ಬೆಂಗಳೂರಿನಲ್ಲಿ 53 ಅಂಡರ್ ಪಾಸ್‌ಗಳ ಪರಿಶೀಲನೆಗೆ ಬಿಬಿಎಂಪಿ ಸಜ್ಜು
ನಗರದ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ನಡೆದ ದುರ್ಘಟನೆ ಬಳಿಕ ಪಾಲಿಕೆ ಅಧಿಕಾರಿಗಳು ವಿವಿಧ ಕಡೆಗಳಲ್ಲಿರುವ ಅಂಡರ್‌ಪಾಸ್‌ಗಳ ಪರಿಶೀಲನೆ ಮುಂದುವರೆಸಿದ್ದು, ಸದಾಶಿವ ನಗರದ ಕಾವೇರಿ ಜಂಕ್ಷನ್ ಅಂಡರ್ ಪಾಸ್ ಹಾಗೂ ಮುಖ್ಯಮಂತ್ರಿಗಳ ಕಾವೇರಿ ನಿವಾಸಕ್ಕೆ ಸಮೀಪದಲ್ಲಿರುವ ಲೀ ಮೆರಿಡಿಯನ್ ಅಂಡರ್ ಪಾಸ್‌ಗಳು ಅಪಾಯಕಾರಿಯಾಗಿವೆ ಎಂದು ಗುರುತಿಸಿದ್ದಾರೆ.
ಬೆಂಗಳೂರು (ಮೇ.24): ನಗರದ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ನಡೆದ ದುರ್ಘಟನೆ ಬಳಿಕ ಪಾಲಿಕೆ ಅಧಿಕಾರಿಗಳು ವಿವಿಧ ಕಡೆಗಳಲ್ಲಿರುವ ಅಂಡರ್‌ಪಾಸ್‌ಗಳ ಪರಿಶೀಲನೆ ಮುಂದುವರೆಸಿದ್ದು, ಸದಾಶಿವ ನಗರದ ಕಾವೇರಿ ಜಂಕ್ಷನ್ ಅಂಡರ್ ಪಾಸ್ ಹಾಗೂ ಮುಖ್ಯಮಂತ್ರಿಗಳ ಕಾವೇರಿ ನಿವಾಸಕ್ಕೆ ಸಮೀಪದಲ್ಲಿರುವ ಲೀ ಮೆರಿಡಿಯನ್ ಅಂಡರ್ ಪಾಸ್‌ಗಳು ಅಪಾಯಕಾರಿಯಾಗಿವೆ ಎಂದು ಗುರುತಿಸಿದ್ದಾರೆ.
ನಗರದಲ್ಲಿರುವ 18 ರೈಲ್ವೆ ಅಂಡರ್ ಪಾಸ್ ಸೇರಿದಂತೆ ಎಲ್ಲಾ 53 ಅಂಡರ್ ಪಾಸ್‌ಗಳ ಸ್ಥಿತಿಗತಿ ಪರಿಶೀಲಿಸಲು ಪಾಲಿಕೆ ನಿರ್ಧರಿಸಿದ್ದು, ಮಂಗಳವಾರ ಮ್ಯಾಜಿಕ್ ಬ್ಯಾಕ್ಸ್ ಎಂದು ಪ್ರಸಿದ್ಧಿಯಾಗಿರುವ ಕಾವೇರಿ ಜಂಕ್ಷನ್ ಅಂಡರ್ ಪಾಸ್, ಲಿ ಮೆರಿಡಿಯನ್ ಅಂಡರ್ ಪಾಸ್, ಮತ್ತಿಕೆರೆ ರಸ್ತೆ ಅಂಡರ್‌ಪಾಸ್, ನ್ಯೂಬಿಇಎಲ್ ಅಂಡರ್ ಪಾಸ್, ಆನಂದ್ ನಗರ ಅಂಡರ್ ಪಾಸ್ ಹಾಗೂ ಸುಜಾತಾ ಚಿತ್ರಮಂದಿರ ಬಳಿಯ ಅಂಡರ್ ಪಾಸ್‌ಗಳ ವರದಿಯನ್ನು ತಯಾರಿಸಲಾಗಿದೆ.
ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಫುಲ್ ಚಾರ್ಜ್!
ಸದಾಶಿವನಗರ ಹಾಗೂ ಲೀ ಮೆರಿಡಿಯನ್ ಅಂಡರ್ ಪಾಸ್‌ನಲ್ಲಿ ಮಳೆ ನೀರು ಹೊರ ಹೋಗುವುದಕ್ಕೆ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಉಳಿದ ನಾಲ್ಕು ಅಂಡರ್ ಪಾಸ್‌ಗಳಲ್ಲಿ ಕೆಲವು ಸಣ್ಣ ಪುಟ್ಟದುರಸ್ತಿ ಕಾಮಗಾರಿಗಳನ್ನು ನಡೆಸಬೇಕಿದೆ. ಆದರೆ, ವಾಹನ ಸಂಚಾರಕ್ಕೆ ತೊಂದರೆ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದೆಹಲಿ ಮಾದರಿಯಲ್ಲಿ ಮೇಲ್ಚಾವಣೆ: ಕಾವೇರಿ ಜಂಕ್ಷನ್ ಅಂಡರ್ ಪಾಸ್ ಹಾಗೂ ಲೀ ಮೆರಿಡಿಯನ್ ಅಂಡರ್ ಪಾಸ್‌ಗೆ ಮಳೆ ನೀರು ಹೋಗಿ ಸೇರದಂತೆ ದೆಹಲಿ ಮಾದರಿಯಲ್ಲಿ ಅಂಡರ್ ಪಾಸ್‌ಗೆ ಮೇಲ್ಚಾವಣಿ ಹಾಕಲು ತೀರ್ಮಾನಿಸಲಾಗಿದೆ. ರಸ್ತೆಯಲ್ಲಿ ಬಿದ್ದ ಮಳೆ ನೀರು ಅಂಡರ್ ಪಾಸ್ ಒಳಗೆ ಇಳಿಯದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಇಂದು ವರದಿ ಬಹಿರಂಗ: ಕೆ.ಆರ್.ಸರ್ಕಲ್ ಸೇರಿದಂತೆ ಈಗಾಗಲೇ 7 ಅಂಡರ್ ಪಾಸ್‌ಗಳ ವರದಿ ಸಿದ್ಧಪಡಿಸಲಾಗಿದೆ. ಬುಧವಾರ ಮತ್ತೆ ಎಂಟು ಅಂಡರ್ ಪಾಸ್‌ಗಳ ವರದಿ ಬಹಿರಂಗಪಡಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ: ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನರ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದೆವು. ಶೇ.50ಕ್ಕೂ ಹೆಚ್ಚು ಒತ್ತುವರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿದ್ದೆವು. ಇದೀಗ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.
ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಇದು ಸೂಚನೆ ಅಲ್ಲ, ಎಚ್ಚರಿಕೆ: ಸಿದ್ದರಾಮಯ್ಯ
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರು ನಗರದಲ್ಲಿ ಮಳೆಯಿಂದ ಆಗುವ ಹಾನಿ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನೀರು ನಿಂತ ಕೆಳ ಸೇತುವೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ. ಜತೆಗೆ ಅವುಗಳನ್ನು ವೈಜ್ಞಾನಿಕವಾಗಿ ಸರಿಪಡಿಸುವಂತೆಯೂ ತಿಳಿಸಲಾಗಿದೆ.
ಚರಂಡಿ ಮಾರ್ಗಗಳಲ್ಲಿ ಹೂಳೆತ್ತಿ ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ಮಾಡಬೇಕು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಒತ್ತುವರಿ ತೆರವು, ತಡೆ ಗೋಡೆ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಒತ್ತುವರಿ ತೆರವು ವಿರುದ್ಧ ಯಾರಾರಯರು ನ್ಯಾಯಾಲಯಕ್ಕೆ ಹೋಗಿದ್ದಾರೋ ಅದರ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಕಾನೂನು ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.