*ಅಭಿಯಾನಕ್ಕಾಗಿ ಬಿಬಿಎಂಪಿ ಕೇಂದ್ರ ಕಚೇರಿ ಮುಂದಿರುವ ಎನ್‌ಆರ್‌ ಚೌಕ ‘ಆಜಾದಿ ಕಾ ಅಮೃತ್‌ ಮಹೋತ್ಸವ ವೃತ್ತ’ವೆಂದು ಆಯ್ಕೆ*ಸ್ವಚ್ಛತೆ, ತ್ಯಾಜ್ಯ ವಿಂಗಡಣೆ-ಸಂಸ್ಕರಣೆ ಬಗ್ಗೆ ಚಿತ್ರಗಳ ಅನಾವರಣ*ಮಾರ್ಚ್ ಮೊದಲ ವಾರದಿಂದ 45 ದಿನ ಪ್ರದರ್ಶನ: ಬಿಬಿಎಂಪಿ 

ಬೆಂಗಳೂರು (ಫೆ. 28): ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಈ ಬಾರಿಯೂ ಉತ್ತಮ ಪ್ರಶಸ್ತಿ ಗೆಲ್ಲುವುದಕ್ಕೆ ಬಿಬಿಎಂಪಿ ಸಾಕಷ್ಟುಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದರ ಭಾಗವಾಗಿ ಬಿಬಿಎಂಪಿ ಕೇಂದ್ರ ಕಚೇರಿ ಇರುವ ‘ನರಸಿಂಹರಾಜ ಚೌಕ’ವನ್ನು (ಎನ್‌ಆರ್‌ ಚೌಕ) ಅಜಾದಿ ಕಾ ಅಮೃತ್‌ ಮಹೋತ್ಸವ ವೃತ್ತ ಎಂದು ಆಯ್ಕೆ ಮಾಡಿಕೊಂಡಿದೆ.ಭಾರತ ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಸ್ಮರಣಾರ್ಥ ಈ ಬಾರಿ ಸ್ವಚ್ಛ ಸರ್ವೇಕ್ಷಣದಲ್ಲಿ ಭಾಗವಹಿಸುವ ನಗರಗಳು ಒಂದೊಂದು ವೃತ್ತಗಳನ್ನು ಅಜಾದಿ ಕಾ ಅಮೃತ್‌ ಮಹೋತ್ಸವ ವೃತ್ತ ಎಂದು ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ಪಾಲಿಕೆ ತನ್ನ ಕೇಂದ್ರ ಕಚೇರಿ ಹಾಗೂ ‘ಕೆಂಪೇಗೌಡ ಗೋಪುರ’ ಇರುವ ಎನ್‌ಆರ್‌ ಚೌಕವನ್ನು ಆಯ್ಕೆ ಮಾಡಿಕೊಂಡಿದೆ.

ಚಿತ್ರಗಳ ಮೂಲಕ ಅನಾವರಣ: ಸ್ವಚ್ಛ ಬೆಂಗಳೂರು ಅನಾವರಣ: ವೃತ್ತದ ಕೆಂಪೇಗೌಡ ಗೋಪುರದ ಆವರಣದಲ್ಲಿ ನಗರದ ಸ್ವಚ್ಛತೆ, ತ್ಯಾಜ್ಯ ವಿಂಗಡಣೆ- ಸಂಸ್ಕರಣೆ, ಸಾಗಾಣಿಕೆಗೆ ಬಿಬಿಎಂಪಿ ಹಾಗೂ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳನ್ನು ಚಿತ್ರಗಳ ಮೂಲಕ ಅನಾವರಣ ಮಾಡಲಾಗುತ್ತಿದೆ. ಮಾಚ್‌ರ್‍ ಮೊದಲ ವಾರದಿಂದ ಸುಮಾರು 45 ದಿನಗಳ ವರೆಗೆ ಪ್ರದರ್ಶನ ಇರಲಿದೆ. ಎನ್‌ಆರ್‌ ಚೌಕವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru: ರಸ್ತೆ ಗುಂಡಿ ಮುಚ್ಚಲು ಸೇನೆ ಕರೆಸಲಾ: ಬಿಬಿಎಂಪಿಗೆ ಹೈಕೋರ್ಟ್‌ ಖಡಕ್‌ ಎಚ್ಚರಿಕೆ

