Asianet Suvarna News Asianet Suvarna News

ಕನ್ನಡ ಫಲಕ ಹಾಕದ ಬೆಂಗಳೂರಿನ 18,000 ಮಳಿಗೆಗೆ ನೋಟಿಸ್‌

ಬೆಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ವಾಣಿಜ್ಯ-ವ್ಯಾಪಾರಿಗಳಿದ್ದು, ಕನ್ನಡ ನಾಮಫಲಕ ಬಳಸದ 18 ಸಾವಿರಕ್ಕೂ ಅಧಿಕ ಮಂದಿಗೆ ನೋಟಿಸ್‌ ನೀಡಲಾಗಿದೆ. ಉಳಿದವರು ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಂಡಿದ್ದಾರೆ. ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಳ್ಳದಿದ್ದರೆ ಉದ್ದಿಮೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಲಾಗಿದೆ: ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್‌ ವಿಕಾಸ್‌ ಕಿಶೋರ್‌ ಚಂದ್ರ
 

BBMP Notice to 18000 Shops in Bengaluru For No Kannada Board grg
Author
First Published Jan 12, 2024, 6:35 AM IST | Last Updated Jan 12, 2024, 6:35 AM IST

ಬೆಂಗಳೂರು(ಜ.12):  ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆಯನ್ನು ಬಳಸದೇ ಇರುವ 18 ಸಾವಿರಕ್ಕೂ ಅಧಿಕ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗಿದೆ. 

ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸುವ ಸಂಬಂಧ ಸಭೆ ನಡೆಸಿದ್ದ ಬಿಬಿಎಂಪಿ ಮುಖ್ಯ ಆಯುಕ್ತರು ನಗರದ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲ ವಲಯದ ಉದ್ದಿಮೆಗಳನ್ನು ಜನವರಿ 15ರ ಒಳಗೆ ಸರ್ವೇ ನಡೆಸಿ ನೋಟಿಸ್‌ ನೀಡುವಂತೆ ಸೂಚಿಸಿದ್ದರು. ಅದರಂತೆ ಕಳೆದ ಒಂದು ವಾರದಲ್ಲಿ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಪರಿಶೀಲಿಸಿ ನೋಟಿಸ್‌ ನೀಡಲು ಆರಂಭಿಸಿದ್ದಾರೆ. ಈವರೆಗೆ ನಗರದಲ್ಲಿ ಒಟ್ಟು 18,886 ವಾಣಿಜ್ಯ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗಿದೆ. ಈ ಪೈಕಿ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ 3 ಸಾವಿರಕ್ಕೂ ಅಧಿಕ ನೋಟಿಸ್‌ ನೀಡಲಾಗಿದೆ. ಆರ್‌ಆರ್‌ನಗರ ವಲಯದಲ್ಲಿ ಕೇವಲ 324 ನೋಟಿಸ್‌ ನೀಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮುಖ್ಯ ಆರೋಗ್ಯಾಧಿಕಾರಿ ಡಾ। ಸೈಯದ್‌ ಸಿರಾಜುದೀನ್‌ ಮದಿನಿ ಮಾಹಿತಿ ನೀಡಿದ್ದಾರೆ.

Narayana Gowda: ಕರವೇ ನಾರಾಯಣ ಗೌಡರ ಮೊದಲ ಪ್ರತಿಭಟನೆ ಪ್ರಾರಂಭವಾಗಿದ್ದು ಹೇಗೆ? ಹಿಂದಿ ಭಾಷಿಕರನ್ನು ಕಂಡ್ರೆ ಆಗುವುದಿಲ್ವಾ ?

ನಾಮಫಲಕದಲ್ಲಿ ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆ ಮಾಡಬೇಕು. ಇಲ್ಲವಾದರೆ, ಉದ್ದಿಮೆ ರದ್ದುಪಡಿಸುವುದು ಹಾಗೂ ಉದ್ದಿಮೆ ಮುಚ್ಚುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗುತ್ತಿದೆ.

ಇನ್ನೊಂದು ದಿನ ಬಾಕಿ:

ಕನ್ನಡ ನಾಮಫಲಕ ಅಳವಡಿಕೆ ಮಾಡದವರಿಗೆ ನೋಟಿಸ್‌ ನೀಡಲು ಬಿಬಿಎಂಪಿ ಅಧಿಕಾರಿಗಳಿಗೆ ಶುಕ್ರವಾರ ಒಂದೇ ದಿನ ಬಾಕಿ ಇದೆ. ಎರಡನೇ ಶನಿವಾರ, ಭಾನುವಾರ ಹಾಗೂ ಸೋಮವಾರ ರಜೆ ದಿನವಾಗಿದೆ.

ಕನ್ನಡ ಫಲಕ ಅಭಿಯಾನ ಆರಂಭ : ಎಲ್ಲೆಡೆ ಕನ್ನಡ ಕಾರು ಓಡಾಟ

ಈ ಕುರಿತು ವಿವರಣೆ ನೀಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್‌ ವಿಕಾಸ್‌ ಕಿಶೋರ್‌ ಚಂದ್ರ, ನಗರದಲ್ಲಿ 50 ಸಾವಿರಕ್ಕೂ ಅಧಿಕ ವಾಣಿಜ್ಯ-ವ್ಯಾಪಾರಿಗಳಿದ್ದು, ಕನ್ನಡ ನಾಮಫಲಕ ಬಳಸದ 18 ಸಾವಿರಕ್ಕೂ ಅಧಿಕ ಮಂದಿಗೆ ನೋಟಿಸ್‌ ನೀಡಲಾಗಿದೆ. ಉಳಿದವರು ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಂಡಿದ್ದಾರೆ. ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಳ್ಳದಿದ್ದರೆ ಉದ್ದಿಮೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಕನ್ನಡ ನಾಮಫಲಕಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ ವಿವರ: ವಲಯ ನೋಟಿಸ್‌ ಸಂಖ್ಯೆ

ದಕ್ಷಿಣ 2,838
ಪೂರ್ವ 2,477
ಬೊಮ್ಮನಹಳ್ಳಿ 3,881
ದಾಸರಹಳ್ಳಿ 1,378
ಮಹದೇವಪುರ 3,442
ಪಶ್ಚಿಮ 2,718
ಯಲಹಂಕ 1,828
ಆರ್‌ಆರ್‌ನಗರ 324
ಒಟ್ಟು 18,886

Latest Videos
Follow Us:
Download App:
  • android
  • ios