Asianet Suvarna News Asianet Suvarna News

ಖಾಲಿ ಸೈಟ್ ಸ್ವಚ್ಛವಾಗಿ ಇಡದಿದ್ದರೆ ಭಾರೀ ದಂಡ!

ಖಾಲಿ ನಿವೇಶನಗಳಲ್ಲಿ ಕಸ ಇದ್ದಲ್ಲಿ ಭಾರೀ ದಂಡ ತೆರಬೇಕಾದೀತು. ಮಾಲಿಕರೇ ಎಚ್ಚರ!

BBMP Strict Action Against Garbage in Empty sites
Author
Bengaluru, First Published May 19, 2019, 10:14 AM IST

ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಮಾಲಿಕರು ಮುಂದಿನ 15 ದಿನಗಳೊಳಗೆ ತಮ್ಮ ನಿವೇಶನಗಳಲ್ಲಿ ಯಾವುದೇ ರೀತಿಯ ಕಸ, ಕಟ್ಟಡ ಅವಶೇಷ, ಗಿಡಗಂಟಿಗಳಿದ್ದರೆ ತೆರವುಗೊಳಿಸಿ. ಇಲ್ಲದಿದ್ದರೆ ಬಿಬಿಎಂಪಿಯೇ ತೆರವುಗೊಳಿಸಲಿದ್ದು, ಇದರ ವೆಚ್ಚವಾಗಿ ಮಾಲೀಕರು 25 ಸಾವಿರವನ್ನು ಪಾಲಿಕೆಗೆ ಕಟ್ಟಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಸುತ್ತೋಲೆ ಹೊರಡಿಸಿದ್ದಾರೆ.

ಅಷ್ಟೇ ಅಲ್ಲ, ಮಾಲಿಕರು ತಮ್ಮ ನೀವೇಶನಗಳನ್ನು ಸ್ವಚ್ಚಗೊಳಿಸದಿದ್ದರೆ ಒಮ್ಮೆ ಮಾತ್ರ ಬಿಬಿಎಂಪಿ ಸ್ವಚ್ಛಗೊಳಿಸಿ ವೆಚ್ಚ ವಸೂಲಿ ಮಾಡಲಿದೆ. ಆನಂತರ ನಿವೇಶನಗಳನ್ನು ಮಾಲಿಕರು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ, 50 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಮಾಲಿಕರಿಗೆ ನೋಟಿಸ್‌ ನೀಡಲು ದಂಡ ವಿಧಿಸಲು ಹಾಗೂ ಶಿಕ್ಷೆಗೆ ಗುರಿಪಡಿಸಲು ಆಯುಕ್ತರಿಗೆ ಕಾನೂನಾತ್ಮಕವಾದ ಅಧಿಕಾರವಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀರಣ (ಎನ್‌ಜಿಟಿ) ನಿರ್ದೇಶನದಂತೆ ರಚನೆಯಾಗಿರುವ ರಾಜ್ಯಮಟ್ಟದ ಸಮಿತಿಯು ನಗರದ ಖಾಲಿ ನಿವೇಶನಗಳಲ್ಲಿನ ಕಸ, ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳದ ಮಾಲಿಕರಿಗೆ ನೋಟಿಸ್‌ ನೀಡಿ ದಂಡ ವಿಧಿಸುವಂತೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಸುತ್ತೋಲೆ ಹೊರಡಿಸಿದ್ದು, ಪಾಲಿಕೆ ಆರೋಗ್ಯ ಪರಿವೀಕ್ಷಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು, (ಘನತ್ಯಾಜ್ಯ), ಅಧೀಕ್ಷಕ ಅಭಿಯಂತರರು, ಸಹ ಕಂದಾಯ ಅಧಿಕಾರಿಗಳು ಹಾಗೂ ವಲಯ ಅಪರ/ಜಂಟಿ ಆಯುಕ್ತರು ಸುತ್ತೋಲೆಯ ನಿಯಮಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕರ್ನಾಟಕ ಪುರಸಭಾ ನಿಯಮಗಳ ಅಧಿನಿಯಮ(ಕೆಎಂಸಿ) 1976ರ ಅಡಿಯಲ್ಲಿ ಕಸ, ಕಟ್ಟಡದ ಭಗ್ನಾವಶೇಷಗಳಿಂದ ಕೂಡಿರುವ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್‌ ನೀಡಿ, ತೆರವಿಗೆ ಸೂಚನೆ ನೀಡಬೇಕು. ಆ ಖಾಲಿ ನಿವೇಶನದಲ್ಲಿ ಕಸ ಹಾಕದಂತೆ ಸೂಚನ ಫಲಕವನ್ನು ನಿವೇಶನಗಳ ಮಾಲೀಕರೇ ಅಳವಡಿಸಬೇಕೆಂದು ಸೂಚಿಸಬೇಕು. ಸ್ವತ್ತಿನ ಮಾಲೀರು ನೋಟಿಸ್‌ಗೆ ಪ್ರತಿಕ್ರಿಯೆ ನೀಡದಿದ್ದಲ್ಲಿ ಪಾಲಿಕೆಯ ಪೌರ ಕಾರ್ಮಿಕರು ಕಸ, ಕಟ್ಟಡಗಳ ಅವಶೇಷಗಳನ್ನು ಒಮ್ಮೆ ತರವುಗೊಳಿಸಬೇಕು. ಅದಕ್ಕೆ ತಗಲುವ ವೆಚ್ಚ 25 ಸಾವಿರ ರು.ಗಳನ್ನು ದಂಡದ ರೂಪದಲ್ಲಿ ಮಾಲಿಕರಿಂದಲೇ ವಸೂಲಿ ಮಾಡಬೇಕು. ಸಂಬಂಧ ಪಟ್ಟಸಹ ಕಂದಾಯ ಅಧಿಕಾರಿಗಳು ದಂಡದ ಮೊತ್ತವನ್ನು ಕೆಎಂಸಿ ಕಾಯ್ದೆ ಕಲಂ 470ರಡಿ ಸ್ವತ್ತಿನ ಪಿಐಡಿ ಸಂಖ್ಯೆಗೆ ಕಂದಾಯ ಬಾಕಿಯೊಂದಿಗೆ ವಸೂಲಿ ಮಾಡುವಂತೆ ಸೂಚಿಸಿದ್ದಾರೆ.

