BDA Website: ಸರ್ವೆ ನಂಬರ್ ಹಾಕಿದ್ರೆ ಒಂದೇ ಕ್ಲಿಕ್ನಲ್ಲಿ ಸೈಟ್ನ ಸಮಗ್ರ ಮಾಹಿತಿ!
*ನೂತನ ಮಾಹಿತಿ ಕೊಂಡಿ ಸೇರ್ಪಡೆಗೆ ಮುಂದಾದ ಬಿಡಿಎ
*ಸಿಂಗಲ್ ಬಟನ್ ಒತ್ತಿದ್ರೆ ಪೂರ್ಣ ಮಾಹಿತಿ
*ನಿವೇಶನದ ಚೆಕ್ಕುಬಂದಿ, ಯಾರು, ಯಾವಾಗ ಸೈಟ್ ಖರೀದಿಸಿದ್ದರು,
*ನಿವೇಶನದ ಮೇಲೆ ಕೇಸ್ ಇದ್ದರೆ ಅದರ ಮಾಹಿತಿ ತಕ್ಷಣ ಲಭ್ಯ
ಬೆಂಗಳೂರು (ಜ. 9): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ(BDA) ನಿವೇಶನ ಖರೀದಿಸುವ ಗ್ರಾಹಕರು ವಂಚನೆಗೊಳಗಾಗದಂತೆ ಬಿಡಿಎ ಅಧಿಕೃತ ವೆಬ್‌ಸೈಟ್‌ನಲ್ಲಿ (Website) ನೂತನ ವಿಭಾಗವನ್ನು(ಮಾಹಿತಿ ಕೊಂಡಿ) ಅಭಿವೃದ್ಧಿಪಡಿಸಿ ಸೇರ್ಪಡೆ ಮಾಡಲು ಮುಂದಾಗಿದೆ. ಈ ಮಾಹಿತಿ ಕೊಂಡಿಯ ಮೇಲೆ ಕ್ಲಿಕ್ಕಿಸಿದರೆ ಗ್ರಾಹಕರು ದೇಶದ ಯಾವುದೇ ಮೂಲೆಯಲ್ಲಿದ್ದರೂ ತಾವು ಖರೀದಿಸಬೇಕೆಂದಿರುವ ನಿವೇಶನದ ಸಮಗ್ರ (Site Information) ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.
ಬಿಡಿಎ ವ್ಯಾಪ್ತಿಯ ಅಂಜನಾಪುರ ಬಡಾವಣೆ, ಬನಶಂಕರಿ, ನಾಡಪ್ರಭು ಕೆಂಪೇಗೌಡ ಲೇಔಟ್, ಅರ್ಕಾವತಿ, ಕೋರಮಂಗಲ, ಶಿವರಾಮ ಕಾರಂತ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ನಿವೇಶನಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ: Bengaluru: ಒಂದು ಲಕ್ಷ ಮನೆ ನಿರ್ಮಾಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ: ಸೋಮಣ್ಣ
ಬಿಡಿಎ ನಿವೇಶನ ನೋಂದಣಿಯಾದ (Registration) ಕೂಡಲೇ ಬಿಡಿಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗುವಂತೆ ಬಿಡಿಎ ಮತ್ತು ಸಬ್‌ರಿಸ್ಟ್ರಾರ್ (Sb Registrar) ಕಚೇರಿಯೊಂದಿಗೆ ಒಂಡಂಬಡಿಕೆ ಮಾಡಿಕೊಳ್ಳಲು ಚಿಂತನೆ ನಡೆಸಿದೆ. ಹೀಗಾಗಿ, ಯಾರು, ಯಾವಾಗ ನೋಂದಣಿ ಮಾಡಿಸಿಕೊಂಡರೂ ಇದರ ಬಗ್ಗೆ ಕ್ಷಣ ಮಾತ್ರದಲ್ಲಿ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಾಗಲಿದೆ. ಒಂದು ವೇಳೆ ನಿವೇಶನದ ಸರ್ವೆ ನಂಬರ್ ಮತ್ತು ನಿವೇಶನ ಈ ಹಿಂದೆಯೇ ರಿಜಿಸ್ಟ್ರರ್ ಆಗಿದ್ದರೆ ಅದರ ಮಾಹಿತಿಯೂ ಸಿಗಲಿದ್ದು, ಗ್ರಾಹಕರು ವಂಚಕರಿಂದ ಮೋಸ ಹೋಗುವುದನ್ನು ಇದರಿಂದ ತಡೆಯಬಹುದಾಗಿದೆ.
