Asianet Suvarna News Asianet Suvarna News

Bengaluru : ಅನಧಿಕೃತ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ಆರಂಭಿಸಿದ ಬಿಬಿಎಂಪಿ

ಈಗಾಗಲೇ ರಾಜಕಾಲುವೆ ಒತ್ತುವರಿ ಸಮೀಕ್ಷೆ ಮತ್ತು ತೆರವು ಕಾರ್ಯಾಚರಣೆ ಮಾಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಸಾರ್ವಜನಿಕರು ಸರ್ಕಾರಿ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ಸಮೀಕ್ಷೆ ಮಾಡಲು ಮುಂದಾಗಿದೆ.

BBMP started survey of unauthorized religious buildings
Author
First Published Dec 6, 2022, 11:17 AM IST

ಬೆಂಗಳೂರು (ಡಿ.6): ರಾಜ್ಯ ರಾಜಧಾನಿಯಲ್ಲಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಲಿಕ್ಕೆ ಕಾರಣವಾಗಿದ್ದ ರಾಜಕಾಲುವೆಗಳ ಒತ್ತುವರಿ ಸಮೀಕ್ಷೆ ಮತ್ತು ತೆರವು ಕಾರ್ಯಾಚರಣೆ ಮಾಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ಸಮೀಕ್ಷೆ ಮಾಡಲು ಮುಂದಾಗಿದೆ.

ರಸ್ತೆ, ಪಾದಚಾರಿ ಮಾರ್ಗ, ಸರ್ಕಾರಿ ಖಾಲಿ ಸ್ಥಳಗಳು, ಬಿಬಿಎಂಪಿ ಅಥವಾ ಸರ್ಕಾರದ ಆವರಣ, ಮೈದಾನ, ರಸ್ತೆಗಳು, ಖಾಲಿ ಸ್ಥಳಗಳು, ಕೆರೆಗಳು, ಇತ್ಯಾದಿ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ದೇವಸ್ಥಾನಗಳನ್ನು ತರೆವುಗೊಳಿಸುವ ನಿಟ್ಟಿನಲ್ಲಿ ಸಮೀಕ್ಷೆಯನ್ನು ಆರಂಭಿಸಲಾಗಿದೆ. ಚುನಾವಣೆ ಹೊಸ್ತಿಲಲ್ಲೇ ಬೆಂಗಳೂರಿನ ಅನಧಿಕೃತ ಧಾರ್ಮಿಕ ಕಟ್ಟಡಗಳ ಸಮೀಕ್ಷೆಯನ್ನು ಮಾಡುತ್ತಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿನ ನಾಲ್ಕು ವಲಯ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದೆ. ಮಹಾದೇವಪುರ, ಆರ್.ಆರ್. ನಗರ, ಪೂರ್ವ ವಲಯ ಹಾಗೂ ದಕ್ಷಿಣ ವಲಯದ ಸಮೀಕ್ಷೆ ಮುಕ್ತಾಯಗೊಂಡಿದೆ. ಇನ್ನುಳಿದ ನಾಲ್ಕು ವಲಯಗಳಲ್ಲಿ ಸದ್ದಿಲ್ಲದೇ ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆಯನ್ನು ಕೈಗೆತ್ತಿಕೊಂಡಿದ್ದಾರೆ.

