ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಶಾಲೆಯ ಇಬ್ಬರು ಸಿಬ್ಬಂದಿಗೆ ಎಚ್1ಎನ್1 ಸೋಂಕು ದೃಢಪಟ್ಟಿದೆ. ನೂರಾರು ಮಕ್ಕಳಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಲಾಗಿದ್ದು, ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ನಗರದ ರಿಚ್ಮಂಡ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಶಾಲೆಯ ಇಬ್ಬರು ಬೋಧಕ ಸಿಬ್ಬಂದಿಗೆ ಎಚ್1 ಎನ್1 ಸೋಂಕು ದೃಢಪಟ್ಟಿದ್ದು, ನೂರಾರು ಮಕ್ಕಳಿಗೂ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಾಲೆಗೆ ಎರಡು ದಿನ ರಜೆ ಘೋಷಿಸಲಾಗಿದೆ.
ಕೆಲ ದಿನಗಳ ಹಿಂದೆ ಶಾಲೆಯ ಕೆಲ ಮಕ್ಕಳು ಹಾಗೂ ಸಿಬ್ಬಂದಿಯಲ್ಲಿ ಕೆಮ್ಮು, ನೆಗಡಿ, ಸುಸ್ತು, ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಇಬ್ಬರು ಸಿಬ್ಬಂದಿಗೆ ಎಚ್1 ಎನ್1 ಸೋಂಕು ದೃಢವಾಗಿದೆ. ನಂತರ ಶಾಲೆಯ ಹಲವಾರು ಮಕ್ಕಳಿಗೂ ಇದೇ ರೀತಿ ಜ್ವರ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಆ.12ರಂದು ಶಾಲೆ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಜೇಶನ್ ಮಾಡಿಸಲು ರಜೆ ಘೋಷಿಸಿ ಆ.13ರಂದು ತರಗತಿ ಆರಂಭಿಸಲಾಗಿತ್ತು. 2,500 ಮಕ್ಕಳಿರುವ ಶಾಲೆಯಲ್ಲಿ ಜ್ವರದ ಲಕ್ಷಣಗಳಿದೆ ಎಂದು ಆ.13ರಂದು 500 ಮಕ್ಕಳು, 21 ಸಿಬ್ಬಂದಿ ಗೈರಾಗಿದ್ದರು. 137 ಮಕ್ಕಳು ಶಾಲೆಯ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದರು. 15 ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, 19 ಮಕ್ಕಳನ್ನು ಅಬ್ಸರ್ವೇಷನ್‌ನಲ್ಲಿ ಇರಿಸಲಾಗಿತ್ತು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಆ.14ರಿಂದ ಆ.18ರ ವರೆಗೂ ಶಾಲೆಗೆ ರಜೆ ಘೋಷಿಸಲಾಗಿದೆ. ಆದರೆ, ಆನ್‌ಲೈನ್ ಕ್ಲಾಸ್‌ಗಳು ನಡೆದಿವೆ.
ಪಾಲಿಕೆಯಿಂದ ಪರಿಶೀಲನೆ
ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶಾಲೆಯ ಆಡಳಿತ ಮಂಡಳಿಯವರು ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಿದ್ದಾರೆ. ಸಿಬ್ಬಂದಿ ಸೇರಿ ಯಾರಿಗೂ ಗಂಭೀರ ಸಮಸ್ಯೆಯಾಗಿಲ್ಲ. ಆದರೂ, ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಶಾಲೆಗೆ ಗೈಡ್‌ಲೈನ್ಸ್ ನೀಡಲಾಗಿದೆ ಎಂದು ಉತ್ತರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಫುಟ್‌ಪಾತ್ ವ್ಯಾಪಾರಿಗಳಿಂದ ಆರೋಗ್ಯ ಸಮಸ್ಯೆ?
ಶಾಲೆಯ ಸುತ್ತ ಪುಟ್‌ಪಾತ್‌ಗಳನ್ನು ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದು, ಗಲೀಜು ವಾತಾವರಣ ನಿರ್ಮಾಣವಾಗಿದೆ. ಎಳನೀರು. ಕಬಾಬ್, ಜಂಕ್ ಫುಡ್ ಸೇರಿ ವಿವಿಧ ಮಾದರಿಯ ತಿನಿಸುಗಳನ್ನು ಫುಟ್‌ಪಾತ್ ಮೇಲಿಟ್ಟು ಮಾರಲಾಗುತ್ತಿದೆ. ಆದರೆ, ನೈರ್ಮಲ್ಯ ಕಾಪಾಡುತ್ತಿಲ್ಲ. ಎಲ್ಲೆಂದರಲ್ಲೇ ತ್ಯಾಜ್ಯ ಬಿಸಾಡಲಾಗುತ್ತಿದೆ. ಕಲುಷಿತ ವಾತಾವರಣದಿಂದ ಸೋಂಕಿನ ಸಮಸ್ಯೆಗಳು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳ ಎದುರು ಶಾಲೆ ಆಡಳಿತ ಮಂಡಳಿ ಅಳಲು ತೋಡಿಕೊಂಡಿದೆ.
ಕೂಡಲೇ ಅತಿಕ್ರಮಣ ಮಾಡಿಕೊಂಡು ಮಾಡುತ್ತಿರುವ ವ್ಯಾಪಾರ ತಡೆಗಟ್ಟಬೇಕು. ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಾಲೆಯ ಆಡಳಿತ ಮಂಡಳಿ ಅಧಿಕಾರಿಗಳಲ್ಲಿ ಕೋರಿದೆ. ಶಾಲೆ ಆಡಳಿತ ಮಂಡಳಿಯ ಕೋರಿಕೆಯಂತೆ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವು ಮಾಡಿ ನೈರ್ಮಲ್ಯದ ವಾತಾವರಣ ನಿರ್ಮಾಣಕ್ಕೆ ಕೆಲಸ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.