ನಿವೇಶನದ ಮಾಹಿತಿ ಲಭ್ಯ:
ನಿವೇಶನಗಳ ಪೂರ್ಣ ಮಾಹಿತಿಗಾಗಿ ಎನ್‌ಕಂಬ್ರೆನ್ಸ್ ಸರ್ಟಿಫಿಕೇಟ್(ಇಸಿ) ಪಡೆಯಬೇಕಾಗಿತ್ತು. ಈಗ ಇಸಿಗಳ ಬದಲಿಗೆ ವೆಬ್‌ಸೈಟ್‌ನಲ್ಲೇ ನಿವೇಶನದ ಸರ್ವೆ ನಂಬರ್ ನಮೂದಿಸಿ ಹುಡುಕಿದರೆ ಅದರ ನಾಲ್ಕೂ ದಿಕ್ಕುಗಳ ಮಾಲೀಕರು(ಚೆಕ್ಕುಬಂದಿ), ತಾವು ಖರೀದಿಸಬೇಕಿರುವ ಮತ್ತು ಖರೀದಿಸಿರುವ ನಿವೇಶನದ ಮಾಹಿತಿ ತೆರೆದುಕೊಳ್ಳುತ್ತದೆ. ಈ ಹಿಂದೆ ಯಾರು, ಯಾವಾಗ ಖರೀದಿಸಿದ್ದಾರೆ? ನಿವೇಶನದ ಬಗ್ಗೆ ತಕರಾರು ಇದ್ದಲ್ಲಿ ಪ್ರಕರಣ ನ್ಯಾಯಾಲಯದಲ್ಲಿದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ಸಿಗಲಿವೆ.
ಇದನ್ನೂ ಓದಿ: Corruption in BDA: ಬಹುಕೋಟಿ ಭೂ ಹಗರಣ ಕೇಸ್: ಭ್ರಷ್ಟರಿಗೆ ಎಸಿಬಿ ತನಿಖೆ ಬಿಸಿ!
ಲಕ್ಷಾಂತರ ರು. ಕೊಟ್ಟು ಬಿಡಿಎ ನಿವೇಶನ ಖರೀದಿಸಿದ ಗ್ರಾಹಕರಿಗೆ ತಾವು ಮೋಸ ಹೋಗಿರುವುದು ಗೊತ್ತಾಗದಂತೆ ವಂಚಕರು ವಂಚಿಸಿರುವ ನೂರಾರು ಪ್ರಕರಣಗಳು ಇವೆ. ನಿವೇಶನವನ್ನು ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಒಬ್ಬರು ಖರೀದಿಸಿರುತ್ತಾರೆ. ಅದರ ಬಗ್ಗೆ ಸರಿಯಾದ ಮಾಹಿತಿಯಿರುವುದಿಲ್ಲ. ಹೇಗಿದ್ದರೂ ಬಹು ವರ್ಷಗಳಿಂದ ಖಾಲಿಯಿದೆ ಎಂದು ಅರಿತು ಅದನ್ನು ಮಧ್ಯವರ್ತಿಗಳ ಮೂಲಕ ನಕಲಿ ದಾಖಲೆ ಸೃಷ್ಟಿಸಿ ಮತ್ಯಾರೋ ಮಾರಾಟ ಮಾಡಿರುತ್ತಾರೆ.
ಯಾರದೋ ನಿವೇಶನ ಮತ್ಯಾರೋ ಖರೀದಿಸುವುದು ಅಥವಾ ಮಾರಾಟ ಮಾಡುವುದು, ಖಾಲಿ ನಿವೇಶನಗಳನ್ನು ಪರಭಾರೆ ಮಾಡಿಕೊಳ್ಳುವುದು ಸಾಮಾನ್ಯವೆನ್ನುವಷ್ಟುನಡೆದಿವೆ. ಕೊನೆಗೆ ನಿವೇಶನದ ಮಾಲೀಕರು ಬಂದು ನೋಡಿದಾಗ ಅದು ಬೇರೆಯವರ ಪಾಲಾಗಿರುತ್ತದೆ. ಇಂತಹ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಇಂದಿಗೂ ವಿಚಾರಣೆಯಲ್ಲಿವೆ. ಇಂತಹ ವಂಚನೆ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನಿವೇಶನಗಳ ಸಮಗ್ರ ಮಾಹಿತಿ ಇರುವ ಹೊಸ ಆಯ್ಕೆ ಕೊಂಡಿಯನ್ನು ಸೇರ್ಪಡೆಗೊಳಿಸಿದೆ.
ಬಿಡಿಎ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಪ್ರಾಧಿಕಾರದ ಎಲ್ಲ ಬಡಾವಣೆಗಳ ನಿವೇಶನಗಳ ಸಂಪೂರ್ಣ ಮಾಹಿತಿ ಸಿಗುವಂತೆ ನೂತನ ಆಯ್ಕೆಯನ್ನು ಸೇರ್ಪಡೆಗೊಳಿಸಲಿದ್ದೇವೆ. ಈಗಾಗಲೇ ವಿವಿಧ ಬಡಾವಣೆಗಳ 15 ಸಾವಿರ ನಿವೇಶನಗಳ ಬಗ್ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದು, ಉಳಿದ ಮಾಹಿತಿಯನ್ನು ಹಂತ ಹಂತವಾಗಿ ಸೇರ್ಪಡೆ ಮಾಡುತ್ತೇವೆ. ಜನರು ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಮತ್ತು ನಿವೇಶನಗಳ ಮಾಹಿತಿ ಪಾರದರ್ಶಕವಾಗಿ ಸಿಗುವಂತೆ ಮಾಡಲು ಇದು ಸಹಾಯಕವಾಗಲಿದೆ.
- ಡಾ. ಎಚ್.ಆರ್. ಶಾಂತರಾಜು, ಬಿಡಿಎ ಅಭಿಯಂತರ ಸದಸ್ಯ