Asianet Suvarna News Asianet Suvarna News

ಭಾರೀ ಮಳೆಯಾದರೆ ಬೆಂಗಳೂರಿನ 182 ಏರಿಯಾಗಳು ಡೇಂಜರಸ್

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇತ್ತ ಬೆಂಗಳೂರಿಗೂ ಕೂಡ ಎಚ್ಚರಿಕೆ ನೀಡಲಾಗಿದೆ. ಇದರ ನಡುವೆ 182 ಏರಿಯಾಗಳು ಡೇಂಜರಸ್ ಎಂದು ಗುರುತಿಸಲಾಗಿದೆ. 

BBMP identifies 182 flood critical spots
Author
Bengaluru, First Published Aug 10, 2019, 8:38 AM IST

ಬೆಂಗಳೂರು [ಆ.10]: ನಗರದಲ್ಲಿ ಧಾರಾಕಾರ ಮಳೆಯಾದರೆ ಸಂಕಷ್ಟಕ್ಕೆ ಸಿಲುಕಬಹುದಾದ 182 ಪ್ರದೇಶಗಳನ್ನು ಬಿಬಿಎಂಪಿ ಗುರುತಿಸಿದ್ದು, ಈ ಪೈಕಿ 28 ಪ್ರದೇಶಗಳನ್ನು ಅತೀ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದೆ. ಈ ಪ್ರದೇಶದಲ್ಲಿ ವಾಸಿಸುವ ಜನರ ರಕ್ಷಣೆಗೆ ಸುರಕ್ಷತಾ ಕ್ರಮ ಕೈಗೊಳ್ಳಲು ಸಜ್ಜಾಗಿರುವುದಾಗಿ ತಿಳಿಸಿದೆ.

ನಗರದಲ್ಲಿ ಮಳೆ ಬಂದರೆ ಸಾಕು ತಗ್ಗುಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದಕ್ಕೆ ಪರಿಹಾರ ಕಂಡು ಕೊಳ್ಳುವ ಉದ್ದೇಶದಿಂದ ಬಿಬಿಎಂಪಿ ಕೆಎಸ್‌ಎನ್‌ಡಿಎಂಸಿ ಸಹಯೋಗದಲ್ಲಿ ಸಮೀಕ್ಷೆ ಮಾಡಿದ್ದು, 182 ಪ್ರವಾಹ ಉಂಟಾಗುವ ಪ್ರದೇಶಗಳನ್ನು ಗುರುತಿಸಿದೆ. ವೃಷಭಾವತಿ ರಾಜಕಾಲುವೆ ಹರಿಯುವ ರಾಜಾರಾಜೇಶ್ವರಿನಗರ, ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯದಲ್ಲಿಯೇ ಅತಿ ಹೆಚ್ಚು ಮಳೆಹಾನಿ ಪ್ರದೇಶಗಳಿವೆ ಎಂದು ಗುರುತಿಸಲಾಗಿದೆ.

182 ಮಳೆಹಾನಿ ಪ್ರದೇಶಗಳಲ್ಲಿ 28 ಅತೀ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದ್ದು, ಈ ಪೈಕಿ 18 ಅತೀ ಸೂಕ್ಷ್ಮ ಪ್ರದೇಶದಲ್ಲಿ ನೀರಿನ ಮಟ್ಟಅಳೆಯುವ ಸಂವೇದಕ (ಸೆನ್ಸರ್‌) ಅಳವಡಿಸಲಾಗಿದೆ. ಉಳಿದ 10 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಶೀಘ್ರ ಸೆನ್ಸರ್‌ ಅಳವಡಿಕೆಗೆ ಪಾಲಿಕೆ ತೀರ್ಮಾನಿಸಿದೆ.

