ಬೆಂಗಳೂರು ಗ್ರಾಮಾಂತರದಲ್ಲಿ ರೌಡಿ ಶೀಟರ್ ಕಾರ್ತಿಕ್‌ನನ್ನು ಪ್ರತಿಸ್ಪರ್ಧಿ ಗಂಗಾ ಗ್ಯಾಂಗ್ ಅಪಹರಿಸಿ, ಹೊಸೂರಿಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದೆ. ಹಲ್ಲೆಯ ವೇಳೆ ಆತನ ಬೆರಳುಗಳನ್ನು ಕತ್ತರಿಸಿ, ಗಂಭೀರವಾಗಿ ಗಾಯಗೊಂಡ ಆತನನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದೆ.
ಬೆಂಗಳೂರು: ರೌಡಿ ಶೀಟರ್‌ನಿಂದಲೇ ಮತ್ತೊಬ್ಬ ರೌಡಿ ಶೀಟರ್‌ನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕು ಹಾಗೂ ತಮಿಳುನಾಡಿನ ಹೊಸೂರು ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಗ್ಯಾಂಗ್‌ವಾರ್‌ನ ಭೀತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ರೌಡಿ ಶೀಟರ್ ಗಂಗಾ ಮತ್ತು ಆತನ ಗ್ಯಾಂಗ್ ಕಿಡ್ನಾಪ್
ಗಾಯಾಳುವಾಗಿರುವ ರೌಡಿ ಶೀಟರ್‌ನನ್ನು ಕಾರ್ತಿಕ್ @ ಜೆಕೆ ಸಲಗ ಎಂದು ಗುರುತಿಸಲಾಗಿದ್ದು, ಆತನನ್ನು ರೌಡಿ ಶೀಟರ್ ಗಂಗಾ ಮತ್ತು ಆತನ ಗ್ಯಾಂಗ್ ಕಿಡ್ನಾಪ್ ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ ಆನೇಕಲ್ ತಾಲ್ಲೂಕಿನ ಹುಸ್ಕೂರು ಸಮೀಪ ಕಾರ್ತಿಕ್‌ನ್ನು ಕಾರಿನಲ್ಲಿ ಕಿಡ್ನಾಪ್ ಮಾಡಲಾಗಿದ್ದು, ಬಳಿಕ ತಮಿಳುನಾಡಿನ ಹೊಸೂರು ಬಳಿ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಗಂಗಾ ಗ್ಯಾಂಗ್ ಕಾರ್ತಿಕ್‌ನ್ನು ಕಾರಿನಲ್ಲಿ ಅಪಹರಿಸಿ, ಇಡೀ ರಾತ್ರಿ ಚಿತ್ರಹಿಂಸೆ ನೀಡಿದೆ. ಹಲ್ಲೆಯ ವೇಳೆ ಕಾರ್ತಿಕ್‌ನ ಬೆರಳುಗಳನ್ನು ಕತ್ತರಿಸಿದ್ದು, ತೀವ್ರವಾಗಿ ಗಾಯಗೊಳಿಸಲಾಗಿದೆ. ನಂತರ ಗ್ಯಾಂಗ್ ಸದಸ್ಯರು ಗಂಭೀರವಾಗಿ ಗಾಯಗೊಂಡ ಕಾರ್ತಿಕ್‌ನ್ನು ಹುಸ್ಕೂರು ಸಮೀಪ ರಸ್ತೆಯ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಘಟನೆ ಬಳಿಕ ಸ್ಥಳೀಯರು ಮತ್ತು ಪರಿಚಿತರಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದು, ಗಂಗಾ ಮತ್ತು ಆತನ ಗ್ಯಾಂಗ್ ಪರಾರಿಯಾಗಿದ್ದಾರೆ.
ಗ್ಯಾಂಗ್‌ವಾರ್ ಹಿನ್ನೆಲೆ
ಈ ಕಿಡ್ನಾಪ್ ಮತ್ತು ಹಲ್ಲೆಯ ಹಿಂದೆ ಗ್ಯಾಂಗ್‌ವಾರ್ ಹಿನ್ನೆಲೆ ಇರುವುದಾಗಿ ತಿಳಿದುಬಂದಿದೆ. ರೌಡಿ ಶೀಟರ್ ಕಾರ್ತಿಕ್ @ ಜೆಕೆ ಮತ್ತು ಗಂಗಾ ನಡುವೆ ಕಳೆದ ಕೆಲ ವರ್ಷಗಳಿಂದ ವೈಷಮ್ಯ ಇದ್ದು, ಕಳೆದ ವರ್ಷ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ಹಾಕಿಕೊಂಡು ಬೆದರಿಕೆ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು. ಇದೇ ವಿಚಾರ ಕ್ರಮೇಣ ಗ್ಯಾಂಗ್‌ವಾರ್ ರೂಪ ಪಡೆದುಕೊಂಡಿದ್ದು, ಆ ದ್ವೇಷದ ಫಲವಾಗಿ ಈ ಕಿಡ್ನಾಪ್ ಮತ್ತು ಹಲ್ಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಕಾರ್ತಿಕ್‌ನ್ನು ತಕ್ಷಣ ಬೆಂಗಳೂರು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಆನೇಕಲ್ ಮತ್ತು ಹೊಸೂರು ಪೊಲೀಸ್ ತಂಡಗಳು ಒಟ್ಟಾಗಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಗ್ಯಾಂಗ್‌ವಾರ್ ಹಿನ್ನೆಲೆಯ ಈ ಪ್ರಕರಣ ಪ್ರದೇಶದಲ್ಲಿ ಆತಂಕ ಮೂಡಿಸಿದೆ.


