರೊಂದಿಗೆ ಸ್ನೇಹ ಬೆಳೆಸಿ, ಸೈನೈಡ್ ಮಿಶ್ರಿತ ತೀರ್ಥ ನೀಡಿ ಕೊಂದು ಅವರ ಚಿನ್ನಾಭರಣಗಳನ್ನು ದೋಚುತ್ತಿದ್ದಳು.  

ಬೆಂಗಳೂರು : 2007ರ ಅವಧಿಯಲ್ಲಿ ಬೆಂಗಳೂರಿನ ಹೊರವಲಯ ಹಾಗೂ ಸುತ್ತಮುತ್ತಲ ದೇವಾಲಯ ಪಟ್ಟಣಗಳಲ್ಲಿ ಸಂಭವಿಸಿದ್ದ ನಿಗೂಢ ಮಹಿಳಾ ಸಾವುಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದವು. ಯಾವುದೇ ಗಾಯದ ಗುರುತುಗಳಿಲ್ಲದೆ, ಕೆಲವೊಮ್ಮೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದ ಮೃತದೇಹಗಳು ಪೊಲೀಸರಿಗೂ ತಲೆನೋವಾಗಿದ್ದವು. ಆರಂಭದಲ್ಲಿ ಹಲವು ಪ್ರಕರಣಗಳನ್ನು ‘ಅಸಹಜ ಸಾವು’ ಎಂದು ದಾಖಲಿಸಲಾಗಿತ್ತು. ಆದರೆ ಈ ಎಲ್ಲ ಸಾವಿನ ಹಿಂದೆ ಒಬ್ಬಳೇ ವ್ಯಕ್ತಿ ಇದ್ದಾಳೆ ಎಂಬ ಸತ್ಯ ಬಹಿರಂಗವಾಗಲು ಪೊಲೀಸ್ ಇಲಾಖೆಗೆ ಸುಮಾರು ಒಂದು ದಶಕವೇ ಬೇಕಾಯಿತು. ಆಕೆಯೇ ಕೆ.ಡಿ. ಕೆಂಪಮ್ಮ ಅಲಿಯಾಸ್ ‘ಸೈನೈಡ್ ಮಲ್ಲಿಕಾ’ ಭಾರತದ ಮೊದಲ ಮಹಿಳಾ ಸರಣಿ ಕೊಲೆಗಾರ್ತಿ.

ಇಂದು ಕೂಡ ‘ಸೈನೈಡ್ ಮಲ್ಲಿಕಾ’ ಎಂಬ ಹೆಸರು ಕೇಳಿದರೆ ಪೊಲೀಸರಲ್ಲೂ, ಸಾರ್ವಜನಿಕರಲ್ಲೂ ನಡುಕ ಉಂಟಾಗುತ್ತದೆ. ಅಧಿಕೃತವಾಗಿ ಆರು ಕೊಲೆ ಪ್ರಕರಣಗಳಲ್ಲಿ ಮಾತ್ರ ಆಕೆಗೆ ಶಿಕ್ಷೆ ವಿಧಿಸಲಾದರೂ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಸೇರಿದಂತೆ ಹಲವು ತನಿಖಾಧಿಕಾರಿಗಳು, ಕೆಂಪಮ್ಮ ಕನಿಷ್ಠ 13ಕ್ಕೂ ಹೆಚ್ಚು ಮಹಿಳೆಯರ ಸಾವಿಗೆ ಕಾರಣಳಾಗಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಸೈನೈಡ್ ಮಲ್ಲಿಕಾ ಆಗುವ ಮುನ್ನ ಕೆಂಪಮ್ಮ ಯಾರು?

