ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕ್ಕೇರಿರುವ ನಡುವೆಯೇ ಮೇಯರ್‌, ಉಪಮೇಯರ್‌ ಚುನಾವಣೆ ಬಂದಿದೆ. ಇದರಿಂದಾಗಿ ಬೆಳಗಾವಿ ಪಾಲಿಕೆಯತ್ತ ಎಲ್ಲರ ಚಿತ್ತ ಮೂಡಿಸಿದೆ. 

ಶ್ರೀಶೈಲ ಮಠದ

ಬೆಳಗಾವಿ(ಜ.25): ಬೆಳಗಾವಿ ಪಾಲಿಕೆ ಚುನಾವಣೆ ನಡೆದು ಬರೋಬ್ಬರಿ 17 ತಿಂಗಳ ನಂತರ ಮೇಯರ್‌, ಉಪಮೇಯರ್‌ ಚುನಾವಣೆ ಮುಂಬರುವ ಫೆಬ್ರವರಿ 6 ರಂದು ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕ್ಕೇರಿರುವ ನಡುವೆಯೇ ಮೇಯರ್‌, ಉಪಮೇಯರ್‌ ಚುನಾವಣೆ ಬಂದಿದೆ. ಇದರಿಂದಾಗಿ ಬೆಳಗಾವಿ ಪಾಲಿಕೆಯತ್ತ ಎಲ್ಲರ ಚಿತ್ತ ಮೂಡಿಸಿದೆ. ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗ ಬ ಮಹಿಳೆಗೆ ಮೀಸಲಾಗಿದೆ. ಪಾಲಿಕೆಯ ಇತಿಹಾಸದಲ್ಲೇ ಇದೇ ಮೊಟ್ಟಮೊದಲ ಬಾರಿಗೆ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತಗಳೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಅಧಿಕಾರ ಅನುಭವಿಸುವ ಭಾಗ್ಯ ಕೂಡಿ ಬಂದಿರಲಿಲ್ಲ. ನಗರ ಸೇವಕರಾರ‍ಯರು ಪ್ರಮಾಣ ವಚನ ಸ್ವೀಕರಿಸಿದೇ 17 ತಿಂಗಳ ವನವಾಸ ಅನುಭವಿಸುವಂತಾಯಿತು. ಅಧಿಕಾರ ಇದ್ದೂ ಇಲ್ಲದಂತಹ ಪರಿಸ್ಥಿತಿ ಎದುರಾಗಿತ್ತು.

ಕಳೆದ 2021 ಸೆಪ್ಟಂಬರ್‌ 3 ರಂದು ಪಾಲಿಕೆಗೆ ಚುನಾವಣೆ ನಡೆದಿತ್ತು. 6 ರಂದು ಫಲಿತಾಂಶ ಪ್ರಕಟವಾಗಿತ್ತು. ಆದರೆ ಓಬಿಸಿ ಮೀಸಲಾತಿ ಸರ್ವೋಚ್ಚ ನ್ಯಾಯಾಲಯ ಮೆಟ್ಟಿಲೇರಿರುವುದರಿಂದ ಮೇಯರ್‌ ಚುನಾವಣೆ ವಿಳಂಬವಾಗಿತ್ತು. ಕೊನೆಗೂ ನಗರಾಭಿವೃದ್ಧಿ ಇಲಾಖೆ ಮೀಸಲಾತಿ ವಿಚಾರದಲ್ಲಿದ್ದ ಗೊಂದಲಕ್ಕೆ ತೆರೆ ಎಳೆಯುವ ಮೂಲಕ 21ನೇ ಅವಧಿ ಅನ್ವಯವೇ ಮೇಯರ್‌, ಉಪಮೇಯರ್‌ ಚುನಾವಣೆಯನ್ನು ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಅವರು ಮೇಯರ್‌, ಉಪಮೇಯರ್‌ ಚುನಾವಣೆಯನ್ನು ಫೆಬ್ರವರಿ 6 ರಂದು ನಿಗದಿ ಪಡಿಸಿದ್ದಾರೆ. ಪಾಲಿಕೆ ಮೇಯರ್‌, ಉಪಮೇಯರ್‌ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಇದೀಗ ಪಾಲಿಕೆಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ವರ್ಷವಾದರೂ ಸಿಗದ ಅಧಿಕಾರ ಭಾಗ್ಯ, Belagavi ಪಾಲಿಕೆ ಸದಸ್ಯರಿಂದ ಕೇಕ್ ಕತ್ತರಿಸಿ ವ್ಯಂಗ್ಯ

ಮುಗ್ಗರಿಸಿದ ಎಂಇಎಸ್‌:

ಪಾಲಿಕೆಯ ಮೇಲೆ ಬಿಗಿ ಹಿಡಿತ ಸಾಧಿಸಿದ್ದ ಎಂಇಎಸ್‌ ಈ ಬಾರಿ ಚುನಾವಣೆಯಲ್ಲಿ ಸಂಪೂರ್ಣವಾಗಿ ಮುಗ್ಗರಿಸಿದೆ. ಪಕ್ಷದ ಚಿಹ್ನೆ ಮೇಲೆ ಚುನಾವಣೆ ಎದುರಿಸುವುದು ಸವಾಲಾಗಿತ್ತು. ಆದರೆ, ಶಾಸಕ ಅಭಯ ಪಾಟೀಲ ಅವರ ಪ್ರಯತ್ನದ ಫಲವಾಗಿ 58 ಸ್ಥಾನಗಳ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿಹಾಡಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲೇ ಅತೀ ಹೆಚ್ಚು ಅಂದರೆ 25 ವಾರ್ಡುಗಳ ಪೈಕಿ 22 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌, ಎಂಇಎಸ್‌ ಹೀನಾಯ ಸೋಲನುಭವಿಸಿವೆ.

ಮೇಯರ್‌ ಯಾರು?

ಪಾಲಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಬಿಜೆಪಿಯ ಮೊದಲ ಮೇಯರ್‌ ಯಾರಾಗುತ್ತಾರೆ? ಮೇಯರ್‌ ಸ್ಥಾನ ಬೆಳಗಾವಿ ಉತ್ತರಕ್ಕೋ? ಬೆಳಗಾವಿ ದಕ್ಷಣಕ್ಕೂ? ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿಯಲ್ಲಿ ಮೇಯರ್‌, ಉಪಮೇಯರ್‌ ಆಕಾಂಕ್ಷಿಗಳಿದ್ದರೂ ಎಲ್ಲಿಯೂ ಬಹಿರಂಗವಾಗಿ ತಾವು ಆಕಾಂಕ್ಷಿ ಎಂದು ಯಾರೂ ಹೇಳಿಕೆ ನೀಡಿಲ್ಲ. ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.ಈ ಮೊದಲು ಭಾಷಾ, ಗುಂಪುಗಾರಿಕೆ ಆಧಾರದ ಮೇಲೆ ಚುನಾವಣೆ ನಡೆಯುತ್ತ ಬಂದಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪಕ್ಷದ ನಾಯಕರು, ಶಾಸಕರ ಸೂಚನೆ ಮೇರೆಗೆ ನಗರ ಸೇವಕರು ತಮ್ಮನ್ನು ಸಮಾಜ ಸೇವೆಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಮೇಯರ್‌ ಸ್ಥಾನ ದೊರೆಯಲಿದ್ದು, ಉಪಮೇಯರ್‌ ಸ್ಥಾನ ಉತ್ತರಕ್ಕೆ ದೊರೆಯುವ ಸಾಧ್ಯತೆಗಳಿವೆ.

ಪ್ರಮುಖವಾಗಿ ಮೇಯರ್‌ ಸ್ಥಾನಕ್ಕೆ ವಾರ್ಡ್‌ ನಂ.43ರ ನಗರ ಸೇವಕಿ ವಾಣಿ ವಿಲಾಸ ಜೋಶಿ ಮತ್ತು ವಾರ್ಡ್‌ ನಂ. 50ರ ನಗರಸೇವಕಿ ಸಾರಿಕಾ ಪಾಟೀಲ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಇಲ್ಲಿ ವಾಣಿ ಜೋಶಿ ಅವರು ಶಾಸಕ ಅಭಯ ಪಾಟೀಲರ ರಾಜಕೀಯಬದ್ಧ ವೈರಿ ಎಂಇಎಸ್‌ ಕಿರಣ ಸಾಯಿನಾಯ್ಕ ಅವರ ಪತ್ನಿಯನ್ನು ಪರಾಭವಗೊಳಿಸಿದ್ದಾರೆ. ಇಲ್ಲಿ ಕಿರಣ ಸಾಯನಾಯ್ಕ ಮೇಯರ್‌ ಆಗಿ ಮತ್ತು ಅವರ ಪತ್ನಿ ಕೂಡ ಹಿಂದೊಮ್ಮೆ ನಗರಸೇವಕಿಯಾಗಿದ್ದವರು. ಇದರ ಜೊತೆಗೆ ಕಿರಣ ಸಾಯನಾಯ್ಕ ಅಭಯ ಪಾಟೀಲರ ವಿರುದ್ಧ ಹಿಂದೆ ನಡೆದ ವಿಧಾನಸಭೆ ಚುನಾವಣೆಗೆ ನಿಂತು ಹೀನಾಯವಾಗಿ ಸೋತಿದ್ದರು. ಇನ್ನು ಸಾರಿಕಾ ಪಾಟೀಲ ಬಿಜೆಪಿಯ ಹಳೆಯ ಕಾರ್ಯಕರ್ತೆ. ಹೀಗಾಗಿ ಇವರಿಬ್ಬರಲ್ಲಿ ಮೇಯರ್‌ ಹುದ್ದೆ ಯಾರ ಪಾಲಾಗುತ್ತದೆ ಎನ್ನುವುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.