ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತಿರುವುದರಿಂದ ಪೊಲೀಸರು ಮತ್ತು ಹೈವೇ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದಾರೆ.

ಬೆಂಗಳೂರು: ಫೆಬ್ರವರಿ 13ರಂದು ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸೇರಿದಂತೆ ಒಂದೇ ಕಾರಿನಲ್ಲಿದ್ದ ಆರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯ ಎಂ.ಸತ್ಯವಾರ ಬಳಿ ನಡೆದಿತ್ತು. ಇದೀಗ ಈ ಘಟನೆ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೈವೇ ಅಥಾರಿಟಿ ಮತ್ತು ಪೊಲೀಸರು ಜಂಟಿ ಸರ್ವೇ ನಡೆಸಿದ್ದು, ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಸಿಸಿಟಿವಿ ಅಳವಡಿಕೆಗೆ ಸೂಚನೆ

ಎಎಸ್ಪಿ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ಅಧಿಕಾರಿಗಳಿಂದ ಜಾಯಿಂಟ್ ಸರ್ವೆ ನಡೆಸಿ ಪರಿಶೀಲನೆ ನಡೆದಿದ್ದು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. PWD, ನ್ಯಾಷನಲ್ ಹೈವೆ ಅಥಾರಿಟಿ,‌ ಪೋಲೀಸ್ ಅಧಿಕಾರಿಗಳಿಂದ ಸರ್ವೆ ನಡೆದಿದ್ದು, ಘಟನೆಗೆ ಅಧಿಕಾರಿಗಳು ಮೂಲ‌ ಕಾರಣ ಹುಡುಕುತ್ತಿದ್ದಾರೆ.

ಈ ವರ್ಷ ‌ಇದೇ‌ ಸ್ಪಾಟ್ ನಲ್ಲಿ ಒಟ್ಟು 8 ಸಾವುಗಳಾಗಿವೆ. ನಿನ್ನೆ 7 ಜನ ಮೃತಪಟ್ಟಿದ್ದರು. ಈ ಮೊದಲು ಒಂದು ಸಾವಾಗಿತ್ತು. ಹೀಗಾಗಿ ರಸ್ತೆಯಲ್ಲಿ ತಾಂತ್ರಿಕ‌ ಸಮಸ್ಯೆ ಇದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಸಿಸಿ ಟಿವಿ ಅಳವಡಿಸುವಂತೆ ನ್ಯಾಷನಲ್ ಹೈವೆ ಅಥಾರಿಟಿಗೆ ಸೂಚನೆ ನೀಡಲಾಗಿದೆ.

ಘಟನೆ ಹಿನ್ನೆಲೆ:

ಶುಕ್ರವಾರ ಬೆಳಗಿನ ಜಾವ 4:30ರ ಸುಮಾರಿಗೆ ಎಕ್ಸ್‌ಯುವಿ ಕಾರು- ಬೈಕ್- ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಬೈಕ್ ಸವಾರ ದೇವನಾಯಕನಹಳ್ಳಿಯ ಗಗನ್(26), ಕಾರಿನಲ್ಲಿದ್ದ ಬೆಂಗಳೂರಿನ ಕೊತ್ತನೂರು ನಿವಾಸಿ, ಆರ್‌.ವಿ. ಕಾಲೇಜು ವಿದ್ಯಾರ್ಥಿ ಅಶ್ವಿನ್ ನಾಯರ್(17), ಎಚ್‌ವಿಆರ್ ಲೇಔಟ್ ನಿವಾಸಿ, ಸಿಎಂಆರ್ ಶಾಲೆ ವಿದ್ಯಾರ್ಥಿಗಳಾದ ಅರ್ಹನ್ ಶರೀಫ್(17), ಅಯನ್ ಅಲಿ(17), ಭರತ್(18), ಈತನ್ ಜಾರ್ಜ್(17) ಫರ್ಹಾನ್(17) ಮೃತಪಟ್ಟಿದ್ದರು. ಅಪಘಾತದ ತೀವ್ರತೆಗೆ ಎಷ್ಟಿತ್ತೆಂದು ಫೋಟೋಗಳೇ ಸಾಕ್ಷಿ ಹೇಳುತ್ತಿದ್ದವು. ಇದೇ ಸ್ಥಳದಲ್ಲಿ ಪದೇ ಪದೇ ಅಪಘಾತ ಆಗುತ್ತಿರುವ ಕಾರಣಕ್ಕೆ ಗ್ರಾಮಸ್ಥರು ಶಾಂತಿ ಹೋಮ ಕೂಡ ನಡೆಸಿದ್ದರು. ಆದರೆ ನಿನ್ನೆ ಶಾಂತಿ ಹೋಮ ಫಲಿಸಲಿಲ್ಲ. ಇಡೀ ರಾಜ್ಯಕ್ಕೆ ಬರಸಿಡಿಲು ಬಡಿದಂತ ಸುದ್ದಿ ಸಿಕ್ಕಿತು.