1970ರ ದಶಕದಲ್ಲಿ ಬೆಂಗಳೂರಿನ ಹೊರವಲಯದ ಕಗ್ಗಲಿಪುರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಕೆಂಪಮ್ಮ ಹೆಚ್ಚು ವಿದ್ಯಾಭ್ಯಾಸ ಮಾಡಿರಲಿಲ್ಲ. ಬೆಂಗಳೂರಿನಲ್ಲಿ ಟೈಲರ್ ಆಗಿದ್ದ ವ್ಯಕ್ತಿಯನ್ನು ವಿವಾಹವಾಗಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನ ತಾಯಿಯಾಗಿದ್ದಳು. ಆದರೆ ಬೇಗ ಶ್ರೀಮಂತಳಾಗಬೇಕೆಂಬ ಆಸೆಯೇ ಆಕೆಯ ಜೀವನವನ್ನು ಅಂಧಕಾರದ ದಾರಿಯತ್ತ ತಳ್ಳಿತು.

ಮನೆ ಸಮೀಪದಲ್ಲೇ ಚಿಟ್ ಫಂಡ್ ವ್ಯವಹಾರ ಆರಂಭಿಸಿದ ಕೆಂಪಮ್ಮ, ಭಾರೀ ನಷ್ಟ ಅನುಭವಿಸಿದಳು. ಇದರ ಪರಿಣಾಮವಾಗಿ ಪತಿ ಆಕೆಯನ್ನು ತೊರೆದನು. ಜೀವನ ಸಾಗಿಸಲು ಮನೆಕೆಲಸಕ್ಕೆ ಸೇರಿದ ಕೆಂಪಮ್ಮ, ಅದೇ ಮನೆಗಳಿಂದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕದಿಯ ತೊಡಗಿದಳು. ಒಮ್ಮೆ ಬಿಡದಿ ಪೊಲೀಸರು ಆಕೆಯನ್ನು ಕಳ್ಳತನ ಪ್ರಕರಣದಲ್ಲಿ ಬಂಧಿಸಿ, ಆರು ತಿಂಗಳು ಜೈಲಿನಲ್ಲಿ ಇರಿಸಿದರು.

ಸೈನೈಡ್ ಪರಿಚಯ ಮತ್ತು ಕೊಲೆ ತಂತ್ರ

ಜೈಲಿನಿಂದ ಬಿಡುಗಡೆಯಾದ ಬಳಿಕ ಹಣ ಸಂಪಾದನೆಗಾಗಿ ಅಕ್ಕಸಾಲಿಗನ ಬಳಿ ಕೆಲಸಕ್ಕೆ ಸೇರಿದ ಕೆಂಪಮ್ಮ, ಅಲ್ಲಿ ಮೊದಲ ಬಾರಿಗೆ ಸೈನೈಡ್ ಎಂಬ ವಿಷಕಾರಿ ರಾಸಾಯನಿಕದ ಬಗ್ಗೆ ತಿಳಿದುಕೊಂಡಳು. ಅಲ್ಪ ಪ್ರಮಾಣದಲ್ಲೇ ಮರಣಕ್ಕೆ ಕಾರಣವಾಗುವ ಈ ವಿಷ, ದೇಹದಲ್ಲಿ ಗಾಯದ ಗುರುತು ಬಿಡದೆ ಸಾವಿಗೆ ಕಾರಣವಾಗುತ್ತದೆ ಎಂಬುದು ಆಕೆಗೆ ತಿಳಿಯಿತು. ಇದೇ ಆಕೆಯ ಭೀಕರ ಅಪರಾಧಗಳಿಗೆ ಪ್ರಮುಖ ಅಸ್ತ್ರವಾಯಿತು.

