ಒಡಿಶಾ ರೈಲು ದುರಂತದಲ್ಲಿ ಬೆಂಗಳೂರಿನ ಇಬ್ಬರು ಸಾವು
ರಾಜ್ಯದಿಂದ ತೆರಳಿರುವ ಪ್ರಯಾಣಿಕರ ಮಾಹಿತಿಯನ್ನು ನೈಋುತ್ಯ ರೈಲ್ವೆ ಅಧಿಕಾರಿಗಳು ಪಡೆದಿದ್ದಾರೆ. ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ಮುಂಗಡ ಕಾಯ್ದಿರಿಸಿದ್ದ 994 ಪ್ರಯಾಣಿಕರು ಹಾಗೂ ಸುಮಾರು 300 ಮುಂಗಡ ಕಾಯ್ದಿರಿಸದ ಪ್ರಯಾಣಿಕರು ತೆರಳಿದ್ದರು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಬೆಂಗಳೂರು(ಜೂ.03): ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇವರು ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣದಿಂದ ತೆರಳಿದ್ದ ಯಶವಂತಪುರ-ಹೌರ ರೈಲಿನಲ್ಲಿ ಪ್ರಯಾಣಿಸಿದ್ದರು. ತಡರಾತ್ರಿ ಬಳಿಕವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತರು, ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಯಶವಂತಪುರ-ಹೌರ ರೈಲಿನ ಎರಡು ಜನರಲ್ ಬೋಗಿಗಳು ಹಾಗೂ ಬ್ರೇಕ್ ವ್ಯಾನ್ ಹಳಿ ತಪ್ಪಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಸಾವು ನೋವಿನ ಬಗ್ಗೆ ತಡರಾತ್ರಿವರೆಗೆ ವರದಿಯಾಗುತ್ತಲೇ ಇತ್ತು. ರಾಜ್ಯದಿಂದ ತೆರಳಿರುವ ಪ್ರಯಾಣಿಕರ ಮಾಹಿತಿಯನ್ನು ನೈಋುತ್ಯ ರೈಲ್ವೆ ಅಧಿಕಾರಿಗಳು ಪಡೆದಿದ್ದಾರೆ. ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ಮುಂಗಡ ಕಾಯ್ದಿರಿಸಿದ್ದ 994 ಪ್ರಯಾಣಿಕರು ಹಾಗೂ ಸುಮಾರು 300 ಮುಂಗಡ ಕಾಯ್ದಿರಿಸದ ಪ್ರಯಾಣಿಕರು ತೆರಳಿದ್ದರು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಯಶವಂತಪುರ, ಕೊರೊಮಂಡಲ್ ರೈಲು ಅಪಘಾತ, 50ಕ್ಕೂ ಹೆಚ್ಚು ಸಾವು, 10 ಲಕ್ಷ ರೂ ಪರಿಹಾರ ಘೋಷಣೆ!
ಅಪಘಾತದಲ್ಲಿ ಶಾಲಿಮಾರ್-ಚೆನ್ನೈ ನಡುವಿನ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು, ಗೂಡ್ಸ್ ರೈಲಿನ ನಡುವೆ ಅಪಘಾತದಲ್ಲಿ ಹೆಚ್ಚಿನ ಜನ ಪ್ರಾಣ ಕಳೆದುಕೊಂಡಿದ್ದಾರೆ.
ರೈಲು ರದ್ದು: ಪರದಾಟ
ಇನ್ನು ಅಪಘಾತದ ಬೆನ್ನಲ್ಲೆ ಬೆಂಗಳೂರು ಎಸ್‌ಎಂವಿಟಿಯಿಂದ ತೆರಳಬೇಕಿದ್ದ ಬೆಂಗಳೂರು-ಗುವಾಹಟಿ ರೈಲ್ವೇ ಸಂಚಾರ ರದ್ದಾಯಿತು. ಇದರಿಂದ ಬೆಂಗಳೂರಿಂದ ಒಡಿಶಾಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು. ರೈಲ್ವೇ ನಿಲ್ದಾಣದಲ್ಲಿಯೇ ಹಲವರು ರಾತ್ರಿ ಕಳೆದಿದ್ದಾರೆ.