ಬೆಂಗಳೂರಿನಲ್ಲಿ ಕಾರಿಗೆ ಅಡ್ಡ ಬಿದ್ದು ಹಣ ವಸೂಲಿ ಮಾಡುವ ಗ್ಯಾಂಗ್ ಸಕ್ರಿಯವಾಗಿದೆ. ವೈಟ್‌ಫೀಲ್ಡ್‌ನಲ್ಲಿ ನಡೆದ ಘಟನೆಯಲ್ಲಿ ಕಾರಿನ ಮುಂದೆ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಬಿದ್ದು ಹಣ ವಸೂಲಿ ಮಾಡಲು ಯತ್ನಿಸಿದ್ದಾನೆ. ಈ ಘಟನೆ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು (ಫೆ.03): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾರಿನ ಮಾಲೀಕರೇ ರಸ್ತೆಯಲ್ಲಿ ಹೋಗುವಾಗ ತುಂಬಾ ಎಚ್ಚರವಹಿಸಬೇಕು. ಕಾರಣ ನಿಮ್ಮ ಬಳಿ ಹಣ ವಸೂಲಿ ಮಾಡುವುದಕ್ಕೆಂದೇ ಸುಖಾ ಸುಮ್ಮನೇ ಕಾರಿನ ಗಾಲಿಗೆ ಅಡ್ಡ ಬಂದು ಬಿದ್ದು ಹಣ ವಸೂಲಿ ಮಾಡುವ ಗ್ಯಾಂಗ್ ಆಕ್ಟೀವ್ ಆಗಿದೆ. ಇಲ್ಲೊಬ್ಬ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದ ಕಾರಿಗೆ ಅಡ್ಡಬಂದು ಬೀಳುತ್ತಾನೆ. ಇದನ್ನೇ ನೋಡುತ್ತಾ ಹೋಗುತ್ತಿದ್ದ ಇಬ್ಬರು ಬೈಕ್ ಸವಾರರು ಇದಕ್ಕೆ ಸಾಕ್ಷಿ ಆಗುತ್ತಾರೆ. ಮುಂದಾಗಿದ್ದೇ ಮಾರಿಹಬ್ಬ. ಹಣವಸೂಲಿ ಮಾಡಿಕೊಂಡು ಮೂವರೂ ಹಂಚಿಕೊಂಡು ಪರಾರಿ ಆಗುವುದು..
ಹೌದು, ಈ ದೃಶ್ಯವನ್ನು ಎಲ್ಲೋ ಸಿನಿಮಾದಲ್ಲಿ ನೋಡಿದ ಹಾಗಿದೆಯಲ್ಲಾ ಎಂದು ಎನಿಸಬಹುದು. ನೀವು ಕಾಶೀನಾಥ್ ಮತ್ತು ಜಗ್ಗೇಶ್ ಅವರ ಸಿನಿಮಾಗಳನ್ನು ನೋಡಿದ್ದರೆ ಖಂಡಿತಾ ಇಂತಹ ದೃಶ್ಯಗಳನ್ನು ನೋಡಿರುತ್ತೀರಿ. ಅದೇ ತರಹದ ಸಿಲ್ಲಿ ಐಡಿಯಾಗಳನ್ನು ಉಪಯೋಗಿಸಿ ಬೆಂಗಳೂರಿನಲ್ಲಿಯೂ ಕಾರಿಗೆ ಅಡ್ಡಬಂದು ಬೇಕಂತಲೇ ಬಿದ್ದು, ಅಪಘಾತ ಮಾಡಿದ್ದೀರಿ ಎಂದು ಹೇಳಿಕೊಂಡು ಹಣ ವಸೂಲಿ ಮಾಡುವುದು ಈ ಕಳ್ಳ-ಕಾಕರ ಉದ್ದೇಶವಾಗಿದೆ. ಇದೇ ತರಹದ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಇದೀಗ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಅದನ್ನು ಮಾಲೀಕರು ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.
ಈ ವೈರಲ್ ಆಗಿರುವ ವೀಡಿಯೋ ನೋಡಿದರೆ ಬೆಂಗಳೂರು ಕಾರಿನ ವಾಹನ ಚಾಲಕರಲ್ಲಿ ಆತಂಕ ಮೂಡುತ್ತದೆ. ಅಜಾಗರೂಕತೆಯಿಂದ ಅಪಘಾತ ಸಂಭವಿಸಬಾರದು ಎಂದು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವವರ ಮುಂದೆ ಉದ್ದೇಶಪೂರ್ವಕವಾಗಿ ಜನರು ಹಾರಿ ಅಪಘಾತವನ್ನುಂಟುಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅಂತಹದ್ದೇ ಒಂದು ಘಟನೆಯನ್ನು ನೇರವಾಗಿ ಅನುಭವಿಸಿದ ವ್ಯಕ್ತಿಯೊಬ್ಬರು ತಮ್ಮ ವಾಹನದ ಡ್ಯಾಶ್ ಕ್ಯಾಮ್ ದೃಶ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಮದುವೆ!
ಈ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಜನವರಿ ತಿಂಗಳಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ರಸ್ತೆಯಲ್ಲಿ ಸಾಮಾನ್ಯ ವೇಗದಲ್ಲಿ ಚಲಿಸುತ್ತಿದ್ದ ಕಾರಿನ ಮುಂದೆ ಒಬ್ಬ ವ್ಯಕ್ತಿ ಹಠಾತ್ತನೆ ಜಿಗಿಯುತ್ತಾನೆ. ಉದ್ದೇಶಪೂರ್ವಕವಾಗಿ ಅಪಘಾತವಾಗಿದೆ ಎಂದು ಬಿಂಬಿಸಿ ಗಾಯಗೊಂಡಿದ್ದೇವೆಂದು ಹಣ ವಸೂಲಿ ಮಾಡುವುದು ಇವರ ಕಾಯಕವಾಗಿದೆ. ನಂತರ, ಕಾರು ಚಾಲಕರಿಂದ ಪರಿಹಾರವಾಗಿ ಹಣ ಪಡೆಯುವುದು ಇವರ ಉದ್ದೇಶವಾಗಿದೆ. ಕಾರಿನ ಮುಂದೆ ಹಾರಿದ ಯುವಕ ಚಾಲಕನ ಕಡೆ ಬೀಳುತ್ತಾನೆ. ಇದೇ ವೇಳೆ ಕಾರಿನ ವೇಗದಲ್ಲಿಯೇ ಹೋಗುತ್ತಿದ್ದ ಬೈಕ್ ಸವಾರರು ಇಬ್ಬರು ಕಾರಿನ ಚಾಲಕನನ್ನು ಪ್ರಶ್ನಿಸುತ್ತಾರೆ.
ನೀವು ಯುವಕನಿಗೆ ಕಾರಿನಿಂದ ಅಪಘಾತವನ್ನು ಮಾಡಿದ್ದೀರಿ ಎಂಬ ಸನ್ನಿವೇಶವನ್ನು ಸೃಷ್ಟಿಸಿ ಕಾರು ಚಾಲಕನ ವಿರುದ್ಧ ಮಾತನಾಡಲು ಸಾಕ್ಷಿಗಳಾಗುತ್ತಾರೆ. ಚಾಲಕನನ್ನು ಬೆದರಿಸಿ ಹಣ ಪಡೆಯುವುದು ಇವರ ಉದ್ದೇಶ. ಆದರೆ ಕಾರಿನಲ್ಲಿದ್ದ ಡ್ಯಾಶ್ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ವಾಹನ ಚಾಲಕರೆಲ್ಲರೂ ಡ್ಯಾಶ್ ಕ್ಯಾಮ್ ಅಳವಡಿಸಿಕೊಳ್ಳಬೇಕು ಎಂದು ಸೇಫ್ ಕಾರ್ಸ್ ಇಂಡಿಯಾ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಮನೆಯ ಬಾಗಿಲು ತೆಗೆದರೆ ಗಂಡನ ಬದಲು ಹುಲಿ ಪ್ರತ್ಯಕ್ಷ; ಪರಮೇಶ್ವರನ ಪಾದ ಸೇರಿದನಾ ಪತಿರಾಯ!
ವಿಡಿಯೋ ಪೋಸ್ಟ್ ಆದ ನಂತರ ಬೆಂಗಳೂರಿನಲ್ಲಿ ವಾಹನ ಚಾಲನೆಯ ಕಷ್ಟಗಳನ್ನು ಹಲವರು ಹಂಚಿಕೊಂಡಿದ್ದಾರೆ. ಘಟನೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಇದೆ. ವಂಚನೆಗಳಿಗೆ ಬಲಿಯಾಗದಂತೆ ಕಾರುಗಳಲ್ಲಿ ಡ್ಯಾಶ್ ಕ್ಯಾಮರಾ ಅಳವಡಿಸಲು ಎಲ್ಲರೂ ಗಮನ ಹರಿಸಬೇಕೆಂದು ಹಲವರು ಹೇಳಿದ್ದಾರೆ. ಇದೇ ರೀತಿಯ ಅನುಭವಗಳನ್ನು ಕೆಲವರು ಹಂಚಿಕೊಂಡಿದ್ದಾರೆ. ಇವರನ್ನು ತಪ್ಪಿಸಿಕೊಳ್ಳಲು ಬಿಡದೆ ಪೊಲೀಸರಿಗೆ ಕರೆ ಮಾಡಬೇಕಿತ್ತು ಎಂದು ಕೆಲವು ಕಾಮೆಂಟ್‌ಗಳಿವೆ.