ಸೆನ್ಸಾರ್‌: ಪ್ರತಿ ಸೆನ್ಸಾರ್‌ಗೆ .35 ಸಾವಿರ ವೆಚ್ಚ ಮಾಡಿ ರಾಜಕಾಲುವೆಗಳಲ್ಲಿ ಕೆಎಸ್‌ಎನ್‌ಡಿಎಂಸಿ ಅಳವಡಿಕೆ ಮಾಡುತ್ತಿದೆ. ಸೆನ್ಸಾರ್‌ ಸೋಲಾರ್‌ ಪ್ಯಾನಲ್‌ ವಿದ್ಯುತ್‌ ಶಕ್ತಿ ಮೂಲಕ ಕಾರ್ಯನಿರ್ವಹಿಸಲಿದ್ದು, ಪ್ರತಿನಿತ್ಯ ಕೆಎಸ್‌ಎನ್‌ಡಿಎಂಸಿ ನಿಯಂತ್ರಣ ಕೊಠಡಿಗೆ ರಾಜಕಾಲುವೆ ನೀರಿನ ಮಟ್ಟದ ಬಗ್ಗೆ ಮಾಹಿತಿ ನೀಡಲಿದೆ. ಪ್ರವಾಹ ಉಂಟಾಗಲಿದೆ ಎಂಬ ಮಾಹಿತಿ ತಿಳಿದ ಕೂಡಲೇ ಆ ಸ್ಥಳದ ಬಗ್ಗೆ ಎಚ್ಚರಿಕೆ ಸಂದೇಶ ಕೆಎಸ್‌ಎನ್‌ಡಿಎಂಸಿಗೆ ರವಾನಿಸಲಿದೆ. ಆ ಸಂದೇಶವನ್ನು ಕೆಎಸ್‌ಎನ್‌ಡಿಎಂಸಿ ಅಧಿಕಾರಿ ಸಿಬ್ಬಂದಿ ಬಿಬಿಎಂಪಿಗೆ ನೀಡುತ್ತಾರೆ. ಬಿಬಿಎಂಪಿ ತಕ್ಷಣ ಪರಿಹಾರ ಕಾರ್ಯಕ್ಕೆ ಸಜ್ಜುಗೊಳ್ಳಲಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜತೆಗೆ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದ್ದ ಕಸವನ್ನು ತೆರವುಗೊಳಿಸಲು ಈಗಾಗಲೇ ಐದು ಕಡೆ ಟ್ರಾಶ್‌ ಬ್ಯಾರಿಯರ್‌ (ಕಸ ತಡೆಯುವ ಹಗುರ ಅಲ್ಯೂಮಿನಿಯಂ ಬಲೆ) ಅಳವಡಿಸಲಾಗಿದೆ. ಉಳಿದ ಎಲ್ಲ ಕಡೆ ಟ್ರಾಶ್‌ ಬ್ಯಾರಿಯರ್‌ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಮಾಹಿತಿ ನೀಡಿದರು.

ತಾತ್ಕಾಲಿಕ ಕೊಠಡಿ ಸ್ಥಾಪನೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಅನಾಹುತ ನಿವಾರಣೆಗೆ ಈಗಾಗಲೇ 9 ಕಡೆ ಶಾಶ್ವತ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ. ಇದೀಗ ಆಯಾ ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತಾತ್ಕಾಲಿಕ ನಿಯಂತ್ರಣಾ ಕೊಠಡಿಗಳಲ್ಲಿ ತುರ್ತು ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಯಂತ್ರಗಳು, ಸಲಕರಣೆಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮರ ತೆರವಿಗೆ 28 ತಂಡ:

ಮಳೆಗಾಲದಲ್ಲಿ ಧರೆಗುರುಳುವ ಮರಗಳನ್ನು ತೆರವುಗೊಳಿಸಲು ಈಗಾಗಲೇ 21 ತಂಡಗಳಿವೆ. ಇದೀಗ ಹೆಚ್ಚುವರಿಯಾಗಿ 7 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮರಗಳನ್ನು ತೆರವುಗೊಳಿಸಲು ಬೇಕಾದ ಸಲಕರಣೆ ನೀಡುವುದರ ಜತೆಗೆ ಕಟಾವು ಮಾಡಿದ ಮರದ ತುಂಡುಗಳನ್ನು ಸಾಗಿಸಲು ವಾಹನಗಳನ್ನು ಕೂಡಾ ನಿಗದಿ ಮಾಡಲಾಗಿದೆ ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

120 ಮಿ.ಮೀ ಹೆಚ್ಚು ಮಳೆಯಾದರೆ ಹಾನಿ ಖಚಿತ

ಬಿಬಿಎಂಪಿ ಈಗಾಗಲೇ ಮಳೆ ಹಾನಿ ಪ್ರದೇಶದಲ್ಲಿ ಹಲವಾರು ಪರಿಹಾರ ಕಾಮಗಾರಿ ಮಾಡಿರುವುದಾಗಿ ಹೇಳಿದರೂ ತಗ್ಗು ಪ್ರದೇಶದಲ್ಲಿ ಕಟ್ಟಡ, ಮೈದಾನ, ಬಸ್‌ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಇನ್ನಿತರ ಜನವಸತಿ ಪ್ರದೇಶಗಳನ್ನು ನಿರ್ಮಿಸಿದ್ದರಿಂದ 24 ಗಂಟೆಯಲ್ಲಿ 120 ಮಿ.ಮೀ.ಗೂ ಹೆಚ್ಚು ಮಳೆ ಸುರಿದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗಲಿದೆ ಎಂದು ಎಚ್ಚರಿಕೆ ಸಂದೇಶವನ್ನು ನೀಡಿದೆ.

ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಬಿಬಿಎಂಪಿಯು ಮಳೆಗಾಲದಲ್ಲಿ ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವ 1 ಸಾವಿರಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಪರಿಹಾರ ಕಾಮಗಾರಿ ಪೂರ್ಣಗೊಳಿಸಲಾಗಿದೆ.

-ಗಂಗಾಂಬಿಕೆ, ಮೇಯರ್‌.

ಪ್ರವಾಹ ಉಂಟಾಗುವ ಸ್ಥಳಗಳ ವಿವರ

ವಲಯ    ಪ್ರವಾಹ ಸಾಧ್ಯತೆ ಸ್ಥಳ

ಪೂರ್ವ    11

ಪಶ್ಚಿಮ    33

ದಕ್ಷಿಣ    26

ಯಲಹಂಕ    5

ಮಹದೇವಪುರ    15

ಬೊಮ್ಮನಹಳ್ಳಿ    7

ಆರ್‌.ಆರ್‌.ನಗರ    36

ದಾಸರಹಳ್ಳಿ    27

ಕೋರಮಂಗಲ ವ್ಯಾಲಿ    22

ಒಟ್ಟು    182

28 ಅತೀ ಸೂಕ್ಷ್ಮ ಪ್ರದೇಶಗಳು

ಎಚ್‌ಎಂಟಿ ಲೇಔಟ್‌, ಇಸ್ರೋ ಲೇಔಟ್‌, ಕಲ್ಯಾಣನಗರ, ಕಾವೇರಿಪುರ, ಶಿವಾಜಿನಗರ, ಕಾಟನ್‌ಪೇಟೆ, ಮತ್ತಿಕೆರೆ, ಡಾ.ರಾಜಕುಮಾರ್‌ ರಸ್ತೆ, ಗಾಳಿ ಆಂಜನೇಯ ದೇವಸ್ಥಾನ, ಶ್ರೀನಿವಾಸನಗರ, ಅಶ್ವತ್ಥನಗರ, ಪೈ ಲೇಔಟ್‌, ಕಲ್ಲಪ್ಪ ಲೇಔಟ್‌, ಭೈರವೇಶ್ವರ ಕೈಗಾರಿಕಾ ಪ್ರದೇಶ, ನಾಗರತ್ನಮ್ಮ ಲೇಔಟ್‌, ಜ್ಞಾನಜ್ಯೋತಿನಗರ, ಲಗ್ಗೆರೆ, ಆರ್‌.ಆರ್‌.ನಗರ, ಕೃಷ್ಣಪ್ಪ ಗಾರ್ಡ್‌ನ್‌, ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣ ಹಾಗೂ ಸೀಲ್‌್ಕ ಬೋರ್ಡ್‌ ಸಹ ಅತೀ ಸೂಕ್ಷ್ಮ ಮಳೆಹಾನಿ ಪ್ರದೇಶದ ಪಟ್ಟಿಯಲ್ಲಿವೆ.

Follow Us:
Download App:
  • android
  • ios