ಠಾಣೆಗೆ ದೂರು ನೀಡಿ :  ಒಮ್ಮೆ ಪೌರ ಕಾರ್ಮಿಕರು ಸ್ವಚ್ಛ ಮಾಡಿದ ನಂತರವೂ ಮಾಲಿಕರು ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಯಥಾಸ್ಥಿತಿ ಮುಂದುವರೆಸಿದರೆ 50 ಸಾವಿರ ರು.ಗಳಿಂದ ಒಂದು ಲಕ್ಷ ರು.ಗಳವರೆಗೆ ದಂಡವನ್ನು ವಿಧಿಸಿ, ಆ ಮೊತ್ತವನ್ನು ನಿವೇಶನಗಳ ತೆರಿಗೆಯೊಂದಿಗೆ ಸೇರಿಸಿ ವಸೂಲಿಗೆ ಕ್ರಮ ಕೈಗೊಳ್ಳಿ. ಪಾಲಿಕೆಯಿಂದ ಒಂದೆರಡು ಬಾರಿ ಕಸ, ಕಟ್ಟಡ ಭಗ್ನಾವಶೇಷ, ಗಿಡಗಳನ್ನು ತೆರವುಗೊಳಿಸಿದಾಗಲೂ ನಿವೇಶನ ಮಾಲಿಕರು ತಾವಾಗಿ ತೆರವುಗೊಳಿಸದಿದ್ದರೆ ಅಂತಹ ಮಾಲಿಕರಿಗೆ ನೋಟಿಸ್‌ ಬಳಿಕ ಪೊಲೀಸ್‌ ಠಾಣೆಗೆ ಲಿಖಿತ ದೂರು ನೀಡಲು ಸೂಚಿಸಲಾಗಿದೆ. ಪಾಲಿಕೆಯ ಸೂಚನೆ ಮತ್ತು ಆದೇಶ ಉಲ್ಲಂಘಿಸಿರೆ ನಿವೇಶನಗಳ ಮಾಲೀಕರ ವಿರುದ್ಧ ಸಂಬಂಧಪಟ್ಟಅಧಿಕಾರಿಗಳು ದಂಡ ಪ್ರಕ್ರಿಯಾ ಸಂಹಿತೆ ಕಲಂ 200 ಅಡಿಯಲ್ಲಿ ಖಾಸಗಿ ದೂರು ಸಲ್ಲಿಸುವಂತೆ ಆಯುಕ್ತರು ಆದೇಶಿಸಿದ್ದಾರೆ.

Follow Us:
Download App:
  • android
  • ios