ಈಗಾಗಲೇ ಸರ್ಕಾರ ನೀಡಿರುವ ಜಿಎಸ್‌ಟಿ ಸಂಕಷ್ಟದಿಂದ ಪರದಾಡುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಇದೀಗ ಬಿಬಿಎಂಪಿಯಿಂದ ಮತ್ತೊಂದು ಆಘಾತ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಫುಟ್‌ಪಾತ್ ವ್ಯಾಪಾರಿಗಳನ್ನು ಬಿಬಿಎಂಪಿ ಒಕ್ಕಲೆಬ್ಬಿಸುತ್ತಿದೆ. ಆರಂಭದಲ್ಲಿ ರಾಜರಾಜೇಶ್ವರಿನಗರ ವಲಯದಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ.

ಬೆಂಗಳೂರು (ಜು.24): ರಾಜ್ಯದಲ್ಲಿ ಈಗಾಗಲೇ ಸಣ್ಣ ವ್ಯಾಪಾರಿಗಳಿಗೆ ಸರ್ಕಾರದಿಂದ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವಂತೆ ನೋಟೀಸ್ ನೀಡುವ ಮೂಲಕ ದಿನವಹಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವವರನ್ನು ಸಂಕಷ್ಟಕ್ಕೆ ದೂಡಿತ್ತು. ಆದರೆ, ಇದೀಗ ಬಿಬಿಎಂಪಿ ಫುಟ್‌ಪಾತ್‌ನಲ್ಲಿ ಅಂಗಡಿ, ಮುಂಗಟ್ಟು, ತಳ್ಳುಗಾಡಿ ಹಾಗೂ ಇತರೆ ರೀತಿಗಳಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತೊಂದು ಶಾಕ್ ನೀಡಿದೆ.

ಬೆಂಗಳೂರು ನಗರದಲ್ಲಿ ಪಾದಚಾರಿ ಹಕ್ಕುಗಳ ಪಾಲನೆ ಮತ್ತು ಸಾರ್ವಜನಿಕ ಮಾರ್ಗಗಳ ಸ್ವಚ್ಛತೆಯ ಅಂಗವಾಗಿ ಬಿಬಿಎಂಪಿ ಪಾದಚಾರಿ ಮಾರ್ಗ (ಫುಟ್ ಪಾತ್) ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಕಳೆದ 15 ದಿನಗಳಿಂದ ಫುಟ್ ಪಾತ್‌ ವ್ಯಾಪಾರಿಗಳ ಮೇಲೆ ನಿಗಾ ಇಡುತ್ತಿರುವ ಬಿಬಿಎಂಪಿ, ಪಾಲಿಕೆಯ 8 ವಲಯಗಳ ವಿವಿಧೆಡೆ ಫುಟ್‌ಪಾತ್ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದೆ. ಇದೀಗ ಮುಂದಿನ ಹಂತದಲ್ಲಿ ರಾಜರಾಜೇಶ್ವರಿನಗರ ವಲಯದಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆಯ ಮೇರೆಗೆ ಈ ಕ್ರಮ ಕೈಗೊಂಡಿದ್ದು, ಎಲ್ಲೆಲ್ಲಿ ಫುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ಪಾಲಿಕೆ ಅಧಿಕಾರಿಗಳು ಈಗಾಗಲೇ ಗುರುತಿಸಿದ್ದಾರೆ. ಈ ಕುರಿತು ವಲಯ ಆಯುಕ್ತ ಸತೀಶ್ ಅವರು ಸ್ಪಷ್ಟ ಸೂಚನೆ ನೀಡಿದ್ದು, ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವು ಮಾಡದಿದ್ದರೆ, ನಾಳೆ ಬೆಳಿಗ್ಗೆಯಿಂದ ಬಿಬಿಎಂಪಿ ತನ್ನ ತಾಂತ್ರಿಕ ತಂಡ ಹಾಗೂ ಜೆಸಿಬಿ ಇನ್ನಿತರೆ ತಂಡದೊಂದಿಗೆ ಆಗಮಿಸಿ ತೆರವು ಕಾರ್ಯಾಚರಣೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜರಾಜೇಶ್ವರಿನಗರ ವಲಯ ಕಾರ್ಯಾಚರಣೆಯ ವ್ಯಾಪ್ತಿ:

  • ಜಯಣ್ಣ ವೃತ್ತದಿಂದ ಕೆಂಪೇಗೌಡ ಡಬ್ಬಲ್ ರಸ್ತೆವರೆಗೆ
  • ಕೆಂಪೇಗೌಡ ಡಬ್ಬಲ್ ರಸ್ತೆಯಿಂದ ಚನ್ನಸಂದ್ರ ಮುಖ್ಯರಸ್ತೆವರೆಗೆ

