2 ವಾರ್ಡ್‌ನಲ್ಲಿ ನಡೆದ ಕ್ಯೂಆರ್‌ ಕೋಡ್‌ನೊಂದಿಗಿನ ಪ್ರಾಯೋಗಿಕ ಮರ ಗಣತಿ ಯಶಸ್ವಿ ಹಿನ್ನೆಲೆ, ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದ ಮರ ಗಣತಿ, ಟೆಂಡರ್‌ ಆಹ್ವಾನಿಸಲು ಪಾಲಿಕೆ ಸಿದ್ಧತೆ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮಾ.01):  ನಗರದ ಎರಡು ವಾರ್ಡ್‌ನಲ್ಲಿ ಕ್ಯೂಆರ್‌ ಕೋಡ್‌ನೊಂದಿಗೆ ನಡೆಸಲಾದ ಪ್ರಾಯೋಗಿಕ ಮರ ಗಣತಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಎಲ್ಲ 243 ವಾರ್ಡ್‌ಗಳಲ್ಲಿ ಮರ ಗಣತಿ ನಡೆಸಲು ಪಾಲಿಕೆ ಅರಣ್ಯ ವಿಭಾಗ ಸಿದ್ಧವಾಗಿದೆ. ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದ ಬೆಂಗಳೂರಿನ ಮರಗಳ ಗಣತಿ ಕೊನೆಗೂ ಆರಂಭಗೊಳ್ಳುವ ಲಕ್ಷಣ ಕಾಣುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಬಿಬಿಎಂಪಿಯ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಮರಗಳ ಗಣತಿ ನಡೆಸುವುದಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಪ್ರಾಯೋಗಿಕವಾಗಿ ನಡೆಸಿದ ಮಲ್ಲೇಶ್ವರ ಹಾಗೂ ಎಇಸಿಎಸ್‌ ಲೇಔಟ್‌ ವಾರ್ಡ್‌ನ ವರದಿ ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿ ಕೈ ಸೇರಿದೆ. ಈ ಆಧಾರದ ಮೇಲೆ ಎಲ್ಲ 243 ವಾರ್ಡ್‌ಗಳಲ್ಲಿ ಮರಗಣತಿ ಸಮೀಕ್ಷೆ ನಡೆಸುವುದಕ್ಕೆ ಟೆಂಡರ್‌ ಆಹ್ವಾನಿಸುವುದಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ದರ ಪಟ್ಟಿ ಸ್ವೀಕಾರ

ನಗರದಲ್ಲಿರುವ ಮರಗಳ ಸಮೀಕ್ಷೆ ನಡೆಸುವುದಕ್ಕೆ ಅರ್ಹ ಸಂಸ್ಥೆಗಳಿಂದ ದರ ಪಟ್ಟಿಸ್ವೀಕರಿಸಲಾಗಿದೆ. ಜಿಕೆವಿಕೆ, ಇಎಂಪಿಆರ್‌ಐ ಸೇರಿದಂತೆ ಮೊದಲಾದ ಸಂಸ್ಥೆಗಳು ದರ ಪಟ್ಟಿನೀಡಿವೆ. ಪ್ರತಿ ಮರದ ಗಣತಿ ಮತ್ತು ದತ್ತಾಂಶ ದಾಖಲು ಮಾಡುವುದಕ್ಕೆ ಕನಿಷ್ಠ .9ರಿಂದ ಗರಿಷ್ಠ .20 ರವರೆಗೆ ದರ ಪಟ್ಟಿಯನ್ನು ವಿವಿಧ ಸಂಸ್ಥೆಗಳು ನೀಡಿದ್ದು, ಅರ್ಹ ಮತ್ತು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುವ ಸಂಸ್ಥೆಗೆ ಮರಗಣತಿ ನಡೆಸುವುದಕ್ಕೆ ಅವಕಾಶ ನೀಡುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

ಹೊಸ ರಸ್ತೆ ಅಗೆದ ಟೆಲಿಕಾಂ ಕಂಪನಿ: ವ್ಯಕ್ತಿಯೊಬ್ಬ ಗುಂಡಿಯಲ್ಲೇ ಕುಳಿತು ಪ್ರತಿಭಟನೆ

1 ಕೋಟಿ ಮರ ಇರುವ ಅಂದಾಜು

ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್‌ನ ರಸ್ತೆ, ಉದ್ಯಾನವನ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಆವರಣದಲ್ಲಿರುವ ಮರಗಳು, ಖಾಸಗಿ ಆಸ್ತಿಯಲ್ಲಿರುವ ಮರಗಳು ಸೇರಿದಂತೆ ಒಟ್ಟಾರೆ 60 ಲಕ್ಷದಿಂದ 1 ಕೋಟಿವರೆಗೆ ಮರಗಳು ಇವೆ ಎಂದು ಬಿಬಿಎಂಪಿ ಅರಣ್ಯ ವಿಭಾಗ ಅಂದಾಜಿಸಿದೆ. ಸಮೀಕ್ಷೆ ವೇಳೆ ಕನಿಷ್ಠ 77 ಸೆಂ.ಮೀ. ದಪ್ಪ ಕಾಂಡ ಹಾಗೂ ಅದಕ್ಕಿಂತ ಹೆಚ್ಚು ಗಾತ್ರದ ಮರಗಳನ್ನು ಸಮೀಕ್ಷೆಗೆ ಒಳಪಡಿಸುವುದಕ್ಕೆ ನಿರ್ಧರಿಸಲಾಗಿದೆ. ಮರ ಗಣತಿಗೆ ಬಿಬಿಎಂಪಿಯು ಈಗಾಗಲೇ ಅನುದಾನ ಮೀಸಲಿಟ್ಟಿದ್ದು, ಸುಮಾರು 6ರಿಂದ 8 ಕೋಟಿ ರು. ಬೇಕಾಗಲಿದೆ. ಸಮೀಕ್ಷೆ ನಡೆಸುವುದಕ್ಕೆ ಬರೋಬ್ಬರಿ ಒಂದು ವರ್ಷದಿಂದ ಒಂದೂವರೆ ವರ್ಷ ಬೇಕು ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆ್ಯಪ್‌ ಆಧಾರಿತ ಗಣತಿ

