ಬೆಳಗಾವಿ ಜಿಲ್ಲೆಯ ಇಟಗಿ ಗ್ರಾಮಕ್ಕೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್‌ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಆಕ್ರೋಶ, ಧಿಕ್ಕಾರ ಕೂಗಿದರು.

ಬೆಳಗಾವಿ (ಅ.25): ಚುನಾವಣೆ ವೇಳೆ ಗ್ರಾಮಸ್ಥರಿಗೆ ಅಭಿವೃದ್ಧಿ ಭರವಸೆ ನೀಡಿ ಗೆದ್ದ ಬಳಿಕ ಅತ್ತ ತಲೆಯೂ ಹಾಕದ, ಅಭಿವೃದ್ಧಿ ಕೆಲಸಗಳು ಮಾಡದ ಜನಪ್ರತಿನಿಧಿಗಳು ಮತ್ತೆ ಗ್ರಾಮಕ್ಕೆ ಹೋದಾಗ ಏನಾಗುತ್ತದೆ ಎಂಬುದಕ್ಕೆ ಬೆಳಗಾವಿಯ ಇಟಗಿಯಲ್ಲಿ ನಡೆದಿರುವ ಈ ಘಟನೆಯೇ ತಾಜಾ ನಿದರ್ಶನವಾಗಿದೆ.

ಬಿಜೆಪಿ ಶಾಸಕನಿಗೆ ಬೆವರಿಳಿಸಿದ ಇಟಗಿ ಗ್ರಾಮಸ್ಥರು

ಕಾಮಗಾರಿ ವೀಕ್ಷಣೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮಕ್ಕೆ ಬಂದಿದ್ದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್‌ಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಆಕ್ರೋಶವೂ ನ್ಯಾಯಯುತವಾಗಿದೆ ಏಕೆಂದರೆ ಈ ಹಿಂದೆ ಗ್ರಾಮಕ್ಕೆ ರಸ್ತೆ ಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾಗ ಸೌಜನ್ಯಕ್ಕೂ ಗ್ರಾಮಸ್ಥರ ಬಳಿ ಬಂದು ಸಮಸ್ಯೆ ಕೇಳಿರಲಿಲ್ಲ, ಈಗ ಕಾಮಗಾರಿ ವೀಕ್ಷಣೆಗೇಕೆ ಬಂದಿದ್ದೀರಿ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಟವಲ್‌ನಿಂದ ಬೆವರು ಒರೆಸಿಕೊಂಡ ಶಾಸಕ

ಕಾಮಗಾರಿ ವೀಕ್ಷಣೆಗೆ ಗ್ರಾಮಕ್ಕೆ ಹೋದಾಗ ಇಂಥದ್ದೊಂದು ಘಟನೆ ನಡೆಯಲಿದೆ ಎಂಬ ನಿರೀಕ್ಷೆಯೂ ಮಾಡದಿದ್ದ ಶಾಸಕನಿಗೆ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಬೆವರುವಂತಾಯ್ತು. ಈ ಹಿಂದೆ ನಾವು ಗ್ರಾಮಕ್ಕೆ ರಸ್ತೆ ಬೇಕು ಅಂತಾ ಪ್ರತಿಭಟನೆ ನಡೆಸಿದ್ದೆವು. ಆಗ ಏಕೆ ಬರಲಿಲ್ಲ? ಬರೀ ಸುಳ್ಳು ಭರವಸೆ ಕೊಡ್ತೀರಾ? ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕರ ಬೆಂಬಲಿಗರಿಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಪಟ್ಟು ಬಿಡದ ಗ್ರಾಮಸ್ಥರು ಶಾಸಕರ ಕಾರು ಅಡ್ಡಗಟ್ಟಿ ಧಿಕ್ಕಾರ ಕೂಗಿದರು. ಈ ಬೆಳವಣಿಗೆಯಿಂದಾಗಿ, ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದ ಶಾಸಕರು ಟವೆಲ್‌ನಿಂದ ಹಣೆಮೇಲೆ ಇಳಿದ ಬೆವರು ಒರೆಸಿಕೊಂಡರು.

ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ. ಚುನಾವಣೆ ಭರವಸೆ ಕೊಟ್ಟು ಮತ ಪಡೆದು ಗೆದ್ದ ಬಳಿಕ ಇತ್ತ ತಲೆಹಾಕಿಲ್ಲ. ಗ್ರಾಮಸ್ಥರು ಸಮಸ್ಯೆ ಕೇಳದೆ ಈಗ ತಮಗೆ ಲಾಭದಾಯಕವೆನಿಸುವ ಕಾಮಗಾರಿ ವೀಕ್ಷಣೆಗೆ ಬಂದಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.