ಕೆಂಪಮ್ಮನ ಗುರಿ ಸ್ಪಷ್ಟವಾಗಿತ್ತು – ದೇವಾಲಯಗಳಿಗೆ ಭೇಟಿ ನೀಡುವ ಮಹಿಳಾ ಭಕ್ತರು ಮತ್ತು ಅವರು ಧರಿಸಿದ್ದ ಚಿನ್ನಾಭರಣ. ಮೊದಲು ಆಕೆ ಭಕ್ತರೊಂದಿಗೆ ಆತ್ಮೀಯವಾಗಿ ಮಾತನಾಡಿ ನಂಬಿಕೆ ಗಳಿಸುತ್ತಿದ್ದಳು. ಸಂಕಷ್ಟದಲ್ಲಿರುವ ಮಹಿಳೆಯರಿಗೆ ಧಾರ್ಮಿಕ ಪರಿಹಾರ, ಪೂಜೆ, ಮಂಡಲ ವ್ರತಗಳ ಭರವಸೆ ನೀಡಿ ಹೊರವಲಯದ ದೇವಾಲಯಗಳಿಗೆ ಕರೆಸಿಕೊಳ್ಳುತ್ತಿದ್ದಳು. ಪೂಜೆಯ ವೇಳೆ ಕಣ್ಣು ಮುಚ್ಚಿ ಪ್ರಾರ್ಥಿಸಲು ಹೇಳಿ, ಸೈನೈಡ್ ಮಿಶ್ರಿತ ತೀರ್ಥವನ್ನು ಕುಡಿಯಲು ನೀಡುತ್ತಿದ್ದಳು.

ಕೊಲೆಗಳ ಭೀಕರ ಸರಣಿ

1999ರಲ್ಲಿ 30 ವರ್ಷದ ಶ್ರೀಮಂತ ಮಹಿಳೆ ಮಮತಾ ರಾಜನ್ ಅವರ ಹತ್ಯೆಯೊಂದಿಗೆ ಕೆಂಪಮ್ಮ ತನ್ನ ಮೊದಲ ಕೊಲೆಯನ್ನು ನಡೆಸಿದಳು. 2000ರಲ್ಲಿ ಮತ್ತೆ ಕಳ್ಳತನ ಪ್ರಕರಣದಲ್ಲಿ ಬಂಧಿತಳಾಗಿ ಆರು ತಿಂಗಳು ಜೈಲು ಸೇರಿದಳು. ಜೈಲಿನಿಂದ ಹೊರಬಂದ ಬಳಿಕ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದಳು.

2007ರ ಅಕ್ಟೋಬರ್ 10ರಿಂದ ಡಿಸೆಂಬರ್ 18ರ ನಡುವಿನ ಅವಧಿಯಲ್ಲಿ ಕೆಂಪಮ್ಮ ಐದು ಮಹಿಳೆಯರನ್ನು ಹತ್ಯೆ ಮಾಡಿದ್ದಳು.

ಎಲಿಜಬೆತ್ (52) – ಸಾತನೂರು: ಕಾಣೆಯಾದ ಮೊಮ್ಮಗಳನ್ನು ಹುಡುಕಲು ಪ್ರಾರ್ಥಿಸುತ್ತಿದ್ದ ಆಕೆಯನ್ನು ಕಬಾಲಮ್ಮನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಕೊಂದಳು.

ಯಶೋಧಮ್ಮ (60) – ಕ್ಯಾತಸಂದ್ರದ ಸಿದ್ದಗಂಗಾ ಮಠ: ಅಸ್ತಮಾದಿಂದ ಮುಕ್ತಿ ನೀಡುವ ಭರವಸೆ ನೀಡಿ ಹತ್ಯೆ.

ಮುನಿಯಮ್ಮ (60) – ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ: ಭಕ್ತಿಗೀತೆ ಹಾಡುವ ಆಸೆಯಿದ್ದ ಮಹಿಳೆ.

ಪಿಳ್ಳಮ್ಮ (60) – ಮದ್ದೂರು ವ್ಯದ್ಯನಾಥಪುರ: ಹೆಬ್ಬಾಳ ದೇವಸ್ಥಾನಕ್ಕೆ ಕಮಾನು ನಿರ್ಮಾಣದ ನೆಪದಲ್ಲಿ ಕೊಲೆ.

ನಾಗವೇಣಿ (30) – ಮಕ್ಕಳಿಲ್ಲದ ಕಾರಣ ಪ್ರಾರ್ಥಿಸುತ್ತಿದ್ದ ಮಹಿಳೆ; ಡಿಸೆಂಬರ್ 18, 2007ರಂದು ಕೊನೆಯ ಬಲಿಪಶು.

