ಅಪ್ಪಳಿಸಲಿದೆ 3ನೇ ಅಲೆ - ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಎಚ್ಚರ!
- ಅಕ್ಟೋಬರ್ ತಿಂಗಳಲ್ಲಿ ಕೋವಿಡ್ 19ರ ಮೂರನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ
- ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಸೂಚನೆ
ಹುಣಸೂರು (ಸೆ.30): ಅಕ್ಟೋಬರ್ ತಿಂಗಳಲ್ಲಿ ಕೋವಿಡ್ 19ರ (Covid 19 ) ಮೂರನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ (HP Manjunath) ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಬುಧವಾರ ಕೋವಿಡ್ ನಿಯಂತ್ರಣಕ್ಕಾಗಿ ತಾಲೂಕು ಆಡಳಿತ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತಾಗಿನ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಒಟ್ಟು ಮತದಾರರ ಪೈಕಿ ಶೇ. 20 ಮಂದಿ ಇನ್ನೂ ಮೊದಲ ಹಂತದ ಕೋವಿಡ್ ಲಸಿಕೆ (Covid Vaccine) ಪಡೆದಿಲ್ಲದಿರುವುದು ತಿಳಿದುಬಂದಿದೆ. ಪಟ್ಟಣದ ಶಬ್ಬೀರ್ ನಗರ, ಮುಸ್ಲಿಂ ಬ್ಲಾಕ್ ಮತ್ತು ಗ್ರಾಮಾಂತರ ಭಾಗಗಳಲ್ಲಿ ಗಿರಿಜನ ಹಾಡಿಗಳಲ್ಲಿ (Tribal camp) ಇನ್ನಿತರ ಕೆಲ ಗ್ರಾಮಗಳಲ್ಲಿ ಲಸಿಕಾ ಪ್ರಮಾಣ ಕನಿಷ್ಟಮಟ್ಟದಲ್ಲಿದೆ. ತಾಲೂಕಿನ ಅಧಿಕಾರಿಗಳು ಲಸಿಕೆ ಪಡೆಯದ ಜನರ ಮನವೊಲಿಕೆಗಾಗಿ ಸಾಕಷ್ಟುಪ್ರಯತ್ನ ಪಟ್ಟಿದ್ದಾರೆ. ಇನ್ನು ಏನು ಮಾಡುವುದು ಎಂದು ತಿಳಿಯದೇ ಕಂಗಾಲಾಗಿದ್ದಾರೆ. ಸರ್ಕಾರವೇ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು. ಪಡಿತರ ಪೂರೈಕೆ (PDS) ನಿರ್ಬಂಧ ಮುಂತಾದ ಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಅನುಸರಿಸಲು ಸಾಧ್ಯವಿಲ್ಲವೆಂದರು.
ಕರುನಾಡಿಗೆ ಮತ್ತೆ ಶುರುವಾಯ್ತಾ ಡೆಡ್ಲಿ ಕೊರೋನಾ ಆತಂಕ
ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಮಾತನಾಡಿ, ತಾಲೂಕಿನ ಗ್ರಾಮಾಂತರ ಭಾಗದಲ್ಲಿ 18 ವರ್ಷ ಮೇಲ್ಪಟ್ಟಒಟ್ಟು 1.41ಲಕ್ಷ ಮತದಾರರ ಪೈಕಿ 1.17 ಲಕ್ಷ ಮಂದಿ ಮೊದಲ ಹಂತದ ಡೋಸ್ ಪಡೆದಿದ್ದಾರೆ. ಹುಣಸೂರಿನಲ್ಲಿ 35 ಸಾವಿರ ಮಂದಿ 18 ವರ್ಷ ಮೇಲ್ಪಟ್ಟವರ ಪೈಕಿ 21 ಸಾವಿರ ಮಂದಿ ಲಸಿಕೆ (ಫಸ್ಟ್ ಡೋಸ್) ಪಡೆದಿದ್ದಾರೆ. ತಾಲೂಕಿನ ನೇರಳಕುಪ್ಪೆ, ಮನುಗನಹಳ್ಳಿ, ಗಾಗೇನಹಳ್ಳಿ, ದೇವರಹಳ್ಳಿ ಗ್ರಾಮಗಳಲ್ಲಿ ಶೇ. 100ರ ಪ್ರಮಾಣದಲ್ಲಿ ಲಸಿಕೆ ಹಾಕಲಾಗಿದೆ. ಕಾಮಗೌಡನಹಳ್ಳಿಯಲ್ಲಿ 285 ಮಂದಿ ಮತದಾರರಿದ್ದು, ಈವರೆಗೆ ಒಬ್ಬರೂ ಲಸಿಕೆ ಹಾಕಿಸಿಕೊಂಡಿಲ್ಲ. ಈ ಗ್ರಾಮದಲ್ಲಿ ನಾಳೆಯಿಂದ ಲಸಿಕೆ ಹಾಕುವ ಒಂದು ತಂಡವನ್ನು ನಿರಂತರವಾಗಿ ಇರಿಸಿ ಲಸಿಕೆ ಹಾಕಿಸಲಾಗುವುದು ಎಂದರು.
ತಾಪಂ ಇಒ (EO) ಎಚ್.ಡಿ. ಗಿರೀಶ್ ಮಾತನಾಡಿ, ಗ್ರಾಪಂ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ ಅಂಗನವಾಡಿ ಕಾರ್ಯಕರ್ತಯರು ಮನೆಮನೆ ಸಮೀಕ್ಷೆ ನಡೆಸಲು ಸೂಚಿಸಿದೆ. ಅಂತೆಯೇ ಕಾರ್ಯಕರ್ತೆಯರು ಮನೆ ಮೆನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳದವರ ಕುರಿತಾದ ಮಾಹಿತಿ ಪಡೆದು ಮೂರು ದಿನಗಳೊಳಗೆ ನೀಡಲಿದೆ. ನಂತರದ ದಿನಗಳಲ್ಲಿ ಲಸಿಕೆ ಒದಗಿಸುವ ಕಾರ್ಯ ಇನ್ನಷ್ಟುಚುರುಕುಗೊಳಿಸಲಾಗುವುದು ಎಂದರು.
ಪ್ರಭಾರ ತಹಸೀಲ್ದಾರ್ ಯದುಗಿರೀಶ್, ನೋಡಲ್ ಅಧಿಕಾರಿಗಳಾದ ಮಮತಾ, ರಶ್ಮಿ, ನಗರಸಭೆ ಎಇಇ ಮಂಜುನಾಥ್ ಇದ್ದರು.