ಕೆಂಗೇರಿ ವಿಭಾಗದ ಪ್ರದೇಶಗಳು:

  • ಕೆಂಗೇರಿ 1ನೇ 'ಡಿ' ಮುಖ್ಯರಸ್ತೆ (ಹೊಯ್ಸಳ ವೃತ್ತದ ಹತ್ತಿರ)
  • 1ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ (ಫುಡ್ ಪ್ಯಾಲೇಸ್) ಮತ್ತು 8ನೇ ಅಡ್ಡರಸ್ತೆ
  • 1ನೇ ‘ಡಿ’ ಮುಖ್ಯರಸ್ತೆಯಿಂದ ಕೆಂಗೇರಿ ಉಪನಗರದವರೆಗೆ

ಪಾಲಿಕೆ ಈಗಾಗಲೇ ಫುಟ್ ಪಾತ್ ವ್ಯಾಪಾರಿಗಳಿಗೆ ನೋಟಿಸ್ ನೀಡಿ, ಸ್ವಯಂ ತೆರವು ಮಾಡಬೇಕೆಂದು ಸೂಚನೆ ನೀಡಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶುಕ್ರವಾರ ಈ ರೀತಿಯ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಪ್ರಕಟಿಸಿದೆ. ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ನಾಳೆಯಿಂದ ರಾಜರಾಜೇಶ್ವರಿ ನಗರ ವಲಯದಲ್ಲಿ ತೀವ್ರ ಕ್ರಮ ಕೈಗೊಳ್ಳಲಿದೆ. ಸ್ವಯಂ ತೆರವುಗೈದರೆ ಸುಲಭ, ಇಲ್ಲವೇ ಪಾಲಿಕೆ ತೆರವು ಮಾಡಲಿದೆ.

ಜಿಎಸ್‌ಟಿ ನೋಟೀಸ್‌ನಿಂದ ಸಂಕಷ್ಟದಲ್ಲಿರುವ ವ್ಯಾಪಾರಿಗಳು:

ಈಗಾಗಲೇ 40 ಲಕ್ಷ ರೂ.ಗಿಂತ ಅಧಿಕ ವ್ಯಾಪಾರ ವಹಿವಾಟು ಮಾಡಿದಂತಹ ಸಣ್ಣ ವ್ಯಾಪಾರಿಗಳಿಗೆ ನೋಟೀಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಗೂಗಲ್‌ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಎಲ್ಲ ಮಾದರಿಯ ಸ್ಕ್ಯಾನರ್‌ಗಳನ್ನು ತೆಗೆದು ನಗದು ರೂಪದ ವ್ಯವಹಾರಕ್ಕೆ ಮುಂದಾಗಿದ್ದಾರೆ. ಇಲ್ಲಿ ವ್ಯಾಪಾರಿಗಳು ಕೇವಲ ಹಣ ವಹಿವಾಟು ಮಾಡಿದ್ದಾರೆಯೇ ಹೊರತು ಅವರಿಗೆ ಲಾಭವಾಗಿಲ್ಲ. ಇನ್ನು ಕೆಲವರು ಹಣ ವರ್ಗಾವಣೆಗೆ ವ್ಯಾಪಾರಿಗಳ ಖಾತೆಯನ್ನೂ ಬಳಕೆ ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ನಗರದ ತರಕಾರಿ-ಹಣ್ಣಿನ ವ್ಯಾಪಾರಿಗಳು, ಟೀ ಅಂಗಡಿ, ಹಾಲಿನ ಬೂತ್, ಪೆಟ್ಟಿ ಅಂಗಡಿಗಳು ಸೇರಿದಂತೆ ವಿವಿಧ ಸಣ್ಣಪುಟ್ಟ ಅಂಗಡಿಗಳ ಮಾಲೀಕರಿಗೆ ಜಿಎಸ್‌ಟಿ ಪಾವತಿಗೆ ನೋಟೀಸ್ ನೀಡಲಾಗಿದೆ. ಈ ಸಂಕಷ್ಟದಿಂದ ನಿನ್ನೆಯಷ್ಟೇ ಪಾರಾಗಿದ್ದಾರೆ. ಜೊತೆಗೆ, ಇದೀಗ ಜಿಎಸ್‌ಟಿ ನೋಂದಣಿ ಕಡ್ಡಾಯ ಮಾಡಲಾಗಿದೆ. ವ್ಯಾಪಾರಿಗಳು ಸರ್ಕಾರದ ಜಿಎಸ್‌ಟಿ ಪಾವತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವಾಗ ಬಿಬಿಎಂಪಿ ಫುಟ್‌ಪಾತ್ ವ್ಯಾಪಾರಿಗಳಿಗೆ ಯಾವುದೇ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಒಕ್ಕಲೆಬ್ಬಿಸಿ ದುಡಿಮೆಯನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.