ಮರ ಗಣತಿಗೆ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಸಹಯೋಗದಲ್ಲಿ ವಿಶೇಷ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಈ ಆ್ಯಪ್‌ನಲ್ಲಿ ಮರ ಹೆಸರು, ಎತ್ತರ, ಗಾತ್ರ, ವಯಸ್ಸು, ಯಾವ ಜಾತಿಗೆ ಸೇರಿದ ಮರ, ಮರದ ಸದೃಢತೆ ಸೇರಿದಂತೆ ಒಟ್ಟು 20 ರಿಂದ 25 ಅಂಶದ ಮಾಹಿತಿ ಸಂಗ್ರಹಿಸಲಾಗುತ್ತದೆ.

ಪ್ರಾಯೋಗಿಕ ಸಮೀಕ್ಷೆ ವೇಳೆ ಆ್ಯಪ್‌ ಎಲ್ಲ ಮೊಬೈಲ್‌ಗಳಲ್ಲಿ ಬಳಕೆ ಆಗುತ್ತಿರಲಿಲ್ಲ. ಕೇವಲ ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಇತ್ತು. ಅದನ್ನು ಕನ್ನಡ ಭಾಷೆಗೂ ಮಾಡಲಾಗಿದೆ. ಎಲ್ಲ ಮೊಬೈಲ್‌ಗಳಲ್ಲಿ ಕಾರ್ಯ ನಿರ್ವಹಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಇದೀಗ ಆ್ಯಪ್‌ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅರಣ್ಯ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ಮರಗಳಿಗೆ ಸಂಖ್ಯೆ, ಕ್ಯೂಆರ್‌ ಕೋಡ್‌

ಮರ ಗಣತಿ ವೇಳೆ ಪ್ರತಿ ಮರಕ್ಕೂ ನಂಬರ್‌ ನೀಡಲಾಗುತ್ತದೆ. ಜತೆಗೆ, ಗಣತಿಗೆ ಒಳಪಟ್ಟಪ್ರತಿ ಮರಕ್ಕೂ ಕ್ಯೂಆರ್‌ ಕೋಡ್‌ ಅಂಟಿಸಲಾಗುತ್ತದೆ. ಈ ಕ್ಯೂಆರ್‌ ಕೋಡನ್ನು ಯಾರು ಬೇಕಾದರೂ ತಮ್ಮ ಮೊಬೈಲ್‌ ಮೂಲಕ ಸ್ಕಾ್ಯನ್‌ ಮಾಡಬಹುದಾಗಿದೆ. ಸ್ಕಾ್ಯನ್‌ ಮಾಡಿದರೆ ಮರದ ಜಾತಿ ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ದೇಶದಲ್ಲಿ ಮೊದಲ ಬಾರಿಗೆ ಇಡೀ ನಗರದ ವ್ಯಾಪ್ತಿಯಲ್ಲಿರುವ ಮರಗಳ ಗಣತಿ ಮಾಡುವ ಕಾರ್ಯವನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಡಲಾಗುತ್ತಿದೆ. ಮರ ಗಣತಿ ಆರಂಭಿಸುವುದಕ್ಕೆ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮರ ಗಣತಿ ಕಾರ್ಯ ಪೂರ್ಣಗೊಳ್ಳುವುದಕ್ಕೆ ಸುಮಾರು 12ರಿಂದ 18 ತಿಂಗಳು ಕಾಲಾವಕಾಶ ಬೇಕಾಗಲಿದೆ ಅಂತ ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್‌ ತಿಳಿಸಿದ್ದಾರೆ. 

ಬೆಂಗ್ಳೂರಿನ ಧೂಳು ಸಮಸ್ಯೆ ನಿವಾರಿಸಲು ಬರಲಿವೆ ಸ್ಟ್ರಿಂಕ್ಲರ್‌ ವಾಹನ..!

ಬಜೆಟ್‌ನಲ್ಲಿ 2 ಹೊಸ ನರ್ಸರಿ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ಐದು ನರ್ಸರಿಗಳಿವೆ. ಈ ನರ್ಸರಿಗಳಲ್ಲಿ ವಾರ್ಷಿಕ ಸುಮಾರು 10 ಲಕ್ಷ ಸಸಿ ಬೆಳೆಸುವ ಸಾಮರ್ಥ್ಯವಿದೆ. ಇದರೊಂದಿಗೆ ಎರಡು ಹೊಸ ನರ್ಸರಿ ಆರಂಭಿಸುವುದಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ದಾಸರಹಳ್ಳಿ ಹಾಗೂ ಹೆಬ್ಬಾಳದಲ್ಲಿ ಒಟ್ಟು 5 ಲಕ್ಷ ಸಸಿ ಬೆಳೆಸುವ ಸಾಮರ್ಥ್ಯ ಇರುವ ನರ್ಸರಿ ಆರಂಭಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಒಟ್ಟು .6 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.