ಬೆಂಗಳೂರು(ನ.22):  ಅಪರಾಧ ಕೃತ್ಯಗಳಿಗೆ ನೆರವು ನೀಡುವ ಅಥವಾ ಸುಳ್ಳು ಕೇಸ್‌ ಹಾಕುವುದಾಗಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸುವ ಪೊಲೀಸರ ವಿರುದ್ಧ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ವಾಟ್ಸಾಪ್‌ (94808 01000) ಮೂಲಕ ಸಾರ್ವಜನಿಕರು ದೂರು ನೀಡಬಹುದಾಗಿದೆ.

ಸಾರ್ವಜನಿಕರ ಜತೆ ಟ್ವಿಟರ್‌ನಲ್ಲಿ ಶನಿವಾರ ಸಂವಾದ ನಡೆಸಿದ ಆಯುಕ್ತ ಕಮಲ್‌ ಪಂತ್‌ ಅವರು, ಜನ ಸ್ನೇಹಿ ಹಾಗೂ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಲಾಗಿದೆ. ಜನರಿಗೆ ಪೊಲೀಸರಿಂದ ತೊಂದರೆ ಉಂಟಾದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಎಸ್‌ಆರ್‌ಎಸ್‌ ಆಟೋ ಟೆಕ್‌ ಹೆಸರಿನ ಖಾತೆಯಲ್ಲಿ ಟ್ವೀಟ್‌ ಮಾಡಿ ವ್ಯಕ್ತಿಯೊಬ್ಬರು, ಕಾರಿನ ಗಾಜುಗಳಿಗೆ ಸನ್‌ಗ್ಲಾಸ್‌ ಗೋಚರತೆ ಎಷ್ಟಿರಬೇಕು? ತಮಿಳುನಾಡು ವಾಹನಗಳನ್ನೇ ನಗರ ಸಂಚಾರ ಪೊಲೀಸರು ಟಾರ್ಗೆಟ್‌ ಮಾಡುತ್ತಿದ್ದಾರೆ. ಲಂಚ ತೆಗೆದುಕೊಳ್ಳುವುದನ್ನು ಯಾವಾಗ ನಿಲ್ಲಿಸುತ್ತಾರೆ ಎಂದು ಪ್ರಶ್ನಿಸಿದರು.

ಬಂದ್‌ಗೆ ಅನುಮತಿ ಇಲ್ಲ, ಪ್ರತಿಭಟಿಸಿದರೆ ಕ್ರಮ: ಕಮಲ್‌ ಪಂತ್‌

ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಕಾರುಗಳ ಗಾಜು ಕಡ್ಡಾಯವಾಗಿ ಶೇ.50ರಷ್ಟು ಗೋಚರತೆ ಇರಬೇಕು. ನಿಮಗೆ ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ಅಂಥವರ ಹೆಸರು, ಸ್ಥಾನ ಮತ್ತು ಘಟನೆಯ ಸ್ಥಳದ ಮಾಹಿತಿಯನ್ನು ನಮ್ಮ ವ್ಯಾಟ್ಸಾಪ್‌ 94808 01000ಗೆ ಕಳುಹಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಆನ್‌ಲೈನ್‌ನಲ್ಲೂ ದೂರು ಸಲ್ಲಿಸಬಹುದು:

ಆನ್‌ಲೈನ್‌ ಮೂಲಕ ದೂರು ಸ್ವೀಕರಿಸುವ ವ್ಯವಸ್ಥೆಯನ್ನೇ ಯಾಕೆ ರೂಪಿಸಿಲ್ಲ ಎಂಬ ನಿತಿನ್‌ ಎಡೆಹಳ್ಳಿ ಅವರ ಪ್ರರ್ಶನೆಗೆ ಉತ್ತರಿಸಿದ ಆಯುಕ್ತರು, ಜನರ ಅಹವಾಲು ಆಲಿಕೆಗೆ ಆನ್‌ಲೈನ್‌ನಲ್ಲಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಮೊಬೈಲ್‌, ಲ್ಯಾಪ್‌ಟಾಪ್‌, ಪರ್ಸ್‌, ಡಿಎಲ್‌ ಹಾಗೂ ಅಂಕಪಟ್ಟಿಸೇರಿದಂತೆ ಇನ್ನಿತರ ವಸ್ತುಗಳು ಕಳುವಾದರೆ ಆನ್‌ಲೈನ್‌ನಲ್ಲಿ ‘ಇ-ಲಾಸ್ಟ್‌’ ಪೋರ್ಟಲ್‌ನಲ್ಲಿ ದೂರು ಸಲ್ಲಿಸುವ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲದೆ, ‘ನಮ್ಮ 100’ಗೆ ಕರೆ ಮಾಡಿದರೆ ತಕ್ಷಣವೇ ಪೊಲೀಸರ ನೆರವು ಸಿಗಲಿದೆ. ಮಹಿಳೆಯರ ಸುರಕ್ಷತೆಗೆ ಸುರಕ್ಷಾ ಆ್ಯಪ್‌ ಇದೆ ಎಂದು ಆಯುಕ್ತರು ಉತ್ತರಿಸಿದರು.

ಕೊರೋನಾ ಮುಕ್ತ ನಗರಕ್ಕೆ ಸಹಕರಿಸಿ

ಮಾಸ್ಕ್‌ ಧರಿಸದವರ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ದಂಡ ವಿಧಿಸುವ ಅಧಿಕಾರ ಪೊಲೀಸರಿಗೆ ಸಹ ಇದೆ. ದೆಹಲಿಯಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತವೆ. ಹೀಗಾಗಿ ಜನರು ಜಾಗೃತರಾಗಿ ‘ಕೊರೋನಾ ಮುಕ್ತ ಬೆಂಗಳೂರು’ ಮಾಡಲು ಸಹಕರಿಸಬೇಕು ಎಂದು ಆಯುಕ್ತ ಕಮಲ್‌ ಪಂತ್‌ ವಿನಂತಿಸಿದರು. ಟ್ವಿಟರ್‌ ಸಂವಾದದಲ್ಲಿ ಮಾಸ್ಕ್‌ ದಂಡದ ಬಗ್ಗೆ ಕೆಲವರ ತಕರಾರುಗಳಿಗೆ ಆಯುಕ್ತರು ಉತ್ತರಿಸಿದರು.