ಆರ್‌ಆರ್‌ಆರ್‌ ಪರಿಕಲ್ಪನೆ: ಬಿಬಿಎಂಪಿ ಈ ಬಾರಿ ಸ್ವಚ್ಛ ಸರ್ವೇಕ್ಷಣಾದಲ್ಲಿ ರೀಸೈಕಲ್‌, ರೆಡ್ಯೂಸ್‌, ರೀಯೂಸ್‌ (ಟ್ರಿಪಲ್‌ ಆರ್‌) ಪರಿಕಲ್ಪನೆಯೊಂದಿಗೆ ಸರ್ವೇಕ್ಷಣಾದಲ್ಲಿ ಭಾಗವಹಿಸುವುದಕ್ಕೆ ಮುಂದಾಗಿದೆ. ಇದರ ಉದ್ದೇಶ ಜನರಿಗೆ ತ್ಯಾಜ್ಯ ಉತ್ಪತ್ತಿ ಕಡಿತಗೊಳಿಸುವುದು, ಮರು ಬಳಕೆ ಹಾಗೂ ಬಳಸಿದ ವಸ್ತುವನ್ನು ಸಂಸ್ಕರಿಸಿ ಮರು ಬಳಕೆಗೆ ಸಿದ್ಧಪಡಿಸುವ ಬಗ್ಗೆ ಅರಿವು ಮೂಡಿಸುವುದಾಗಿದೆ.

ಉತ್ತಮ ಸಾಧನೆಗೆ ಪ್ರಯತ್ನ: ಕಳೆದ 2021ರ ಸ್ವಚ್ಛ ಸರ್ವೇಕ್ಷಣಾದಲ್ಲಿ ಬೆಂಗಳೂರು ‘ಅತಿ ವೇಗದ ನಗರ’ ಎಂಬ ಹೆಗ್ಗಳಿಕೆ ಪಾತ್ರವಾಗುವುದರೊಂದಿಗೆ ‘ಶೌಚಮುಕ್ತ ಬೆಂಗಳೂರು’ ಎಂಬ ಹಿರಿಮೆಗೂ ಪಾತ್ರವಾಗಿತ್ತು. 10 ಲಕ್ಷಕ್ಕಿಂತ ಹೆಚ್ಚಿನ ಜನ ಸಂಖ್ಯೆಯುಳ್ಳ 48 ನಗರಗಳ ಪಟ್ಟಿಯಲ್ಲಿ 28ನೇ ಸ್ಥಾನ ಗಳಿಸಿತ್ತು. ಆದರೆ, ಕಸ ಮುಕ್ತ ನಗರ ವಿಭಾಗದಲ್ಲಿ ಶೂನ್ಯ ಸಾಧನೆ ಮಾಡಿತ್ತು. ಹಾಗಾಗಿ, ಈ ಬಾರಿ ಕಸ ವಿಲೇವಾರಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ರಸ್ತೆ ಹಾಗೂ ಬ್ಲಾಕ್‌ ಸ್ಪಾಟ್‌ಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ:BBMP ಚುನಾವಣೆ ಅರ್ಜಿ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಸಮ್ಮತಿ

ಇನ್ನು ಸರ್ವೇಕ್ಷಣಾದಲ್ಲಿ ಸಾರ್ವಜನಿಕರ ಅಭಿಪ್ರಾಯ ಹಾಗೂ ಭಾಗವಹಿಸುವಿಕೆ ಅತ್ಯಂತ ಮಹತ್ವದಾಗಿದ್ದು, ಸುಮಾರು 10 ಲಕ್ಷ ಜನರ ಅಭಿಪ್ರಾಯ ಸಂಗ್ರಹಣೆಯ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದ್ದು, ಆರೋಗ್ಯ ವಿಭಾಗದ ಅಧಿಕಾರಿ-ಸಿಬ್ಬಂದಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಈವರೆಗೆ 1 ಲಕ್ಷ ಮಂದಿ ಅಭಿಪ್ರಾಯ ತಿಳಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣಾದಲ್ಲಿ ಉತ್ತಮ ಸಾಧನೆಗೆ ಬಿಬಿಎಂಪಿ ಸಾಕಷ್ಟುಪ್ರಯತ್ನ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಪಾಲಿಕೆ ಕಚೇರಿ ಇರುವ ಎನ್‌ಆರ್‌ ಚೌಕವನ್ನು ಅಜಾದಿ ಕಾ ಅಮೃತ್‌ ಮಹೋತ್ಸವ ವೃತ್ತ ಎಂದು ಆಯ್ಕೆ ಮಾಡಿಕೊಂಡಿದ್ದೇವೆ. -ಡಾ. ಹರೀಶ್‌ ಕುಮಾರ್‌, ವಿಶೇಷ ಆಯುಕ್ತರು, ಘನತ್ಯಾಜ್ಯ.

ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ ವಾರ್ತೆ