ಡ್ರಗ್ಸ್‌ ಜಾಲ ನಿರ್ಮೂಲನೆ ಮಾಡುತ್ತೇನೆ|ಕೊರೋನಾ ಸೋಂಕು ಇಳಿಕೆ ಬಳಿಕ ಡ್ರಂಕ್‌ ಅಂಡ್‌ ಡ್ರೈವ್‌ ಕಾರ್ಯಾಚರಣೆ ಶುರು| ಧೂಮಪಾನಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ| ಮಹಿಳೆಯರಿಗೆ ಯಾವುದೇ ಹಂತದಲ್ಲೂ ಅಸುರಕ್ಷತೆ ಕಾಡಾದಂತೆ ಎಚ್ಚರಿಕೆ ವಹಿಸಿದ್ದೇವೆ: ಪಂತ್‌| 

ಬೆಂಗಳೂರು(ಏ.18): ಪೊಲೀಸರ ಮೇಲೆ ಎಷ್ಟೇ ಕಾರ್ಯದೊತ್ತಡವಿದ್ದರೂ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ನಗರದಲ್ಲಿ ಡ್ರಗ್ಸ್‌ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿಯೇ ತೀರುತ್ತೇವೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಶನಿವಾರ ಜನರೊಂದಿಗೆ ಸಂವಾದ ನಡೆಸಿದ ಆಯುಕ್ತರು, ಡ್ರಗ್ಸ್‌ ಮಾಫಿಯಾ ಕುರಿತು ಜನರ ಪ್ರಶ್ನೆಗಳಿಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಡ್ರಗ್ಸ್‌ ಜಾಲದ ಚಟುವಟಿಕೆಗಳಿಗೆ ಅಸ್ಪದ ನೀಡುವುದಿಲ್ಲ. ಆ ದಂಧೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ನಾಗರಿಕರ ರಕ್ಷಣೆಗೆ ಪೊಲೀಸರು ಬದ್ಧರಾಗಿದ್ದೇವೆ. ಮಹಿಳೆಯರಿಗೆ ಯಾವುದೇ ಹಂತದಲ್ಲೂ ಅಸುರಕ್ಷತೆ ಕಾಡಾದಂತೆ ಎಚ್ಚರಿಕೆ ವಹಿಸಿದ್ದೇವೆ. ಸಮಸ್ಯೆ ಎದುರಾದರೆ 112ಕ್ಕೆ ಕರೆ ಮಾಡಿದರೆ ತಕ್ಷಣವೇ ಪೊಲೀಸರ ನೆರವು ಸಿಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಗರದಲ್ಲಿ 200 ಹೊಯ್ಸಳ ವಾಹನಗಳು 24 ತಾಸು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಠಾಣೆಯಲ್ಲಿ 2ರಿಂದ 5 ಹೊಯ್ಸಳ ವಾಹನಗಳಿವೆ. ಮಹಿಳೆಯರು ತೊಂದರೆಗೆ ಸಿಲುಕಿದ ಮಾಹಿತಿ ಸಿಕ್ಕಿದೆ ಕೆಲವೇ ನಿಮಿಷಗಳಲ್ಲಿ ಹೊಯ್ಸಳ ವಾಹನಗಳು ಘಟನಾ ಸ್ಥಳದಲ್ಲಿರುತ್ತವೆ ಎಂದು ಹೇಳಿದ್ದಾರೆ. 

ಬೆಂಗಳೂರಿನಲ್ಲಿ 144, ರಾತ್ರಿ 10ಕ್ಕೆ ಎಲ್ಲ ಬಂದ್ ಆಗ್ಬೇಕು..ಯಾವುದಕ್ಕೆಲ್ಲ ಬ್ರೇಕ್?

ಕೊರೋನಾ ಕಾಲದಲ್ಲಿ ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿ ಜನರು ಕೈ ಜೋಡಿಸಬಹುದು. ಮಾಸ್ಕ್‌ ಜಾಗೃತಿ ಮತ್ತು ಕಾರ್ಯಾಚರಣೆಯಲ್ಲಿ ಸ್ವಯಂ ಸೇವಕರಾಗಿ ಜನರು ಕೆಲಸ ಮಾಡಬಹುದು. ಈ ಸಂಬಂಧ ಸ್ಥಳೀಯರ ಠಾಣೆಗಳಲ್ಲಿ ಹೆಸರು ನೊಂದಾಯಿಸಿಕೊಂಡು ಕೆಲಸ ಮಾಡಬೇಕು ಎಂದರು.

ಧೂಮಪಾನಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ

ಧೂಮಪಾನ ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ಜನರು ಧೂಮಪಾನ ಮಾಡುತ್ತಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಧೂಮಪಾನ ವಿಷಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಕಮಲ್‌ ಪಂತ್‌ ಭರವಸೆ ನೀಡಿದ್ದಾರೆ.

ರೌಡಿ ಚುಟವಟಿಕೆಗಳ ಬಗ್ಗೆ ಅಂಜಿಕೆ ಇಲ್ಲದೆ ಜನರು ಮುಕ್ತವಾಗಿ ಪೊಲೀಸ್‌ ನಿಯಂತ್ರಣ ಕೊಠಡಿ, ಟ್ವಿಟರ್‌ನಲ್ಲಿ ಡಿಎಂ ಅಥವಾ ಸ್ಥಳೀಯ ಠಾಣೆಗೆ ಹೋಗಿ ಮಾಹಿತಿ ನೀಡಿದರೆ ಮಾಹಿತಿದಾರರ ಹೆಸರು ಗೌಪ್ಯವಾಗಿಟ್ಟು ಕಾರ್ಯಾಚರಣೆ ನಡೆಸಲಾಗುತ್ತದೆ. ನಗರದ ಪೊಲೀಸ್‌ ನಿಯಂತ್ರಣ ಕೊಠಡಿ (112)ಯಲ್ಲಿ ಹೊರಗುತ್ತಿಗೆ ಮೇರೆಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆ ಸಿಬ್ಬಂದಿಗೆ ಜನರ ಜತೆ ಸಂಪರ್ಕ ಇರುವುದಿಲ್ಲ. ಹೀಗಾಗಿ ಮಾಹಿತಿ ನೀಡಲು ಜನರು ಹಿಂದೇಟು ಹಾಕುವ ಅವಶ್ಯಕತೆ ಇಲ್ಲ ಎಂದು ಕಮಲ್‌ ಪಂತ್‌ ಸ್ಪಷ್ಟಪಡಿಸಿದ್ದಾರೆ. 

ಪೊಲೀಸರು ಲಂಚ ಕೇಳಿದ್ರೆ ವಾಟ್ಸಾಪ್‌ ಮಾಡಿ..!

ಜನರು ವಾಹನ ನಿಲುಗಡೆಗೆ ನಿಗದಿತದಲ್ಲೇ ಅನುಸರಿಸಿ ವಾಹನ ನಿಲುಗಡೆ ಮಾಡಬೇಕು. ಸಂಚಾರಕ್ಕೆ ತೊಂದರೆ ಉಂಟಾಗದಂತೆ ವಾಹನ ನಿಲುಗಡೆ ಮಾಡಿದರೆ ಅಭ್ಯಂತರವಿಲ್ಲ. ಆದರೆ ನೋ ಪಾರ್ಕಿಂಗ್‌ಗಳಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್‌ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಕೊರೋನಾ ಬಳಿಕ ಡ್ರಂಕ್‌ ಅಂಡ್‌ ಡ್ರೈವ್‌

ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಡ್ರಂಕ್‌ ಅಂಡ್‌ ಡ್ರೈವ್‌ ವಿರುದ್ಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಈಗ ನೈಟ್‌ ಕರ್ಪ್ಯೂ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ಬಾರ್‌ಗಳು ವಹಿವಾಟು ಮುಗಿಸುತ್ತಿವೆ. ಹೀಗಾಗಿ ಕೊರೋನಾ ಸೋಂಕು ಇಳಿಕೆ ಬಳಿಕ ಡ್ರಂಕ್‌ ಅಂಡ್‌ ಡ್ರೈವ್‌ ಕಾರ್ಯಾಚರಣೆ ಶುರು ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.