Bengaluru: ಜಯನಗರದ ರಸ್ತೆಗೆ ಖಳನಾಯಕ ಖ್ಯಾತಿಯ ವಜ್ರಮುನಿ ಹೆಸರು ನಾಮಕರಣ: ಇಂದು ಉದ್ಘಾಟನೆ

395 ಅನಧಿಕೃತ ಧಾರ್ಮಿಕ ಕೇಂದ್ರಗಳು ಪತ್ತೆ: ಒಟ್ಟಾರೆ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಧಾರ್ಮಿಕ ಕೇಂದ್ರಗಳ ಪೈಕಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಎಲ್ಲ ಮಾದರಿಯ ಧಾರ್ಮಿಕ ಕಟ್ಟಡಗಳನ್ನು ಇಲ್ಲಿ ಗುರುತಿಸಲಾಗುತ್ತಿದೆ. ಈವರೆಗೆ ಮಹಾದೇವಪುರ, ಆರ್.ಆರ್. ನಗರ, ಪೂರ್ವ ವಲಯ ಹಾಗೂ ದಕ್ಷಿಣ ವಲಯದ ಸಮೀಕ್ಷೆ ಮುಕ್ತಾಯಗೊಂಡಿದೆ. ಈ ನಾಲ್ಕು  ವಲಯಗಳಲ್ಲಿ ಒಟ್ಟು 395 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಪತ್ತೆ ಮಾಡಲಾಗಿದೆ. ಉಳಿದಂತೆ ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ, ಪಶ್ಚಿಮ ವಲಯಗಳಲ್ಲಿ ಸಮೀಕ್ಷೆ ಕಾರ್ಯ ಮುಂದುವರೆದಿದೆ. ಈವರೆಗೆ ಪೂರ್ಣಗೊಂಡ ಸಮೀಕ್ಷೆಯಲ್ಲಿ ಪೂರ್ವ ವಲಯದಲ್ಲಿ ಅತ್ಯಧಿಕವಾಗಿ 193 ಅನಧಿಕೃತ ಧಾರ್ಮಿಕ ಕಟ್ಟಡ ಪತ್ತೆಯಾಗಿವೆ. 

ಧಾರ್ಮಿಕ ಕಟ್ಟಡಗಳಿಗಾಗಿ ಪ್ರತ್ಯೇಕ ಕಾಯ್ದೆ ಇದೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಧಾರ್ಮಿಕ ಕಟ್ಟಡಗಳ ಕುರಿತಾಗಿ ಒಂದು ಪ್ರತ್ಯೇಕ ಕಾಯ್ದೆಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಒಂದೂವರೆ ವರ್ಷಗಳ ಹಿಂದೆಯೇ ಕಾಯ್ದೆಯನ್ನು ಸಿದ್ಧಪಡಿಸಿ ಸರ್ಕಾರ ಜಾರಿಗೊಳಿಸಿದೆ. ಜೊತೆಗೆ, ಯಾವ್ಯಾವ ಸರ್ಕಾರಿ ಸ್ಥಳಗಳಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಸ್ಥಳಾಂತರ ಮಾಡುವ ಕುರಿತು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯ ಮುಂದಿಟ್ಟು ಚರ್ಚೆ ಮಾಡಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ಸ್ಥಳಾಂತರಕ್ಕೆ ಅವಕಾಶ ಮತ್ತು ಅದಕ್ಕೆ ಸೂಕ್ತವಾಗುವ ಮಾರ್ಗಸೂಚಿಗಳನ್ನು ಕೂಡ ಸಿದ್ಧಪಡಿಸಲಾಗಿದೆ. ಕಂದಾಯ, ಮುಜರಾಯಿ ಇಲಾಖೆಯ ಕಾನೂನು ಮತ್ತು ನಿಯಮಾವಳಿ ಅನ್ವಯವೇ ಅನಧಿಕೃತ ಧಾರ್ಮಿಕ ಕೇಂದ್ರಗಳ ಸಮೀಕ್ಷೆ, ಸ್ಥಳಾಂತರ ಮತ್ತು ತೆರವು ಕಾರ್ಯದ ಬಗ್ಗೆ ಕ್ರಮ‌ ಕೈಗೊಳ್ಳಲಾಗುತ್ತದೆ. ಇದಕ್ಕೆ ಯಾವುದೇ ಡೆಡ್‌ಲೈನ್‌ ಅನ್ನು ಸರ್ಕಾರ ನೀಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

Bengaluru Lake survey; ಕರೆ ಸಮೀಕ್ಷೆಗೆ ಎನ್‌.ಆರ್‌.ರಮೇಶ್‌ ಆಗ್ರಹ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ

ವಲಯವಾರು ಅನಧಿಕೃತ ಧಾರ್ಮಿಕ ಕಟ್ಟಡಗಳ ಪತ್ತೆ ವಿವರ
• ಆರ್ ಆರ್ ನಗರ - 26
• ಪೂರ್ವ ವಲಯ - 193
• ಮಹಾದೇವಪುರ - 142
• ದಕ್ಷಿಣ ವಲಯ - 34
• ಒಟ್ಟು    = 395

Follow Us:
Download App:
  • android
  • ios