ಬೆಂಗಳೂರು(ಸೆ.27): ಮಳೆಗಾಲದಲ್ಲಿ ಕೆರೆಗಳ ನೀರು ತುಂಬಿ ಒಡೆದು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಮಳೆಗಾಲಕ್ಕೂ ಮುನ್ನ ನಗರದ ಆಯ್ದ ಕೆರೆಗಳ ಶೇ.50 ರಷ್ಟು ನೀರು ಖಾಲಿ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ಧಾರಾಕಾರ ಮಳೆಯಿಂದ ಪ್ರತಿ ವರ್ಷ ನಗರದಲ್ಲಿ ಒಂದಲ್ಲ ಒಂದು ಕೆರೆಗಳು ಒಡೆದು ಸುತ್ತಮುತ್ತ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಹೀಗಾಗಿ, ಪಾಲಿಕೆಯ ಆಯ್ದ ಕೆರೆಗಳ ಶೇ.50 ರಷ್ಟು ನೀರನ್ನು ಮಳೆಗಾಲಕ್ಕೂ ಖಾಲಿ ಮಾಡಿಟ್ಟುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಮುಂದಾಗಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಪಾಲಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ ಕೆರೆ ನೀರು ಖಾಲಿಗೆ ಬೇಕಾದ ಸಿದ್ಧತೆಗಳನ್ನು ಪಾಲಿಕೆ ಮಾಡಿಕೊಳ್ಳುವುದಕ್ಕೆ ಮುಂದಾಗುವ ಸಾಧ್ಯತೆ ಇದೆ.

ಕೆರೆಗಳ ನೀರು ಶೇ.50 ರಷ್ಟು ಖಾಲಿ ಮಾಡಿಟ್ಟುಕೊಳ್ಳುವುದು ಅಣೆಕಟ್ಟು ಮಾದರಿಯಲ್ಲಿ ಕೆರೆಗಳಿಗೆ ಗೇಟ್‌ ವ್ಯವಸ್ಥೆ ಮಾಡಿ ಕೊಳ್ಳಬೇಕಾಗಿದೆ. ಕೆರೆಗಳ ನೀರು ಖಾಲಿ ಮಾಡಿಟ್ಟುಕೊಳ್ಳುವುದರ ಜೊತೆಗೆ ಈ ನೀರು ಬೇರೆ ಕೆರೆಗಳಲ್ಲಿ ಸಂರಕ್ಷಣೆ ಹಾಗೂ ನಿರ್ದಿಷ್ಟ ಕೆರೆ ಭಾಗದಲ್ಲಿ ಅನಾಹುತ ತಪ್ಪಿಸುವ ವಿಷಯಗಳೂ ಸೇರಿವೆ. ಕೆರೆಗಳ ನೀರು ವೈಜ್ಞಾನಿಕವಾಗಿ ಹೊರಕ್ಕೆ ಬಿಡಬೇಕಾದರೆ, ಬೇಕಾದ ವ್ಯವಸ್ಥೆಗಳನ್ನೂ ಪಾಲಿಕೆ ಮಾಡಿಕೊಳ್ಳಬೇಕಿದೆ. ಅಪಾಯದ ಮಟ್ಟಗುರುತು ಮಾಡಿಕೊಂಡು ನೀರು ಹೊರಕ್ಕೆ ಬಿಡುವ ಬಗ್ಗೆಯೂ ಚರ್ಚೆ ನಡೆದಿದೆ.

ಬೆಂಗಳೂರಲ್ಲಿ ಸರ್ಕಾರದಿಂದಲೇ 535 ಎಕರೆ ಕೆರೆ ಜಾಗ ಒತ್ತುವರಿ!

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌, ಬಿಬಿಎಂಪಿಯ ಆಯ್ದ ಕೆರೆಗಳ ಶೇ.50 ನೀರು ಖಾಲಿ ಮಾಡಿಟ್ಟು ಕೊಳ್ಳುವಂತೆ ಕೆರೆ ವಿಭಾಗದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆರೆಗಳ ನೀರನ್ನು ಮಳೆಗಾಲಕ್ಕೂ ಮುನ್ನವೇ ಖಾಲಿ ಮಾಡುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಪ್ರಾಯೋಗಿಕ ಅನುಷ್ಠಾನ

ಶೇ.50 ರಷ್ಟು ನೀರು ಖಾಲಿ ಮಾಡುವ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವುದಕ್ಕೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇರುವ ಕಲ್ಕೆರೆ, ಉತ್ತರಹಳ್ಳಿ, ದೊರೆಕೆರೆ, ಮಹದೇವಪುರ ಕೆರೆ, ಕೂಡ್ಲುಚಿಕ್ಕರೆ, ಮಡಿವಾಳ, ಅಗರ, ಅಲ್ಲಾಳಸಂದ್ರ ಹಾಗೂ ರಾಚೇನಹಳ್ಳಿ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳುವ ಚಿಂತನೆ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.