Asianet Suvarna News Asianet Suvarna News

Bengaluru: 1,000 ಕೋಟಿ ಮೊತ್ತದ ಬಿಡಿಎ ಸ್ವತ್ತು ಮರು ವಶ

*  ಬೆಂಗಳೂರಿನ ವಿವಿಧೆಡೆ ಒತ್ತುವರಿಯಾಗಿದ್ದ ಎಕರೆಗಟ್ಟಲೇ ಜಾಗ ಜಪ್ತಿ
*  ಮೂಲೆ ಸೈಟ್‌ ಹರಾಜಿನಿಂದ 500 ಕೋಟಿ ರು. ಲಾಭ
*  ಸಂಪನ್ಮೂಲ ಸಂಗ್ರಹಕ್ಕೆ ಹೆಚ್ಚು ಆದ್ಯತೆ
 

BDA 1000 Crore Rs of Property Seized in Bengaluru grg
Author
Bengaluru, First Published Jan 16, 2022, 5:31 AM IST

ಸಂಪತ್‌ ತರೀಕೆರೆ

ಬೆಂಗಳೂರು(ಜ.16): ಆರ್ಥಿಕ ಸಂಕಷ್ಟದಿಂದ ಹೊರ ಬರಲು ಹಗಲಿರುಳು ಕಸರತ್ತು ನಡೆಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಮೂಲೆ ನಿವೇಶನಗಳ ಮಾರಾಟದಿಂದ ಸಂಪನ್ಮೂಲ ಕ್ರೋಢಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಜೊತೆಗೆ ವಿವಿಧ ಬಡಾವಣೆಯಗಳಲ್ಲಿ ಒತ್ತುವರಿಯಾಗಿರುವ ಬಿಡಿಎ ಸ್ವತ್ತನ್ನು ಪುನಃ ಸ್ವಾಧೀನಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ ಸಾವಿರ ಕೋಟಿ ರುಪಾಯಿ ಮೌಲ್ಯದ ಭೂಮಿ(Land) ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಿಡಿಎ ನಿವೇಶನಗಳ ಮಾರಾಟದಿಂದ ಬರುವ ಆದಾಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಹೊಸ ದಾರಿಯನ್ನು ಕಂಡುಕೊಳ್ಳದ ಕಾರಣ ಆರ್ಥಿಕ ಸಂಕಷ್ಟದ ಹೊರೆ ಬೆನ್ನು ಹತ್ತಿತ್ತು. ಒಂದೂವರೆ ವರ್ಷದ ಹಿಂದೆ ಬಿಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮಹದೇವ ಅವರು ಮೂಲೆ ನಿವೇಶನಗಳ ಇ-ಹರಾಜಿನಿಂದ ಪ್ರಾಧಿಕಾರಕ್ಕೆ .1200 ಕೋಟಿಗೂ ಅಧಿಕ ಆದಾಯ(Revenue) ತಂದುಕೊಟ್ಟಿದ್ದರು.

BDA Website: ಸರ್ವೆ ನಂಬರ್ ಹಾಕಿದ್ರೆ ಒಂದೇ ಕ್ಲಿಕ್‌ನಲ್ಲಿ ಸೈಟ್‌ನ ಸಮಗ್ರ ಮಾಹಿತಿ!