ಕೊಲೆಗಳ ನಂತರವೂ ಕೆಂಪಮ್ಮ ಸಹಜವಾಗಿ ಮನೆಕೆಲಸಕ್ಕೆ ಹೋಗುತ್ತಿದ್ದಳು. ಅನುಮಾನ ಬರದಿದ್ದುದು ಇದಕ್ಕೆ ಕಾರಣ. ಈ ವೇಳೆ ಲಾಡ್ಜ್‌ನಲ್ಲಿ ತನ್ನ ಹೆಸರನ್ನು ‘ಮಲ್ಲಿಕಾ’ ಎಂದು ನೋಂದಾಯಿಸಿಕೊಂಡಿದ್ದರಿಂದಲೇ ಆಕೆಗೆ ‘ಸೈನೈಡ್ ಮಲ್ಲಿಕಾ’ ಎಂಬ ಹೆಸರು ಜನಪ್ರಿಯವಾಯಿತು.

ಸಿಕ್ಕಿಬಿದ್ದದ್ದು ಹೇಗೆ?

ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್ ಅವರು ಮದ್ದೂರಿನ ಲಾಡ್ಜ್‌ನಲ್ಲಿ ಪತ್ತೆಯಾದ ಯಶೋಧಮ್ಮ ಅವರ ಶವದ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಓದಿದ ಬಳಿಕ, ಹಳೆಯ ನಿಗೂಢ ಸಾವುಗಳೊಂದಿಗೆ ಕೊಂಡಿ ಇರುವುದು ಕಂಡುಹಿಡಿದರು. ಯಶೋಧಮ್ಮ ಅವರ ಮೊಬೈಲ್ ಐಎಂಇಐ ಸಂಖ್ಯೆಯ ಆಧಾರದಲ್ಲಿ ಟ್ರ್ಯಾಕ್ ಮಾಡಿದಾಗ, ಬೆಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಂಪಮ್ಮ ಸಿಕ್ಕಿಬಿದ್ದಳು. ಆಕೆಯ ಬ್ಯಾಗ್‌ನಲ್ಲಿ ಸೈನೈಡ್ ಮತ್ತು ಸಂತ್ರಸ್ತರ ಚಿನ್ನಾಭರಣ ಪತ್ತೆಯಾಯಿತು.

ಶಿಕ್ಷೆ ಮತ್ತು ಇಂದಿನ ಸ್ಥಿತಿ

2010ರಲ್ಲಿ ಮುನಿಯಮ್ಮ ಕೊಲೆ ಪ್ರಕರಣದಲ್ಲಿ ಸೈನೈಡ್ ಮಲ್ಲಿಕಾಗೆ ಮರಣದಂಡನೆ ವಿಧಿಸಲಾಯಿತು. ಕರ್ನಾಟಕದಲ್ಲಿ ಮರಣದಂಡನೆಗೆ ಗುರಿಯಾದ ಮೊದಲ ಮಹಿಳಾ ಅಪರಾಧಿ ಆದಳು. 2012ರಲ್ಲಿ ನಾಗವೇಣಿ ಕೊಲೆ ಪ್ರಕರಣದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಯಿತು.

ಸದ್ಯ 50ರ ಹರೆಯದ ಸೈನೈಡ್ ಮಲ್ಲಿಕಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ. 2017ರಲ್ಲಿ ವಿ.ಕೆ. ಶಶಿಕಲಾ ಜೈಲಿನಲ್ಲಿದ್ದಾಗ, ಕೆಂಪಮ್ಮ ಅವರ ಪಕ್ಕದ ಸೆಲ್‌ನಲ್ಲಿದ್ದಳು ಎಂಬುದು ಕೂಡ ಸುದ್ದಿಯಾಗಿತ್ತು. ಭದ್ರತಾ ಕಾರಣಗಳಿಂದ ನಂತರ ಆಕೆಯನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಯಿತು.