ಕಳೆದ ವರ್ಷ ರಾಜಧಾನಿಯಲ್ಲಿ ಡಕಾಯಿತಿ, ಸುಲಿಗೆ ಹಾಗೂ ಸರಗಳ್ಳತನ ಹೀಗೆ ಅಪರಾಧ ಕೃತ್ಯಗಳ ಪ್ರಮಾಣ ಇಳಿಕೆಯಾದರೆ, ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತುವವರ ಸಂಖ್ಯೆ ಗಗನಮುಖಿಯಾಗಿದೆ. 

ಬೆಂಗಳೂರು (ಜ.05): ಕಳೆದ ವರ್ಷ ರಾಜಧಾನಿಯಲ್ಲಿ ಡಕಾಯಿತಿ, ಸುಲಿಗೆ ಹಾಗೂ ಸರಗಳ್ಳತನ ಹೀಗೆ ಅಪರಾಧ ಕೃತ್ಯಗಳ ಪ್ರಮಾಣ ಇಳಿಕೆಯಾದರೆ, ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತುವವರ ಸಂಖ್ಯೆ ಗಗನಮುಖಿಯಾಗಿದೆ. ಒಂದೇ ವರ್ಷದಲ್ಲಿ 179.25 ಕೋಟಿ ದಂಡ ಸಂಗ್ರಹವಾಗಿದೆ. ಇದು ಕಳೆದ 5 ವರ್ಷದಲ್ಲಿ ದಾಖಲಾದ ಅತೀ ಹೆಚ್ಚಿನ ದಂಡವಾಗಿದೆ. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ 2022ನೇ ಸಾಲಿನ ಅಪರಾಧ ಪ್ರಕರಣಗಳ ಕುರಿತ ವಾರ್ಷಿಕ ವರದಿ ಪ್ರಕಟಿಸಿದ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರು, ಕಳೆದ ವರ್ಷ ನಗರದಲ್ಲಿ ಒಟ್ಟು 28,518 ಪ್ರಕರಣಗಳು ದಾಖಲಾಗಿವೆ. 

ಮೂರು ವರ್ಷಗಳ ಅಪರಾಧ ಅಂಕಿ-ಅಂಶಗಳಿಗೆ ಹೋಲಿಸಿದರೆ 2022ರಲ್ಲಿ ಅಪರಾಧ ಕೃತ್ಯಗಳಲ್ಲಿ ಇಳಿಕೆ ಮುಖವಾಗಿದೆ ಎಂದರು. 2021ನೇ ಸಾಲಿನಲ್ಲಿ ಕೊರೋನಾ ಲಾಕ್‌ಡೌನ್‌ ಹಾಗೂ ರಾತ್ರಿ ಸಂಚಾರ ನಿಷೇಧದ ಕಾರಣ ಕಡಿಮೆ ಪ್ರಕರಣಗಳು ವರದಿಯಾಗಿದ್ದವು. ಆದರೆ 2022ರಲ್ಲಿ ಡಕಾಯಿತಿ ಶೇ.41, ಸುಲಿಗೆ ಶೇ.06, ಸರ ಅಪಹರಣ ಶೇ.33 ಹಾಗೂ ಮನೆಗಳ್ಳತನ ಶೇ.31ರಷ್ಟುಪ್ರಕರಣಗಳು ಇಳಿಕೆಯಾಗಿದೆ. ಇನ್ನು ವೈಯಕ್ತಿಕ, ಕೌಟುಂಬಿಕ ಆಸ್ತಿ, ಅನೈತಿಕ ಸಂಬಂಧ ಕಾರಣಗಳಿಗೆ ಹೆಚ್ಚು ಕೊಲೆಗಳು ನಡೆದಿವೆ. ಅದೇ ರೀತಿ ಸೈಬರ್‌ ಅಪರಾಧ 9939 ಪ್ರಕರಣಗಳು ದಾಖಲಾಗಿದ್ದು, 2019ಕ್ಕೆ ಹೋಲಿಸಿದರೆ ಇಳಿಯಾಗಿದೆ ಎಂದು ಹೇಳಿದರು.

2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು: 26 ಕೋಟಿಗೂ ಹೆಚ್ಚು ದಂಡ ಸಂಗ್ರಹ

5 ವರ್ಷದಲ್ಲಿ ಕಡಿಮೆ ಸಾವು: ನಗರ ವ್ಯಾಪ್ತಿ ಐದು ವರ್ಷಗಳಲ್ಲಿ ವರದಿಯಾದ ಒಟ್ಟು ಅಪಘಾತಗಳ ಸಂಖ್ಯೆಯನ್ನು 2018ನೇ ಸಾಲಿಗೆ ಹೋಲಿಸಿದಾಗ ಕಳೆದ ವರ್ಷ ಶೇ.17ರಷ್ಟುಇಳಿಕೆಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ 2020ರಲ್ಲಿ 3236 ಹಾಗೂ 2021ರಲ್ಲಿ 3213 ಅಪಘಾತ ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಸಹಜ ಪರಿಸ್ಥಿತಿ ಪರಿಣಾಮ 3827 ಪ್ರಕರಣಗಳು ವರದಿಯಾಗಿದ್ದವು. 2018ರಿಂದ ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಹೋಲಿಸಿದಾಗ ಪ್ರತಿ ಹತ್ತು ಸಾವಿರ ವಾಹನಗಳಿಗೆ 6 ಅಪಘಾತಗಳು ಸಂಭವಿಸುತ್ತಿವೆ. 2022ರಲ್ಲಿ ಈ ಅನುಪಾತವು 3.53ಕ್ಕೆ ಇಳಿಕೆಯಾಗಿದೆ. ಅಂದರೆ ವಾಹನಗಳ ಸಂಖ್ಯೆಯ ಏರುಗತಿಗೆ ಅನುಗುಣವಾಗಿ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ. 2022ರಲ್ಲಿ 748 ಅಪಘಾತಗಳು ಸಂಭವಿಸಿದ್ದು, 777 ಜನರು ಮೃತಪಟ್ಟಿದ್ದಾರೆ. ಹೆಲ್ಮಟ್‌ ಹಾಗೂ ಸೀಟ್‌ ಬೆಲ್ಟ್‌ ಧರಿಸದಿರುವುದು ಸಹ ಅಪಘಾತದಲ್ಲಿ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಸಲೀಂ ಹೇಳಿದರು.

ಮನೆ ಬಾಗಿಲಿಗೆ ದಂಡ ನೋಟಿಸ್‌: ಸಂಚಾರ ನಿಯಮ ಉಲ್ಲಂಘನೆ ಸಂಬಂಧ ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿವಿಧಿಸುವುದು ಕಡಿಮೆಯಾಗಿದ್ದು, ಕ್ಯಾಮೆರಾಗಳ ಆಧರಿಸಿ ದಾಖಲಾಗುವ ಪ್ರಕರಣಗಳು ಹೆಚ್ಚಾಗಿದೆ. 2018ರಲ್ಲಿ ಶೇ.62 ರಷ್ಟುಸಂಪರ್ಕ(ರಸ್ತೆಗಳಲ್ಲಿ ಅಡ್ಡಗಟ್ಟಿದಂಡ ವಿಧಿಸಿದರೆ), ಶೇ.38ರಷ್ಟುಮಾತ್ರ ಸಂಪರ್ಕ ರಹಿತ (ಕ್ಯಾಮೆರಾ ಮೂಲಕ) ಪ್ರಕರಣಗಳು ವರದಿಯಾಗಿದ್ದವು. ಅಂತೆಯೇ 2022ರಲ್ಲಿ ಶೇ.8ರಷ್ಟುಪ್ರಕರಣಗಳನ್ನು ಮಾತ್ರ ಪೊಲೀಸರು ದಾಖಲಿಸಿದ್ದಾರೆ. ಇನ್ನುಳಿದ ಶೇ.92ರಷ್ಟುಕ್ಯಾಮೆರಾಗಳಿಂದ ಪ್ರಕರಣಗಳು ದಾಖಲಾಗಿವೆ ಎಂದು ಸಲೀಂ ತಿಳಿಸಿದರು.

ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ

ಗಸ್ತು ಹೆಚ್ಚಳ, ಜೈಲಿನಿಂದ ಹೊರಬಂದ ಕ್ರಿಮಿನಲ್‌ಗಳ ಮೇಲೆ ನಿರಂತರ ನಿಗಾ, ವೃತ್ತಿಪರ ಗುಂಪುಗಳಿಗೆ ಕಡಿವಾಣ ಹಾಗೂ ತನಿಖೆ ಗುಣಮಟ್ಟಸುಧಾರಣೆ ಪರಿಣಾಮ ಅಪರಾಧ ಕೃತ್ಯಗಳ ಕಡಿಮೆಯಾಗಿದೆ. ನಾಗರಿಕರು 112ಕ್ಕೆ ಕರೆ ಮಾಡಿ ದೂರು ದಾಖಲಿಸಿದರೆ ಪ್ರಕರಣ ಇತ್ಯರ್ಥವಾಗುವರೆಗೆ ಬಿಡುವುದಿಲ್ಲ.
-ಸಿ.ಎಚ್‌.ಪ್ರತಾಪ್‌ ರೆಡ್ಡಿ, ಪೊಲೀಸ್‌ ಆಯುಕ್ತ