ಆ ನಂತರ ಬಿಡಿಎ ನಗರದ ವಿವಿಧ ಬಡಾವಣೆಗಳಲ್ಲಿ ಒತ್ತುವರಿಯಾಗಿರುವ ಪ್ರಾಧಿಕಾರದ ಆಸ್ತಿ ವಶಕ್ಕೆ ಮುಂದಾಗಿದ್ದು, ಕಾರ್ಯಾಚರಣೆ ಆರಂಭಿಸಿತ್ತು. ಇತ್ತೀಚೆಗೆ ಆರ್‌ಎಂವಿ 2ನೇ ಹಂತದಲ್ಲಿರುವ ನಾಗಶೆಟ್ಟಿಹಳ್ಳಿಯ ಸರ್ವೇ ನಂ.71/3ರಲ್ಲಿ ಸುಮಾರು .30 ಕೋಟಿ ಮೌಲ್ಯದ 32 ಗುಂಟೆ ಭೂಮಿ, ರಾಜಾಜಿನಗರ 6ನೇ ಹಂತದಲ್ಲಿರುವ ಪ್ರಸನ್ನ ಚಿತ್ರಮಂದಿರದ ಬಳಿ ಒತ್ತುವರಿಯಾಗಿದ್ದ ಅಂದಾಜು .300 ಕೋಟಿ ಮೌಲ್ಯದ 2.20 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿತ್ತು.
ಜೆ.ಪಿ.ನಗರ ಆಲಹಳ್ಳಿಯಲ್ಲಿ .100 ಕೋಟಿ ಮೌಲ್ಯದ 4.20 ಎಕರೆ ಭೂಮಿ, ಎಚ್‌ಬಿಆರ್‌ ಬಡಾವಣೆಯ ಕಾಚರಕನಹಳ್ಳಿ ಸರ್ವೇ ನಂ.194ರಲ್ಲಿ .60 ಕೋಟಿ ಮೌಲ್ಯದ 1.23 ಎಕರೆ ಭೂಮಿ ಮತ್ತು ಯಶವಂತಪುರ ಹೋಬಳಿಯ ಉಲ್ಲಾಳು ಗ್ರಾಮದಲ್ಲಿ .40.57 ಕೋಟಿ ಮೌಲ್ಯದ 1.12 ಎಕರೆ ಮತ್ತು ಮತ್ತೊಂದೆಡೆ 1.28 ಎಕರೆ ಪ್ರದೇಶವನ್ನು ವಶಪಡಿಸಿಕೊಂಡಿತ್ತು.

ಹೀಗೆ ಬಿಡಿಎಂ ಲೇಔಟ್‌ 1ನೇ ಹಂತದ ಮಡಿವಾಳ, ಇಡಬ್ಲ್ಯೂಎಸ್‌ ಬಡಾವಣೆ, ಎಚ್‌ಬಿಆರ್‌ ಲೇಔಟ್‌, ಶಿವರಾಮ ಕಾರಂತ ಬಡಾವಣೆ, ಎಚ್‌ಎಎಲ್‌ ಬಡಾವಣೆ 2ನೇ ಹಂತದ ಕೋಡಿಹಳ್ಳಿ, ತಿಪ್ಪಸಂದ್ರ, ಬನಶಂಕರಿ 3ನೇ ಹಂತದ ಆವಲಹಳ್ಳಿ, ವಿಶ್ವೇಶ್ವರಯ್ಯ ಬಡಾವಣೆ, ಆರ್‌ಎಂವಿ 2ನೇ ಹಂತದ ಭೂಪಸಂದ್ರ, ಯಶವಂತಪುರ ಹೋಬಳಿಯ ಸೋಮಶೆಟ್ಟಿಹಳ್ಳಿ, ಜೆಪಿ ನಗರದ ಆಲಹಳ್ಳಿ, ಎಚ್‌ಬಿಆರ್‌ 2ನೇ ಹಂತದ ನಾಗವಾರ, ಬನಶಂಕರಿ 2ನೇ ಹಂತದ ಯಡಿಯೂರು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಒಟ್ಟು 12 ಎಕರೆಗೂ ಅಧಿಕ ಭೂಮಿ ಮತ್ತು 50/80, 40/60 ಮತ್ತು 30/40 ಸುತ್ತಳತೆಯ 10ಕ್ಕೂ ಹೆಚ್ಚು ನಿವೇಶನಗಳನ್ನು(Site) ವಶಕ್ಕೆ ಪಡೆಯುವಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯಶಸ್ವಿಯಾಗಿದೆ. ಈ ಎಲ್ಲ ಭೂಮಿ ಮತ್ತು ನಿವೇಶನಗಳ ಒಟ್ಟು ಮೊತ್ತ .1000 ಕೋಟಿಗೂ ಅಧಿಕ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ಅವರು ‘ಕನ್ನಡಪ್ರಭ’ಕ್ಕೆ(Kannada Prabha) ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ನಷ್ಟದಲ್ಲಿದ್ದು ಸ್ವಂತ ಸಂಪನ್ಮೂಲದಲ್ಲಿ ತನ್ನದೇ ಬಡಾವಣೆಗಳಿಗೆ ಮೂಲಭೂತ ಸೌಕರ್ಯ(Infrastructure) ಒದಗಿಸಲು ಪರದಾಡುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಂಪನ್ಮೂಲ ಕ್ರೋಢಿಕರಣದ ಮೂಲಕ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಬಿಡಿಎ ಬಡಾವಣೆ ನಿವಾಸಿಗಳಲ್ಲಿ ಸಂತಸಕ್ಕೆ ಕಾರಣವಾಗಿವೆ.

