ಬನಶಂಕರಿಯಲ್ಲಿ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಯುವಕ ಅಕ್ಷಯ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದುರಂತದಿಂದಾಗಿ ತೀವ್ರ ದುಃಖದಲ್ಲಿರುವ ಕುಟುಂಬಕ್ಕೆ ಇದು ಸಾಲು ಸಾಲು ದುರಂತಗಳಲ್ಲಿ ಮತ್ತೊಂದು.

ಬೆಂಗಳೂರು ನಗರದ ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ನಡೆದ ಘಟನೆ ಒಂದು ಕುಟುಂಬದ ಬದುಕಿನಲ್ಲಿ ತೀವ್ರವಾದ ದುಃಖಕ್ಕೆ ತಳ್ಳಿದೆ. ಗಾಳಿಗೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ದೋಬಿ ಘಾಟ್ ಬೃಂದಾವನ ನಗರ ನಿವಾಸಿ ಯುವಕ ಅಕ್ಷಯ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 1 ಗಂಟೆಗೆ ಕೊನೆಯುಸಿರೆಳೆದರು.

ಅಕ್ಷಯ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮರದ ಕೊಂಬೆ ತಲೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ತಕ್ಷಣ ಶ್ರೀನಿವಾಸನಗರದ ಸಮೀಪದ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಜಯನಗರದ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನಾಲ್ಕು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದರೂ, ಅವರು ಚಿಕಿತ್ಸೆಗ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಸಾಲುಸಾಲು ದುರಂತಕ್ಕೆ ಸಿಲುಕಿದ ಕುಟುಂಬ

ಅಕ್ಷಯ್‌ರ ಕುಟುಂಬವನ್ನು ದುರಂತಗಳು ಹಿಂಬಾಲಿಸುತ್ತಲೇ ಬಂದಿವೆ. ಅಕ್ಷಯ್‌ ತಾಯಿಯನ್ನು ಸೇರಿಸಿ ನಾಲ್ವರು ಮಕ್ಕಳನ್ನು ಹೊಂದಿದ್ದ ಅಜ್ಜಿ-ತಾತ, ಈಗ ಮೂವರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮೊದಲ ಮಗ 25 ವರ್ಷಗಳ ಹಿಂದೆ ವಿದ್ಯುತ್ ಶಾಕ್‌ಗೆ ಬಲಿಯಾದರೆ, ಮತ್ತೊಬ್ಬ ಮಗ ರಸ್ತೆ ಅಪಘಾತದಲ್ಲಿ ಮೃತರಾದರು. ಅಕ್ಷಯ್‌ ತಾಯಿ ಕಳೆದ ವರ್ಷ ಕ್ಯಾನ್ಸರ್‌ಗೆ ಬಲಿಯಾದರು. ಇತ್ತೀಚಿನ ದಿನಗಳಲ್ಲಿ ಅಜ್ಜಿ-ತಾತನೊಂದಿಗೆ ಅಡುಗೆ ಮಾಡುತ್ತಾ ಅವರನ್ನು ನೋಡಿಕೊಳ್ಳುತ್ತಿದ್ದ ಅಕ್ಷಯ್‌ ಅವರೆ ಈಗ ಉಳಿದಿಲ್ಲ.

ತಂದೆ ಡಯಾಲಿಸಿಸ್ ಪೇಷೆಂಟ್

ಅಕ್ಷಯ್‌ನ ತಂದೆ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಮಗನ ದುರ್ಘಟನೆ ಬಗ್ಗೆ ಅವರಿಗೆ ಈವರೆಗೆ ಮಾಹಿತಿ ನೀಡಲಾಗಿಲ್ಲ. ಇನ್ನು ಮಗನ ಮರಣದ ಸುದ್ದಿ ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಆತಂಕ ಕುಟುಂಬಸ್ಥರಲ್ಲಿ ತೀವ್ರವಾಗಿದೆ. ಅಕ್ಷಯ್‌ರ ಸಾವಿನ ನಂತರ ಆಸ್ಪತ್ರೆ ಮುಂದೆ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಸ್ಥರ ಕಣ್ಣೀರು ತಡೆಹಿಡಿಯಲಾಗುತ್ತಿಲ್ಲ. ಬಿಬಿಎಂಪಿ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎನ್ನುವ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರು ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಿಬಿಎಂಪಿ ಅರಣ್ಯ ಸಂರಕ್ಷಣಾಧಿಕಾರಿ ಡಿಸಿಎಫ್ ಸ್ವಾಮಿ ಆಸ್ಪತ್ರೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಆಸ್ಪತ್ರೆ ವೆಚ್ಚ 5.22 ಲಕ್ಷ ರೂಪಾಯಿಗಳಾಗಿದ್ದು, ಈಗಾಗಲೇ 4.06 ಲಕ್ಷ ಹಣವನ್ನು ಕುಟುಂಬವೇ ಪಾವತಿಸಿದೆ. ಮರದ ಕೊಂಬೆ ಬಿದ್ದು ಸಾವನ್ನಪ್ಪಿದ ಅಕ್ಷಯ್ ಕುಟುಂಬಕ್ಕೆ ಬಿಬಿಎಂಪಿ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ.

ಫಲಿಸದ ತಾತ-ಅಜ್ಜಿಯ ಪೂಜೆ, ಹೋಮ

ಅಕ್ಷಯ್ ಉಳಿಯಲೆಂದು ತಾತ-ಅಜ್ಜಿಯವರು ದೇವಾಲಯದಲ್ಲಿ ಹೋಮ-ಹವನ ಮಾಡಿದ್ದರು. ಆದರೆ, ಅವರ ಎಲ್ಲಾ ಪ್ರಯತ್ನಗಳು ವಿಫಲವಾಗಿ, ಕುಟುಂಬ ತಮ್ಮ ಬದುಕಿನ ಆಧಾರದ ಸ್ಥಂಭವನ್ನೇ ಕಳೆದುಕೊಂಡಿದೆ. ವೈದ್ಯರು ಮಧ್ಯಾಹ್ನ 1 ಗಂಟೆಗೆ ಅಕ್ಷಯ್‌ ಸಾವನ್ನು ದೃಢಪಡಿಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಮೈಸೂರುರೋಡ್ ಬಳಿಯ ಸಮಾಧಿ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅಕ್ಷಯ್‌ ತಾತ ಮುನಿಸ್ವಾಮಿ ತಿಳಿಸಿದ್ದಾರೆ.