1600 ಕೋಟಿ ಆದಾಯ: 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(Bengaluru Development Authority) ಕಳೆದ ಒಂದೂವರೆ ವರ್ಷದಲ್ಲಿ 1500ಕ್ಕೂ ಹೆಚ್ಚು ಮೂಲೆ ನಿವೇಶನಗಳನ್ನು ಇ-ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಿದ್ದು, ಅಂದಾಜು .1600 ಕೋಟಿಗೂ ಅಧಿಕ ಆದಾಯ ಪ್ರಾಧಿಕಾರಕ್ಕೆ ಬಂದಿದೆ. ಈ ಪೈಕಿ .500 ಕೋಟಿಗೂ ಅಧಿಕ ಲಾಭವನ್ನು ಬಿಡಿಎ ಗಳಿಸಿದೆ.

Encroachment on Govt Land: ಬಿಡಿಎಯಿಂದ 300 ಕೋಟಿ ಮೌಲ್ಯದ ಆಸ್ತಿ ಒತ್ತುವರಿ ತೆರವು

ಸಾವಿರ ಎಕರೆ ವಶ ಬಾಕಿ

ವಿವಿಧ ಯೋಜನೆಗಳಿಗಾಗಿ ಬಿಡಿಎ ಗುರುತಿಸಿರುವ ಸುಮಾರು 2200 ಎಕರೆ ಪ್ರದೇಶದ ಪೈಕಿ ಈಗಾಗಲೇ ಭೂ ಮಾಲಿಕರಿಗೆ ಪರಿಹಾರ ಕೊಟ್ಟಿದ್ದು, ವಶಕ್ಕೆ ಪಡೆಯಬೇಕಿರುವ ಒಂದು ಸಾವಿರ ಎಕರೆ ಬಾಕಿ ಇದೆ. ಇದು ಅಭಿವೃದ್ಧಿಪಡಿಸಿರುವ ಏರಿಯಾ ಆಗಿದ್ದು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನು 1200 ಎಕರೆ ಪ್ರದೇಶಕ್ಕೆ ಪರಿಹಾರ ಕೊಟ್ಟಿಲ್ಲ. ಬಿಡಿಎ ಆಸ್ತಿಯಲ್ಲಿ ಮನೆ, ಕಟ್ಟಡಗಳನ್ನು ಕಟ್ಟಿಕೊಂಡಿರುವ 70 ಸಾವಿರಕ್ಕೂ ಅಧಿಕ ನಿವೇಶನಗಳು ಇವೆ. 12 ವರ್ಷಕ್ಕೂ ಮೇಲ್ಪಟ್ಟು ವಾಸವಿರುವ ಮನೆಗಳನ್ನು ಇಂದಿನ ಮಾರುಕಟ್ಟೆದರದಂತೆ ಒಂದು ಮೊತ್ತವನ್ನು ನಿಗದಿಪಡಿಸಿ ಅಕ್ರಮ ಸಕ್ರಮ ಯೋಜನೆಯಡಿ ಫಲಾನುಭವಿಗಳಿಗೇ ಮಾರಾಟ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಡಿಎ ಸ್ವತ್ತನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮಕೈಗೊಳ್ಳುತ್ತೇವೆ. ಈಗಾಗಲೇ ಸಾವಿರ ಕೋಟಿಗೂ ಅಧಿಕ ಮೌಲ್ಯದ ಭೂಮಿ ವಶಕ್ಕೆ ಪಡೆದಿದ್ದು, ಒತ್ತುವರಿದಾರರ ತೆರವು ಕಾರ್ಯಾಚರಣೆ ಮುಂದುವರೆಸುತ್ತೇವೆ. ಪ್ರಾಧಿಕಾರವನ್ನು ನಷ್ಟದಿಂದ ಲಾಭದೆಡೆಗೆ ಕೊಂಡೊಯ್ಯಲು ಸಂಕಲ್ಪ ಮಾಡಿದ್ದು, ಹಂತ ಹಂತವಾಗಿ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುತ್ತೇವೆ ಅಂತ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios